ಸುಮಲತಾ ಅಂಬರೀಷ್. ಮಂಡ್ಯ ಕ್ಷೇತ್ರದ ಸಂಸದೆ. ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದಿರುವ ಸುಮಲತಾ, ದಕ್ಷಿಣ ಭಾರತ ಚಲನಚಿತ್ರ ರಂಗದ ಹೆಸರಾಂತ ನಟಿ. ತೆಲುಗು ಪಿಲ್ಲ.. ಮಂಡ್ಯದ ಸೊಸೆ. ಮಂಡ್ಯದ ಗಂಡು ಅಂಬರೀಷ್ ಅವರ ಪತ್ನಿ. ಅಂತಹ ಸುಮಲತಾ ಅಂಬರೀಶ್ ಅವರಿಗೆ ಹೈದರಾಬಾದ್‌ನ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಚಿತ್ರರಂಗ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಯುನೈಟೆಡ್ ಥಿಯಾಲಜಿಕಲ್ ರೀಸರ್ಚ್ ಯೂನಿವರ್ಸಿಟಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆ, ಯುನೈಟೆಡ್ ಥಿಯಾಲಜಿಕಲ್ ರೀಸರ್ಚ್ ಯೂನಿವರ್ಸಿಟಿ.
ಗೌರವ ಡಾಕ್ಟರೇಟ್ ಕುರಿತು ʻʻನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು, ನನ್ನ ಹಿತೈಷಿಗಳು, ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ. ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು, ಚಲನಚಿತ್ರ ಹಾಗೂ ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆʼʼ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿದ್ದಾರೆ.
1963ರ ಆಗಸ್ಟ್ 27ರಂದು ಚೆನ್ನೈನಲ್ಲಿ ಜನಿಸಿದ ಸುಮಲತಾ ಮೂಲತಃ ಆಂಧ್ರಪ್ರದೇಶದವರು. 15ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಸುಮಲತಾ ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದರು. ಡಾ.ರಾಜ್ ಅವರೊಂದಿಗೆ ರವಿಚಂದ್ರ ಚಿತ್ರದಲ್ಲಿ ನಟಿಸಿ ಕನ್ನಡಕ್ಕೆ ಬಂದ ಸುಮಲತಾ ಅದಾದ ಮೇಲೆ ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್, ಶ್ರೀನಾಥ್, ಅನಂತನಾಗ್.. ಹೀಗೆ ಕನ್ನಡದ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದರು. ಆಮೇಲೆ ಅಂಬರೀಷ್ ಹೃದಯದ ಅರಸಿಯಾದರು. ಕರ್ನಾಟಕದ ಸೊಸೆಯಾದರು.
ಅಂಬರೀಷ್ ಅವರಿಗೂ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಈಗ ಸುಮಲತಾ ಅವರಿಗೆ ಕ್ಯಾಲಿಫೋರ್ನಿಯಾ ವಿವಿ ಗೌರವ ಡಾಕ್ಟರೇಟ್ ನೀಡಿದೆ. ಪತಿ ಹಾಗೂ ಪತ್ನಿ ಇಬ್ಬರೂ ಗೌರವ ಡಾಕ್ಟರೇಟ್ ಪಡೆದಿರುವ ಕನ್ನಡ ಚಿತ್ರರಂಗದ ೩ನೇ ಕುಟುಂಬ ಅಂಬರೀಷ್ ಅವರದ್ದು. ಈ ಮೊದಲು ಡಾ.ರಾಜ್ ಹಾಗೂ ಪಾರ್ವತಮ್ಮ, ಡಾ.ವಿಷ್ಣುವರ್ಧನ್ ಹಾಗೂ ಭಾರತಿ ಈ ರೀತಿ ಗೌರವ ಡಾಕ್ಟರೇಟ್ ಪಡೆದಿದ್ದರು. ಪತಿ ಪತ್ನಿ ಇಬ್ಬರೂ ಗೌರವ ಡಾಕ್ಟರೇಟ್ ಪಡೆದಿರುವ ಕನ್ನಡ ಚಿತ್ರರಂಗದ ೩ನೇ ಕುಟುಂಬ ಅಂಬರೀಷ್ ಫ್ಯಾಮಿಲಿಯದ್ದು.
ಅತೀ ಹೆಚ್ಚು ಗೌರವ ಡಾಕ್ಟರೇಟ್ ಸ್ವೀಕರಿಸಿರುವ ಕುಟುಂಬ ಡಾ.ರಾಜ್ ಅವರದ್ದು. ರಾಜ್ ಕುಟುಂಬದಿಂದ ಡಾ.ರಾಜ್, ಪಾರ್ವತಮ್ಮ, ಶಿವ ರಾಜ್ʻಕುಮಾರ್, ಪುನೀತ್ ರಾಜ್ʻಕುಮಾರ್ ಸೇರಿ ಒಟ್ಟು ನಾಲ್ವರು ಗೌರವ ಡಾಕ್ಟರೇಟ್ ಪಡೆದಿದ್ದಾರೆ.



