ಬೆಂಗಳೂರಷ್ಟೇ ಅಲ್ಲ.. ಕರ್ನಾಟಕದ ಹಲವು ಚಿತ್ರಮಂದಿರಗಳ ಇತಿಹಾಸ ಶುರುವಾಗುವುದೇ ಡಾ.ರಾಜ್ ಚಿತ್ರಗಳಿಂದ. ಆ ಚಿತ್ರಮಂದಿರಗಳು ಇತಿಹಾಸದಲ್ಲಿರುವುದೂ ಡಾ.ರಾಜ್ ಚಿತ್ರಗಳೇ. ಕರ್ನಾಟಕದ ಹಲವು ಹಳೆಯ ಚಿತ್ರಮಂದಿರಗಳ ಇತಿಹಾಸದ ಪುಟಗಳಲ್ಲಿ ಡಾ.ರಾಜ್ ಹೆಸರೂ ಬರೆಯಲ್ಪಟ್ಟಿದೆ. ಡಾ.ರಾಜ್ ಚಿತ್ರಗಳ ಶೋ ಮಾಡಿಯೇ ಫೇಮಸ್ ಆದ ಚಿತ್ರಮಂದಿರಗಳು.. ಲ್ಯಾಂಡ್ ಮಾರ್ಕ್ ಆಗಿವೆ.
ಬೆಂಗಳೂರಿನ ಅಂತಹ ಲ್ಯಾಂಡ್ ಮಾರ್ಕ್ʻಗಳಲ್ಲಿ ಒಂದು ಕಾವೇರಿ ಚಿತ್ರಮಂದಿರ. ಮೆಜೆಸ್ಟಿಕ್, ಸಾಗರ್, ನರ್ತಕಿ, ಕಪಾಲಿ, ಪ್ರಸನ್ನ, ವೀರೇಶ್, ಊರ್ವಶಿ, ತ್ರಿಭುವನ್, ಮೂವಿಲ್ಯಾಂಡ್.. ಗಳಂತೆಯೇ ಕಾವೇರಿ ಚಿತ್ರಮಂದಿರವೂ ಬೆಂಗಳೂರಿನ ಒಂದು ಹೆಗ್ಗುರುತಾಗಿತ್ತು. ಅದೀಗ ಇತಿಹಾಸದ ಪುಟ ಸೇರುತ್ತಿದೆ. ಕಪಾಲಿ, ಮೆಜೆಸ್ಟಿಕ್, ಸಾಗರ್, ಪ್ರಮೋದ್.. ಮತ್ತಿತರ ಚಿತ್ರಮಂದಿರಗಳ ದಾರಿಯಲ್ಲೀಯೇ ಕಾವೇರಿ ಕೂಡಾ ಕಮರ್ಷಿಯಲ್ ಬಿಲ್ಡಿಂಗ್ ಆಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾವೇರಿ ಚಿತ್ರಮಂದಿರ ಕೂಡಾ ಇತಿಹಾಸದ ಪುಟ ಸೇರಲಿದೆ.
ಬೆಂಗಳೂರಿನಲ್ಲಿ ಕಪಾಲಿ ಬಿಟ್ಟರೆ, ಅತೀ ಹೆಚ್ಚು ಪ್ರೇಕ್ಷಕರು ಕುಳಿತುಕೊಳ್ಳುವ ವ್ಯವಸ್ಥೆ ಇದ್ದ ಚಿತ್ರಮಂದಿರ ಕಾವೇರಿ ಥಿಯೇಟರ್. 1300 ಜನ ಏಕಕಾಲದಲ್ಲಿ ನೋಡುವುದಕ್ಕೆ ಸಾಧ್ಯವಿದ್ದ ಟಾಕೀಸ್ ಕಾವೇರಿ. ಇದೇ ವರ್ಷ ಜನವರಿ 11ನೇ ತಾರೀಕು 50 ವರ್ಷ ಪೂರೈಸಿದ್ದ ಕಾವೇರಿ ಚಿತ್ರಮಂದಿರ, ಈಗ ಬಾಗಿಲು ಮುಚ್ಚುತ್ತಿದೆ. ಅಲ್ಲಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕಿಕೊಳ್ಳೋದು ಕಂಟಿನ್ಯೂ ಆಗಿದೆ.
ಕಾವೇರಿ ಚಿತ್ರಮಂದಿರ ಶುರುವಾಗಿದ್ದು ಅಣ್ಣಾವ್ರ ಕಾಮಿಡಿ ಕ್ಲಾಸಿಕ್ ಬಂಗಾರದ ಪಂಜರ ಚಿತ್ರದಿಂದ. ಡಾ.ರಾಜ್, ಆರತಿ, ಅಶ್ವತ್ಥ್, ಪಂಡರೀಭಾಯಿ, ಬಾಲಕೃಷ್ಣ, ಲೋಕನಾಥ್ ಅಭಿನಯದ ಸಿನಿಮಾದ ದೃಶ್ಯಗಳನ್ನು ಇವತ್ತಿಗೂ ಅಭಿಮಾನಿಗಳು ನೋಡಿ ನಕ್ಕು ನಕ್ಕೂ ಸುಸ್ತಾಗುತ್ತಾರೆ. ಆ ಸಿನಿಮಾದಿಂದ ಶುರುವಾಗಿದ್ದು ಕಾವೇರಿ ಚಿತ್ರಮಂದಿರ. ಚಿತ್ರಮಂದಿರ ಶುರುವಾದಾಗ ಇಲ್ಲಿದ್ದ ಟಿಕೆಟ್ ದರ 50 ಪೈಸೆ. ಕಾವೇರಿ ಚಿತ್ರಮಂದಿರ ಮುಚ್ಚುವಾಗ ಇಲ್ಲಿನ ಕನಿಷ್ಠ ಟಿಕೆಟ್ ದರ 200 ರೂ.
ಡಾ.ರಾಜ್ ಅವರ ಹಲವು ಚಿತ್ರಗಳು ಇಲ್ಲಿ ತೆರೆ ಕಂಡಿವೆ. ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಶಬ್ಧವೇದಿ ಚಿತ್ರಗಳು ಪ್ರದರ್ಶನ ಕಂಡಿರುವುದು ಕಾವೇರಿಯಲ್ಲೇ. ಆದರೆ.. ಕಾವೇರಿ ಫೇಮಸ್ ಆಗಿದ್ದು ಕನ್ನಡದ ಚಿತ್ರಗಳಿಗಿಂತ ಹೆಚ್ಚು ಪರಭಾಷೆಯ ಚಿತ್ರಗಳಿಗೆ. ಕನ್ನಡದಲ್ಲಿ ಡಾ.ರಾಜ್ ಚಿತ್ರಗಳಿಗೆ ಮುಗಿ ಬೀಳುತ್ತಿದ್ದ ಕಾವೇರಿ ಚಿತ್ರಮಂದಿರದವರು, ಮಿಕ್ಕವರ ಚಿತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಅಮಿತಾಭ್ ಬಚ್ಚನ್, ರಜನಿಕಾಂತ್, ಶಾರುಕ್ ಖಾನ್ ಚಿತ್ರಗಳಿಗೆ ಈ ಚಿತ್ರಮಂದಿರ ಫಿಕ್ಸ್ ಆಗಿರ್ತಿತ್ತು. ಬಚ್ಚನ್ ಚಿತ್ರಗಳು ಮಿಸ್ ಆಗಿವೆ ಎಂದರೆ.. ಆಗ.. ಆ ಸಮಯದಲ್ಲಿ ಡಾ.ರಾಜ್ ಚಿತ್ರ ನಡೆಯುತ್ತಿದೆ ಎಂದರ್ಥ. ಅಷ್ಟರಮಟ್ಟಿಗೆ ಫೇಮಸ್ ಆಗಿದ್ದ ಚಿತ್ರಮಂದಿರ ಕಾವೇರಿ.
ಶಂಕರಾಭರಣಂ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ, ಇಂಡಿಯನ್, ಕಾಂತಾರ,.. ಕಾವೇರಿ ಚಿತ್ರಮಂದಿರದಲ್ಲಿ ಯಶಸ್ವಿಯಾದ ಇನ್ನಿತರ ಯಶಸ್ವಿ ಚಿತ್ರಗಳು.



