ಡಾರ್ಲಿಂಗ್ ಡಾರ್ಲಿಂಗ್ ವೆಲ್ʻಕಂ ಡಾರ್ಲಿಂಗ್ ಎಂದು ಹಾಡಿ ಕುಣಿದೇ ಹೀರೋ ಆದವರು ಡಾರ್ಲಿಂಗ್ ಕೃಷ್ಣ. ಕೃಷ್ಣ ಎಂದರೆ ಕಣ್ಣ ಮುಂದೆ ಲವರ್ ಬಾಯ್ ಇಮೇಜ್ ಬರುತ್ತೆ. ಲವ್ ಮಾಕ್ಟೇಲ್ʻನಂತಹ ಚಿತ್ರಗಳ ಮೂಲಕ ಅದೇ ಇಮೇಜ್ ಇರುವ ಕಥೆಗಳಲ್ಲೇ ನಟಿಸುತ್ತಿದ್ದ ಕೃಷ್ಣ, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರಕ್ಕೆ ಕೈ ಹಾಕಿದ್ಧಾರೆ.
ಲವರ್ ಬಾಯ್ ಇಮೇಜ್ʻನಿಂದ ಹೊರಬರುವ ಪ್ರಯತ್ನದಲ್ಲಿ ಡಾರ್ಲಿಂಗ್ ಕೃಷ್ಣ, ದೊಡ್ಡ ಪ್ರಾಜೆಕ್ಟ್ʻಗೆ ಕೈ ಹಾಕಿದ್ದಾರೆ. ಅದು ಹಲಗಲಿಯ ಬೇಡರ ಕಥೆ. ಬಜೆಟ್ಟು ಸುಮಾರು ೮೦ ಕೋಟಿಯದ್ದು. ಚಿತ್ರದ ಹೆಸರೇ ಹಲಗಲಿ. ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ನಡೆಸಿದ ಯುದ್ಧದ ಕಥೆ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕಥೆ. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿಯ ಬೇಡರು ನಡೆಸಿದ ಹೋರಾಟದ ಬಗ್ಗೆ ರೋಮಾಂಚಕ ಕಥೆಗಳಿವೆ.
ಹಲಗಲಿಯ ಬೇಡರ ಹೋರಾಟ ಹೇಗಿತ್ತು..?
ಹಲಗಲಿಯ ಬೇಡರು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತಿದ್ದವರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಈಗಲೂ ಹಲಗಲಿಯ ಬೇಡರ ಸಂತತಿಯವರಿದ್ದಾರೆ. ಅಂತಹ ಬೇಡರ ಬಳಿ ಆಯುಧಗಳೇ ಇರಬಾರದು, ಕಿತ್ತುಕೊಳ್ಳಬೇಕು ಎಂದು ಮುಂದಾದ ಬ್ರಿಟಿಷ್ ಸರ್ಕಾರದ ವಿರುದ್ಧ ಬೇಡರು ನಡೆಸಿದ ಹೋರಾಟವೇ ಕಥೆ.
ಬಾಲಪ್ಪ, ಹಣಮಪ್ಪ, ರಾಮಪ್ಪ, ಹನುಮವ್ವ, ಲಗುಮವ್ವ ಮತ್ತು ರಾಮವ್ವ. ಇವರೆಲ್ಲರೊಂದಿಗೆ ನಿಂಬಾಳ್ಕರ್ ಎಂಬ ಮರಾಠ ಸೈನಿಕನ ಮಾರ್ಗದರ್ಶನದಿಂದಾಗಿ ಹಲಗಲಿಯ ಬೇಡರು ನಡೆಸಿದ ಹೋರಾಟದ ಬಗ್ಗೆ ದೊಡ್ಡ ಮಟ್ಟದ ದಾಖಲೆಗಳಿಲ್ಲ. ಹಲಗಲಿಯ ಬೇಡರು ನಡೆಸಿದ ಹೋರಾಟದಲ್ಲಿ ಬ್ರಿಟಿಷರು ಹಲವು ಬಾರಿ ಸೋಲುತ್ತಾರೆ. ನಂತರ ಆ ಹಲಗಲಿಯ ಬೇಡರಲ್ಲೇ ವಂಚಕನೊಬ್ಬನನ್ನು ಹುಡುಕಿ, ಬೇಡರ ಅಸ್ತ್ರಶಸ್ತ್ರಗಳೆಲ್ಲ ನಿಷ್ಕ್ರಿಯವಾಗುವಂತೆ ಮಾಡುತ್ತಾರೆ. ಹಲಗಲಿಯ ಬೇಡರು ಸೋಲುತ್ತಾರೆ. ಅದಾದ ನಂತರ ಬ್ರಿಟಿಷ್ ಸೈನಿಕರು ಹಲಗಲಿಯ ಬೇಡರ ಮೇಲೆ ಕ್ರೌರ್ಯ ಮೆರೆಯುತ್ತಾರೆ. ಮಕ್ಕಳ ತಲೆ ಕಡಿಯುತ್ತಾರೆ. ಹೆಣ್ಣು ಮಕ್ಕಳ ಅತ್ಯಾಚಾರವಾಗುತ್ತದೆ. ಮನೆ ಮನೆಗಳಲ್ಲಿ ಲೂಟಿಯಾಗುತ್ತದೆ. ಊರನ್ನೇ ಸುಡುತ್ತಾರೆ ಎಂಬುದೆಲ್ಲ ಇತಿಹಾಸ. ೨೯೦ ಮಂದಿಯನ್ನು ಬಂಧಿಸುತ್ತಾರೆ. ಕೊನೆಗೆ ಜಡಗಪ್ಪ, ಬಾಲಪ್ಪ ಸೇರಿ ಎಲ್ಲರನ್ನೂ ಹಡಗಲಿಯಲ್ಲೇ ಗಲ್ಲಿಗೇರಿಸುತ್ತಾರೆ. ಹಲಗಲಿಯ ಬೇಡರ ಕಥೆಯಲ್ಲಿ ಒಬ್ಬ ಹೀರೋ ಎನ್ನುವ ಹಾಗಿಲ್ಲ.
ಸಿನಿಮಾ ಕಥೆಯಲ್ಲಿ ಕೃಷ್ಣ ಮಾಡುತ್ತಿರುವ ಪಾತ್ರ ಏನು? ಹೇಗಿದೆ..? ಈ ಯಾವ ಗುಟ್ಟನ್ನೂ ಚಿತ್ರತಂಡ ಸದ್ಯಕ್ಕೆ ಹೇಳಿಲ್ಲ. ಆದರೆ ಚಿತ್ರವಂತೂ ಅದ್ಧೂರಿಯಾಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ಈ ಚಿತ್ರಕ್ಕಾಗಿ ಕಳೆದ ಒಂದುವರೆ ವರ್ಷದಿಂದ ದೇಹ ದಂಡಿಸುತ್ತ, ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ. ಮೈಸೂರಿನ ಲಲಿತ್ ಮಹಲ್ ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆದಿದೆ ಹಾಗೂ ಚಿತ್ರೀಕರಣಕ್ಕೆ ಚಾಲನೆಯೂ ಸಿಕ್ಕಿದೆ.
ಚಿತ್ರಕ್ಕೆ ಸುಕೇಶ್ ನಾಯಕ ನಿರ್ದೇಶಕರು. ಹನುಮಾನ್, ಕಲ್ಕಿ, ನಾ ಸಾಮಿರಂಗ, ಮಂಗಳವಾರಂ ಮುಂತಾದ ಚಿತ್ರಗಳಿಗೆ ಕ್ಯಾಮೆರಾಮನ್ ಆಗಿದ್ದ ದಶರಥಿ ಶಿವೇಂದ್ರ ಹಾಗೂ ಸಾಯಿ ಶ್ರೀರಾಮ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಸಂಗೀತ ನೀಡುತ್ತಿರುವುದು ಕನ್ನಡದ ವಾಸುಕಿ ವೈಭವ್. ಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್, ಸಾಹಸ ನಿರ್ದೇಶಕ. ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ನ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಹಾಗಂತ ಇವರು ಚಿತ್ರರಂಗಕ್ಕೆ ಹೊಸಬರೇನಲ್ಲ. ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಕಲ್ಯಾಣ್ ಚಕ್ರವರ್ತಿ, ಈ ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದಾರೆ.



