ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಜನಗಣತಿ ವರದಿ ಮಂಡನೆಯಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳು ಅಭಿಪ್ರಾಯ ಹೇಳಲಿದ್ದಾರೆ. ಅಷ್ಟರೊಳಗೆ ಪ್ರಮುಖ ಮುಖಂಡರು, ಮಠಾಧೀಶರು, ಸಚಿವ, ಶಾಸಕರ ಸಭೆ ನಡೆಸಿ ಈ ವರದಿ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೊರಹಾಕಲು ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ವಿವಿಧ ಸಮುದಾಯಗಳ ಸಂಘಟನೆಗಳು ಮುಂದಾಗಿವೆ. ಸರ್ಕಾರ ಪ್ರತಿಕೂಲ ನಿರ್ಧಾರ ಕೈಗೊಂಡರೆ ಹೋರಾಟಕ್ಕಿಳಿಯುವ ಸಾಧ್ಯತೆ ಇದೆ. ಇಷ್ಟಕ್ಕೂ ಜಾತಿ ಗಣತಿಯನ್ನು ಒಪ್ಪದೇ ಇರುವುದಕ್ಕೆ ಹಲವು ಕಾರಣಗಳಿವೆ.
ಮನೆ ಮನೆಗೆ ಬಂದೇ ಇಲ್ಲ. ಇದು ಯಾವ ಗಣತಿ..?
ಇಡೀ ವರದಿ ಅವೈಜ್ಞಾನಿಕ ಎನ್ನುವುದಕ್ಕೆ ಕಾರಣವೇ ಇದು. ಜಾತಿ ಗಣತಿ ಮಾಡುವವರು ಮನೆ ಮನೆಗೆ ಬಂದೇ ಇಲ್ಲ. ಜನರನ್ನೇ ಸಂಪರ್ಕಿಸದೆ, ಜನರ ಬಳಿ ಮಾಹಿತಿ ಪಡೆಯದೆ ಮಾಡಿರುವ ಈ ಗಣತಿ ಅದು ಹೇಗೆ ಅಧಿಕೃತ, ವೈಜ್ಞಾನಿಕ ಆಗುತ್ತದೆ ಎನ್ನವುದು ಮೊದಲ ಪ್ರಶ್ನೆ. ಜನರಿಗೇ ಗೊತ್ತಿಲ್ಲದಂತೆ ಜಾತಿ ಗಣತಿ ಮಾಡಿರುವ ಆರೋಪ ಸರ್ಕಾರದ ವಿರುದ್ಧ ಇದೆ. ಇದಕ್ಕೆ ಸರ್ಕಾರದ ಬಳಿ ದಾಖಲೆಗಳಂತೂ ಇಲ್ಲ.
ಕಚೇರಿಯಲ್ಲಿ ಕುಳಿತು ಬರೆಸಿರುವ ಲೆಕ್ಕ : ಆರೋಪ
ಹೀಗೆ ಜನರನ್ನು ಮಾತನಾಡಿಸದೆ, ಅವರ ಬಳಿ ದಾಖಲೆ ಮಾಡಿಕೊಳ್ಳದೆ ಮಾಡಿರುವ ಗಣತಿಯನ್ನು ಗಣತಿ ಎಂದು ಒಪ್ಪಲು ಸಾಧ್ಯವಿಲ್ಲ. ಯಾರೋ ಒಂದಿಷ್ಟು ಜನ ಯಾವುದೋ ಕಚೇರಿಯಲ್ಲಿ ಕುಳಿತು ಸಿದ್ಧಪಡಿಸಿರುವ ವರದಿ ಇದು. ತಮಗೆ ಬೇಕಾದಂತೆ ಬರೆಸಿಕೊಂಡಿದ್ದಾರೆ ಎನ್ನುವುದು 2ನೇ ಆರೋಪ.
ವೀರಶೈವ ಲಿಂಗಾಯತರ ವಿರೋಧ
ಈಗಾಗಲೇ ಜಾತಿ ಜನಗಣತಿ ವರದಿ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಆದರೂ ವರದಿ ಈಗ ಅಧಿಕೃತವಾಗಿ ಬಹಿರಂಗವಾಗಿದೆ. ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರೂ, ವರದಿ ಮಂಡನೆ ಹಿಂದೆ ಹಿಡನ್ ರಾಜಕೀಯ ಎದ್ದು ಕಾಣಿಸುತ್ತಿದೆ ಎನ್ನುವುದು ಮುಖಂಡರ ಅನುಮಾನ.
ಸಿದ್ದರಾಮಯ್ಯ ಪ್ರಕಾರ ಶೇ.96ರಷ್ಟು ಗಣತಿ
ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ಆದರೆ ಶೇ.96ರಷ್ಟು ಗಣತಿ ಎಂದರೆ ಎಲ್ಲಿದೆ ಲೆಕ್ಕ. ಶೇ.60-70 ಮತದಾನ ನಡೆದರೆ, ಜನರ ಅಕ್ಕಪಕ್ಕ ವೋಟ್ ಹಾಕಿದವರು ಸಿಗುತ್ತಾರೆ. ಆದರೆ ಈ ಗಣತಿಯಲ್ಲಿ ಸಮೀಕ್ಷೆ ಮಾಡದ್ದರು, ಬಂದಿದ್ದರು ಎಂಬ ಲೆಕ್ಕವೇ ಸಿಗುತ್ತಿಲ್ಲ. ಹಾಗಾದರೆ 10 ಜನರ ಸಮೀಕ್ಷೆ ಮಾಡಿ, 10 ಲಕ್ಷದ ಲೆಕ್ಕಕ್ಕೆ ಸರಿ ಮಾಡಿದರಾ.. ದುಡ್ಡು ಹೊಡೆಯಲು ಈ ರೀತಿ ಮಾಡಲಾಗಿದೆಯಾ ಎಂಬ ಆರೋಪವೂ ಇದೆ. ಲೆಕ್ಕ ಕೊಡಬೇಕಾಗಿರುವುದು ಸಿದ್ದರಾಮಯ್ಯ.
ಅಹಿಂದ ಅಜೆಂಡಾಕ್ಕಾಗಿ ಮಾಡಿದರಾ..?
ಏಕೆಂದರೆ ಸಿದ್ದರಾಮಯ್ಯ ಮೊದಲಿನಿಂದಲೂ ಜಿಲೇಬಿ ವಿರೋಧಿ ಎಂದೇ ಹೆಸರು ವಾಸಿ. ಜಿಲೇಬಿ ಎಂದರೆ ಗೌಡ, ಲಿಂಗಾಯತ ಮತ್ತು ಬ್ರಾಹ್ಮಣ. ಈಗ ಬಂದಿರುವ ಸಮೀಕ್ಷೆಯಲ್ಲಿ ಅವರಿಗಿರುವ ಇನ್ನೊಂದು ಖ್ಯಾತಿ ಅಹಿಂದ ಇದೆ. ಅಂದರೆ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗ. ಅವರೇ ಈ ಗಣತಿಯಲ್ಲಿ ಅತ್ಯುನ್ನತ ಸಂಖ್ಯೆಯಲ್ಲಿದ್ಧಾರೆ. ಹಾಗಾದರೆ ಜಿಲೇಬಿಯನ್ನು ದೂರ ಇಟ್ಟು, ಅಹಿಂದ ಅಪ್ಪಿಕೊಂಡರಾ ಎನ್ನುವುದು ಮತ್ತೊಂದು ಪ್ರಶ್ನೆ.
ಒಕ್ಕಲಿಗರ ಕೋಟೆಯಲ್ಲೂ ಒಕ್ಕಲಿಗರು ನಂ.1 ಅಲ್ಲ..!
ಒಕ್ಕಲಿಗರು ಲಿಂಗಾಯತರ ಹಾಗಲ್ಲ. ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ.. ಇವಿಷ್ಟೇ ಜಿಲ್ಲೆಗಳಲ್ಲಿ ಒಕ್ಕಲಿಗರು ಪ್ರಬಲರು. ಆದರೆ ಆ ನಂಬಿಕೆಯೇ ಸುಳ್ಳಾಗಿದೆ. ಈಗ ಬಂದಿರುವ ಗಣತಿಯ ಪ್ರಕಾರ ಅಲ್ಲಿಯೂ ಒಕ್ಕಲಿಗರು ನಂ.1 ಅಲ್ಲ.
ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ
ಇನ್ನು ವೀರಶೈವ ಮತ್ತು ಲಿಂಗಾಯತರು ಬೇರೆ ಬೇರೆ ಎಂದು ಸಾರಲು ಹೊರಟಿದ್ದ ಸಿದ್ದರಾಮಯ್ಯ, ಅದನ್ನು ಈ ಸಮೀಕ್ಷೆಯ ಮೂಲಕ ಸಾಧಿಸಿದ್ದಾರೆ. ಲೆಕ್ಕದಲ್ಲಿ ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎಂದಿದೆ. ವಿಚಿತ್ರ ಎಂದರೆ ಕಾಂಗ್ರೆಸ್ ಸಂಯೋಜನೆ ಮಾಡಿ, ಸಮೂಹದಿಂದ ಹೊರ ತಂದಿದ್ದ ಪಂಚಮಸಾಲಿಗಳೂ ಕೂಡಾ ಈ ಲೆಕ್ಕದಲ್ಲಿ ನಗಣ್ಯರೇ.
ಇವರಿಗೆ ಗೊತ್ತಿಲ್ಲ.. ಅವರಿಗೆ ಗೊತ್ತಿತ್ತಾ..?
ಇದು ಇನ್ನೊಂದು ಅಚ್ಚರಿ. ಗಣತಿಗಾಗಿ ಹಠ ಹಿಡಿದಿದ್ದವರಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹದೇವಪ್ಪ, ಆಂಜನೇಯ, ಜಮೀರ್ ಅಹ್ಮದ್ ಮೊದಲಾದರಿದ್ದರೆ, ಶಾಮನೂರು, ಮಲ್ಲಿಕಾರ್ಜುನ್, ಡಿಕೆ ಶಿವಕುಮಾರ್ ಮೊದಲಾದವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈಗ ನೋಡಿದರೆ, ನಾವು ಈಗಷ್ಟೇ ನೋಡಿದ್ದೇವೆ ಎನ್ನುತ್ತಿದ್ದಾರೆ. ಗಣತಿ ಲೆಕ್ಕ ಪರ ಇದ್ದವರ ಪರ ಹಾಗೂ ವಿರೋಧ ಇದ್ದವರ ವಿರುದ್ಧವೇ ಇದೆ. ಹಾಗಾದರೆ ಮಂತ್ರಿಗಳು ನಾಟಕ ಮಾಡ್ತಿದ್ದಾರಾ..?
ಸಿಎಂ ಪಟ್ಟ ಗಟ್ಟಿ
ಈ ಲೆಕ್ಕ ಮುಂದಿಟ್ಟುಕೊಂಡು ಸಿದ್ದರಾಮಯ್ಯ ತಮ್ಮ ಪಟ್ಟ ಉಳಿಸಿಕೊಳ್ಳಲು ಮುಂದಾಗಬಹುದು.
ರಿಟರ್ನ್ ಗಿಫ್ಟ್
ಅಲ್ಲದೆ ತಮ್ಮ ಬೆನ್ನ ಹಿಂದೆ ನಿಂತ ಸಮುದಾಯಗಳಿಗೆ ರಿಟರ್ನ್ ಗಿಫ್ಟ್ ಕೊಟ್ಟ ಹೆಮ್ಮೆಯೂ ಸಿಗುತ್ತದೆ. ಜೊತೆಗೆ ಬೆಲೆ ಏರಿಕೆಯಿಂದ ಉದ್ಭವವಾಗಿದ್ದ ಆಕ್ರೋಶವನ್ನು ತಣ್ಣಗೆ ಮಾಡಿದಂತೆಯೂ ಆಗುತ್ತದೆ.



