ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡದಲ್ಲಿ ಮಾತನಾಡಿ, ಕನ್ನಡವನ್ನು ಕಲಿಯಿರಿ ಎನ್ನುವುದು ತಪ್ಪಾ.. ಕರ್ನಾಟಕದಲ್ಲಿ ಬಂದು ಕೆಲಸ ಮಾಡ್ತೀರಿ, ಅನ್ನ ತಿಂತೀರಿ, ಕನಿಷ್ಠ ಕನ್ನಡದಲ್ಲಿ ಮಾತನಾಡಿ ಎಂಬ ಕನ್ನಡಿಗರ ಆಗ್ರಹಕ್ಕೆ ಉತ್ತರ ಭಾರತೀಯರು ತೋರಿಸುವ ಧಿಮಾಕು ಬೇರೆ. ಅದೇ ಧಿಮಾಕಿನಿಂದ ನೀವೇ ಹಿಂದಿ ಕಲಿತುಕೊಳ್ಳಿ ಎಂಬ ಮಾತುಗಳು ಬರುತ್ತವೆ. ಹಿಂದಿ ಅನ್ನೋದು ನ್ಯಾಷನಲ್ ಲಾಂಗ್ವೇಜ್ ಎಂಬ ಕಾಗಕ್ಕಗೂಬ್ಬಕ್ಕ ಕಥೆ ಹೇಳೋ ಹಿಂದೀ ಮಂದಿ, ಕನ್ನಡಿಗರ ಮೇಲೆ ಭಾಷೆಯ ಸವಾರಿ ಮಾಡ್ತಾರೆ. ಅಂತಹ ಸವಾರಿ ಮಾಡಿದ ಯುವತಿಯರಲ್ಲಿ ಒಬ್ಬಾಕೆ ಸುಗಂಧ ಶರ್ಮ.
ಉತ್ತರ ಭಾರತೀಯರಿಂದಲೇ ಬೆಂಗಳೂರಿಗೆ ಬೆಳಗು ಎಂಬರ್ಥದಲ್ಲಿ ರೀಲ್ಸ್ ಮಾಡಿ ಮಾತನಾಡಿದ್ದ ಸುಗಂಧ್ ಶರ್ಮ ಅವರಿಗೆ ಕೆಲಸ ಕಳೆದುಕೊಂಡ ಮೇಲೆ ಬುದ್ದಿ ಬಂದ ಹಾಗಿದೆ. “ನೀವು ಯಾವಾಗಲೂ ಉತ್ತರ ಭಾರತೀಯರು ಹೊರಟು ಹೋಗಿ, ಹೊರಟು ಹೋಗಿ ಅನ್ನುತ್ತಿದ್ದೀರಿ. ಉತ್ತರ ಭಾರತೀಯರು ಬೆಂಗಳೂರು ಬಿಟ್ಟು ಹೋದರೆ ಬೆಂಗಳೂರಿನ ಪಿಜಿಗಳೆಲ್ಲ ಖಾಲಿಯಾಗುತ್ತದೆ. ಕೋರಮಂಗಲದ ಕ್ಲಬ್ಬುಗಳೆಲ್ಲಾ ಖಾಲಿಯಾಗುತ್ತವೆ. ಪಂಜಾಬಿ ಹಾಡಿಗೆ ಕುಣಿಯುವ ಚಂದದ ಚಂದದ ಹುಡುಗಿಯರು ಅಲ್ಲಿ ಮತ್ತೆ ಕಾಣಿಸುವುದಿಲ್ಲ, ಯೋಚಿಸಿ ಮಾತನಾಡಿ. ಒಂದು ವೇಳೆ ನಾವು ಹೊರಟುಹೋದರೆ ಬೆಂಗಳೂರಿನಲ್ಲಿ ಏನೂ ಉಳಿಯುವುದಿಲ್ಲ ಎಂದು ಲೇವಡಿ ಮಾಡಿ ರೀಲ್ಸ್ ಮಾಡಿದ್ದ ಸುಗಂಧ ಶರ್ಮ, ಈಗ ಕ್ಷಮೆ ಕೇಳಿದ್ದಾರೆ.
ಸುಂಗಂಧ್ ಶರ್ಮಾ ಮೊದಲ ಬಾರಿ ಬೆಂಗಳೂರು ವಿರೋಧಿ ಹೇಳಿಕೆ ನೀಡಿದಾಗಲೇ ರೂಪೇಶ್ ರಾಜಣ್ಣ ನೇತೃತ್ವದ ಕನ್ನಡಪರ ಹೋರಾಟಗಾರರ ತಂಡ ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯನ್ನು ಪತ್ತೆ ಮಾಡಿತ್ತು. ಸುಗಂಧ ಶರ್ಮಾ ಫ್ರೀಡಂ ಆಪ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪೆನಿಯು ಸಹ ಆಕೆಯನ್ನು ಕೆಲಸದಿಂದ ವಜಾ ಮಾಡಿತ್ತು. ಬಳಿಕ ಅವರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ನೀಡಿತ್ತು. ಸುಗಂಧ ಶರ್ಮಾ ಅವರು ರೀಲ್ಸ್ ಮಾಡುತ್ತಿರುತ್ತಾರೆ. ಆದರೆ ತಮ್ಮ ಪ್ರತೀ ರೀಲ್ಸ್ʻನಲ್ಲೂ ಲರ್ನ್ ಕನ್ನಡ ಅಂತಾ ಕಮೆಂಟ್ ಇರುತ್ತದೆ ಎಂಬುದಕ್ಕೇ ಸಿಡಿಮಿಡಿಗೊಂಡಿದ್ದ ಸುಗಂಧ ಶರ್ಮಾ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕನ್ನಡ ಕಲಿಯುವುದೊಂದೇನಾ? ಎಂದು ಖಾರವಾಗಿ ಪ್ರಶ್ನಿಸಿದ್ದರು.
ಇದೀಗ ಕೆಲಸವೇ ಹೋದ ಮೇಲೆ, ಬೇರೆ ಕಂಪೆನಿಗಳಲ್ಲಿ ಕೆಲಸ ಸಿಗುತ್ತಿಲ್ಲ ಎಂದು ಅರಿವಾದ ಮೇಲೆ ನನ್ನಿಂದಾಗಿ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಾನು ಎಲ್ಲ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತೇನೆ ಎಂದು ತನ್ನ ಕ್ಷಮಾಪಣೆಯ ರೀಲ್ಸ್ ಮಾಡಿದ್ದಾರೆ. ಆಕೆಯೇ ಈ ಹಿಂದೆ ಮಾಡಿದ್ದ ಕನ್ನಡ ವಿರೋಧಿ ರೀಲ್ಸ್ ವಿಡಿಯೋಗಳೆಲ್ಲಾ ಡಿಲೀಟ್ ಆಗಿವೆ.
ಇದು ಹೋರಾಟದ ಆರಂಭವಾ..?
ಮೇಲ್ನೋಟಕ್ಕೆ ಇದು ಕನ್ನಡಿಗರ ಹೋರಾಟಕ್ಕೆ ಸಂದ ಜಯ ಎನ್ನಬಹುದು. ಆದರೆ ಇನ್ನೊಂದ ರೀತಿಯಲ್ಲಿ ಇದು ಇನ್ನೊಂದು ರೀತಿಯ ಹೋರಾಟದ ಆರಂಭ. ಈಗಾಗಲೇ ಹಿಂದೀವಾಲಾಗಳು ಮತ್ತು ಕನ್ನಡ ಸಂಘಟನೆಗಳ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಸಂಘಟನೆಯ ಮೂಲಕ ಗುಂಪಾಗಿ ಹೋದಾಗ ಸಿಗುವ ಗೌರವವೇ ಬೇರೆ. ಒಬ್ಬಂಟಿಯಾಗಿ ಸಿಕ್ಕಾಗ ಸಿಕ್ಕುವ ಮರ್ಯಾದೆಯೇ ಬೇರೆ. ಹೀಗಾಗಿ ಇದು ಇನ್ನೊಂದು ವಿಪರೀತಕ್ಕೆ ಹೋದರೆ ಆಶ್ಚರ್ಯ ಪಡಬೇಕಿಲ್ಲ. ಆದರೆ ಕರ್ನಾಟಕದಲ್ಲಿ ಬಂದು, ಇಲ್ಲಿನ ಸ್ಥಳೀಯರ ಜೊತೆ ಕನ್ನಡ ಮಾತನಾಡದೆ ಅವರಿಗೇ ಹಿಂದಿ ಕಲೀರಿ ಎನ್ನುವ ಧಿಮಾಕು ಕೂಡಾ ಅತಿಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಏನೆಂದು ಹುಡುಕಿದರೆ, ನಾವು ಕನ್ನಡಿಗರು ಎಲ್ಲ ಭಾಷೆಗಳವರ ಜೊತೆ ಅವರವರ ಭಾಷೆ ಕಲಿತು, ಅವರವರ ಭಾಷೆಯಲ್ಲಿಯೇ ವ್ಯವಹಾರ ಮಾಡುತ್ತೇವೆ. ಅದನ್ನು ತಿದ್ದಿಕೊಂಡರೆ ಕನ್ನಡ ತಂತಾನಾಗಿಯೇ ಉಳಿಯುತ್ತದೆ.



