ವಿನಯ್ ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು ದಶಕಗಳೇ ಕಳೆದಿದ್ದರೂ, ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿಲ್ಲ. ಅದಕ್ಕೆ ತಕ್ಕಂತೆ ವಿನಯ್ ಕೂಡಾ ಸ್ಟಾರ್ ಅಥವಾ ಹೀರೋಯಿಸಂ ಮೆರೆಸೋ ಚಿತ್ರಗಳನ್ನು ಮಾಡ್ತಿಲ್ಲ. ಇದುವರೆಗೆ ಮಾಡಿರುವ ಚಿತ್ರಗಳೆಲ್ಲ ಕ್ಯಾರೆಕ್ಟರ್ ಓರಿಯಂಟೆಡ್ ಚಿತ್ರಗಳು. ಇಂತಹ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ಡೈರೆಕ್ಟರ್ ಆಗಿರುವುದು ಗೊತ್ತಿದೆ ತಾನೇ. ವಿಜಯ್ ಅವರ ಮಗಳು ಮೊನಿಷಾ ವಿಜಯ್ ಅವರೇ ವಿನಯ್ ಅವರ ಎದುರು ನಾಯಕಿ.
ವಿಜಯ್ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಸಲಗ ಮತ್ತು ಭೀಮ ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದರ ಮಧ್ಯೆ ಬೇರೆ ನಿರ್ದೇಶಕರ ಚಿತ್ರಗಳಲ್ಲಿ ನಟಿಸುತ್ತಿರುವ ವಿಜಯ್, ಇದೇ ಮೊದಲ ಬಾರಿಗೆ ಬೇರೆ ಹೀರೋಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಾಮಾನ್ಯವಾಗಿ ಹೀರೋಗಳು ಡೈರೆಕ್ಟರ್ ಆದ ತಮ್ಮದೇ ನಿರ್ದೇಶನದಲ್ಲಿ ಬೇರೆಯವರಿಗೆ ಆಕ್ಷನ್ ಕಟ್ ಹೇಳೋದು ಕಡಿಮೆ. ಹಾಗೆ ಬೇರೆಯವರನ್ನು ಹೀರೋ ಮಾಡ್ತಿದ್ದಾರೆ, ಡೈರೆಕ್ಷನ್ ಕೂಡಾ ಮಾಡ್ತಿದ್ದಾರೆ ಎಂದರೆ, ಹೀರೋ ಆಗಿ ಫೇಲ್ಯೂರ್ ಆಗಿದ್ದಾರೆ ಎಂದು ಗಾಂಧಿನಗರ ಅರ್ಥ ಮಾಡಿಕೊಳ್ಳುತ್ತೆ. ಇದಕ್ಕೆ ತಕ್ಕಂತೆ ಎಸ್.ನಾರಾಯಣ್, ಜೋಗಿ ಪ್ರೇಮ್ ಮೊದಲಾದವರು ಬೇರೆಯವರಿಗೆ ಆಕ್ಷನ್ ಕಟ್ ಹೇಳೋಕೆ ಶುರು ಮಾಡಿದ್ದು ತಾವು ಹೀರೋ ಆಗಿ ಸೋತ ಮೇಲೆ.
ಆದರೆ ವಿಜಯ್ ಹಾಗಲ್ಲ, ಹೀರೋ ಕಂ ಡೈರೆಕ್ಟರ್ ಆಗಿ ಗೆದ್ದ ಮೇಲೆಯೂ ಇನ್ನೊಬ್ಬ ಹೀರೋಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ವಿಶೇಷ ಏನಪ್ಪಾಂದ್ರೆ, ಆ ಚಿತ್ರಕ್ಕೆ ಅವರ ಮಗಳು ಹೀರೋಯಿನ್. ಇನ್ನು ವಿನಯ್, ಪಾತ್ರದಲ್ಲಿ ಹೀರೋಯಿಸಮ್ಮಿಗಿಂತ ಹೆಚ್ಚಾಗಿ ನಟಿಸೋದಕ್ಕೆ ಅವಕಾಶ ಇದೆಯಾ.. ನಟಿಸುವುದಕ್ಕೆ ಸ್ಕೋಪ್ ಇದೆಯಾ ಎಂದು ನೋಡುವವರು. ಬಹುಶಃ ಅದಕ್ಕೆಂದೇ ವಿಜಯ್, ವಿನಯ್ ಅವರನ್ನು ಆಯ್ಕೆ ಮಾಡಿಕೊಂಡಿರಬಹುದು.
ಅಂದಹಾಗೆ ಚಿತ್ರಕ್ಕೆ ವಿನಯ್ ಆಯ್ಕೆಯಾಗಿದ್ದೇ ರೋಚಕ. ಒಂದು ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್ ಅವರು ಆಕಸ್ಮಿಕವಾಗಿ ಸಿಕ್ಕರು. ಜೊತೆಯಲ್ಲಿ ಕುಳಿತು ಮಾತನಾಡುತ್ತಿರುವಾಗ ಕಥೆ ಹೇಳಿದರು. ಸಿನಿಮಾ ಶುರುವಾಯ್ತು ಎನ್ನುವ ವಿನಯ್ ಅವರಿಗೆ ವಿಜಯ್ ಅವರ ನಿರ್ದೇಶನದ ಚಿತ್ರಗಳು ಅಚ್ಚರಿ ಹುಟ್ಟಿಸುತ್ತವಂತೆ.
ವಿಜಯ್ ಅವರ ಚಿತ್ರಗಳಲ್ಲಿ ಸಾಮಾನ್ಯರನ್ನು ಚಿತ್ರಿಸುವ ರೀತಿ ನನಗೆ ಇಷ್ಟವಾಗುತ್ತದೆ. ಉದಾಹರಣೆಗೆ ಭೀಮ ತೆಗೆದುಕೊಂಡರೇ.. ಅಲ್ಲಿನ ಪಾತ್ರಗಳು ಉರ್ದು ಮಿಶ್ರಿತ ಕನ್ನಡ, ತಮಿಳು ಮಿಶ್ರಿತ ಕನ್ನಡ ಮಾತನಾಡುತ್ತವೆ. ಅಂತಹ ಪಾತ್ರಗಳನ್ನು ಬೇರೆಯವರ ಚಿತ್ರಗಳಲ್ಲಿ ನೋಡಲು ಸಾಧ್ಯವಿಲ್ಲ ಎನ್ನುತ್ತಾರೆ ವಿನಯ್. ಈ ಚಿತ್ರದಲ್ಲಿ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆಯೇ ನಟಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ನಾವು ದಿನವೂ ನೋಡುವ ವ್ಯಕ್ತಿಗಳು ಅವರವರ ಪಾಲಿಗೆ ಅವರವರೇ ಹೀರೋಗಳಾಗಿರ್ತಾರೆ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ಅವರ ಬದುಕಿಗೆ ಹೀರೋನೇ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಂಡಿದ್ದರೆ, ನಿಮಗೆ ನೀವೇ ಹೀರೋ. ಅಂತಹ ಕಥೆಗಳನ್ನೆಲ್ಲ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ನಾನು ಚಿತ್ರಗಳಲ್ಲಿ ಮಾಡುತ್ತಿರುವುದು ಅಂತಹ ಪಾತ್ರಗಳನ್ನೇ ಎನ್ನುವ ವಿನಯ್, ದುನಿಯಾ ವಿಜಯ್ ನಿರ್ದೇಶನದ ಚಿತ್ರದಲ್ಲಿನ ಪಾತ್ರ ಹೇಗಿರಬಹುದು ಎಂಬ ಸುಳಿವನ್ನೂ ಕೊಡ್ತಾರೆ.
ವಿಜಯ್ ಸರ್ ನಿರ್ದೇಶನದ ಚಿತ್ರಗಳಲ್ಲಿ ಕಂಪ್ಲೀಟ್ ಮನರಂಜನೆ ಇರುತ್ತದೆ. ಅವರ ಚಿತ್ರಗಳು ಹೊಸ ಹೊಸ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿವೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನುವ ವಿನಯ್, ಚಿತ್ರಕ್ಕೆ ತಯಾರಿ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಮುಂದಿನ ವರ್ಷ ದುನಿಯಾ ವಿಜಯ್-ವಿನಯ್ ರಾಜ್ ಕುಮಾರ್ ಕಾಂಬಿನೇಷನ್ನಿನ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಉಳಿದ ವಿವರಗಳೆಲ್ಲ ಹಂತ ಹಂತವಾಗಿ ರಿವೀಲ್ ಆಗಲಿವೆ.



