ಕುಂಭಮೇಳ ಎಂದರೆ ಹಿಂದೂಗಳದ್ದು. ಅಲ್ಲಿ ಕೇವಲ ನಾಗಾಸಾಧುಗಳು, ಅಘೋರಿಗಳು, ಸಾಧು ಸಂತರು, ಸ್ವಾಮಿಗಳು, ಆನಂದಮಾರ್ಗಿಗಳು ಇರುತ್ತಾರೆ. ಊಹೂಂ.. ಹಾಗಲ್ಲ. ಅಲ್ಲಿ ಧರ್ಮರಕ್ಷಣೆಗಾಗಿಯೇ 13 ಅಖಾರಗಳಿವೆ. ಒಂದೊಂದು ಅಖಾರಕ್ಕೂ ಒಂದೊಂದು ಕರ್ತವ್ಯ ಇದೆ. ಜನಸಾಮಾನ್ಯರ ಕಣ್ಣಿಗೆ ಒಂದೊಂದು ಆಚರಣೆಯೂ ವಿಶೇಷವೇ. ಹೀಗೆಲ್ಲ ಹೇಳುವಾಗ 13 ಅಖಾರಗಳು ಎನ್ನುತ್ತಾಋಲ್ಲ, ಈ 13 ಅಖಾರಗಳು ಯಾವುವು..? ವಿಶೇಷತೆ ಏನು..? ಎಂಬ ಪ್ರಶ್ನೆಗಳಿವೆ. ಎಲ್ಲದಕ್ಕಿಂತಲೂ ವಿಶೇಷ ಎಂದರೆ ಈ 13 ಅಖಾರಗಳಲ್ಲಿ ಹಿಂದೂಗಳಷ್ಟೇ ಅಲ್ಲ, ಸಿಖ್ಖರ ಪಂಥವೂ ಇದೆ. ಹಿಂದೂಗಳಲ್ಲಿ ಶೈವ ಮತ್ತು ವೈಷ್ಣವ ಪಂಥವೂ ಇದ್ದರೆ, ಸಿಖ್ಖರ ಒಂದು ಪಂಥವೂ ಹಿಂದೂ ಧರ್ಮ ರಕ್ಷಣೆಗೆ ಇರುತ್ತದೆ.
ಮಹಾಕುಂಭಮೇಳದಲ್ಲಿ ಒಟ್ಟು 3 ಪಂಥಗಳು, ಆ ಮೂರೂ ಪಂಥಗಳಲ್ಲಿ ಎಲ್ಲ ಅಖಾರಗಳೂ ಸೇರಿ, 13 ಅಖಾರಗಳು ಬರುತ್ತವೆ. ಶೈವರಲ್ಲಿ 7, ವೈಷ್ಣವ 3 ಹಾಗೂ ಉಡಾಸೀನ್ 3 ಅಖಾರಗಳಿವೆ. ಉಡಾಸೀನ್ ಅಖಾರ ಎಂದರೆ ಅಲ್ಲಿರುವುದು ಸಿಖ್ಖರು.
ಶೈವ ಅಖಾರಗಳನ್ನು ನೋಡುವುದಾದರೆ.. ಅಲ್ಲಿ ಮೊದಲಿಗೆ ಬರುವುದು
ಮಹಾನಿರ್ವಾಣಿ ಅಖಾರ
ಈ ಅಖಾರದ ಸೃಷ್ಟಿಕರ್ತ ಆದಿ ಶಂಕರಾಚಾರ್ಯ. ಕ್ರಿ.ಶ.749ರಲ್ಲಿ ಸ್ಥಾಪನೆಯಾದ ಈ ಅಖಾರದಲ್ಲಿರುವವರು ಋಷಿ ಕಪಿಲಮುನಿಯ ಆರಾಧಕರು. ಇವರ ಕೇಂದ್ರ ಕಚೇರಿ ಅಲಹಾಬಾದ್ ಅಂದರೆ ಈಗ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್. ಇವರ ಕೆಲಸ ವೇದ, ಉಪನಿಷತ್ತುಗಳನ್ನು ಅಧ್ಯಯನ ಮಾಡುವುದು. ಅವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದು. ಸಾಮಾನ್ಯವಾಗಿ ಸಂಸಾರ ಜೀವನ ಜೀವನ ತ್ಯಜಿಸಿ ಕಠೋರ ಬದುಕು ಆರಿಸಿಕೊಂಡವರೇ ಈ ಅಖಾರ ಸೇರುತ್ತಾರೆ. ಕುಂಭಮೇಳದಲ್ಲಿ ರಾಜ್ಸೀ ಸ್ನಾನ ಅಂದ್ರೆ ಶಾಹಿ ಸ್ನಾನ ನಡೆಸುವವರಲ್ಲಿ ಇವರಿಗೇ ಮೊದಲ ಆದ್ಯತೆ.
ಅಟಲ್ ಅಖಾರ
ಸಾಮಾನ್ಯವಾಗಿ ಇವರು ಒಂದು ಕೈಲಿ ಮಾಲೆ, ಇನ್ನೊಂದು ಕೈಲಿ ಈಟಿ ಹಿಡಿದುಕೊಂಡು ಓಡಾಡುತ್ತಾರೆ. ಇದು ಅತ್ಯಂತ ಪುರಾತನ ಅಖಾರಗಳಲ್ಲಿ ಒಂದು. ಇದು ಸ್ಥಾಪನೆಯಾಗಿದ್ದು ಕ್ರಿ.ಶ. 646ರಲ್ಲಿ. ಇವರಲ್ಲಿ ಜಾತಿ ಇರುವುದಿಲ್ಲ. ಇದು 14ನೇ ಶತಮಾನದಲ್ಲಿ ಸೃಷ್ಟಿಯಾದ ಅಖಾರದ ಕೇಂದ್ರ ಕಚೇರಿ ವಾರಾಣಸಿಯ ಚಾಕ್ ಹನುಮಾನ್. ಮುಖ್ಯ ದೇವರು ಗಣಪತಿ. ಈ ಪಂಥದವರು ವೇದ, ಸಂಸ್ಕೃತ ಜ್ಞಾನ, ಯೋಗ, ಧ್ಯಾನವನ್ನೇ ಸಾಧನವನ್ನಾಗಿ ಮಾಡಿಕೊಂಡಿರುತ್ತಾರೆ. ಈ ಅಖಾರದಲ್ಲಿರುವವರು ಕಠೋರ ಜೀವನ ನಡೆಸುತ್ತಾರೆ. ಕಠೋರ ಜೀವನ ಒಪ್ಪಿಕೊಳ್ಳುವವರನ್ನು ಮಾತ್ರವೇ ಈ ಅಖಾರಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ನಿರಂಜನಿ ಅಖಾರ
ಇವರ ಮುಖ್ಯ ಕೆಲಸ ಶಿಕ್ಷಣ ಪ್ರಸಾರ. ವೇದ, ಧರ್ಮಗಳ ಬಗ್ಗೆ ಪ್ರಚಾರ ಮಾಡುವುದು. ಇವರು ಸಾಮಾನ್ಯವಾಗಿ ಶ್ರೀಮಂತರೇ ಆಗಿರುತ್ತಾರೆ. ಇದು ಸ್ಥಾಪನೆಯಾಗಿದ್ದು ಕ್ರಿ.ಶ. 904ರಲ್ಲಿ. ಇವರ ಮುಖ್ಯ ಕಚೇರಿ ಹರಿದ್ವಾರ. ಈ ಅಖಾರದಲ್ಲಿರುವವರು ಶಿವನ ಜೊತೆಗೆ ಪಾರ್ವತಿಯನ್ನೂ ಆರಾಧಿಸುತ್ತಾರೆ. ಕಾರ್ತಿಕೇಯ ಸ್ವಾಮಿ ಮುಖ್ಯ ದೇವರು.
ಜುನಾ ಅಖಾರ
13 ಅಖಾರಗಳಲ್ಲಿ ಅತೀ ದೊಡ್ಡ ಅಖಾರ. ಈ ನಾಗಾಸಾಧುಗಳಿಗೆ ಮಾರ್ಶಲ್ ಆರ್ಟ್ಸ್ ಸೇರಿದಂತೆ ಸಮರ ಕಲೆಗಳ ತರಬೇತಿಯಾಗಿರುತ್ತದೆ. ಅಸ್ತ್ರ, ಶಸ್ತ್ರ ಬಳಸುವವರು. ಹಠಯೋಗಿಗಳು. ಮಹಾಕುಂಭಮೇಳದ ಆಯೋಜನೆಯಲ್ಲಿ ಇವರ ಪಾತ್ರ ದೊಡ್ಡದು. ಈ ಅಖಾರ ಸೃಷ್ಟಿಸಿದವರು ಕೂಡಾ ಶಂಕರಾಚಾರ್ಯರೇ. 8ನೇ ಶತಮಾನದಿಂದ ಇವರ ಕಾರ್ಯಚಟುವಟಿಕೆ ಆರಂಭವಾಗುತ್ತದೆ. ಇವರ ಹೆಡ್ಡಾಫೀಸ್ ವಾರಾಣಸಿಯ ಹನುಮಾನ್ ಘಾಟ್. ದತ್ತಾತ್ರೇಯನ ಆರಾಧಕರು. ಈ ಅಖಾರದಲ್ಲಿ ನಾಗಾಸಾಧುಗಳೇ ಹೆಚ್ಚು. ಧರ್ಮಯುದ್ಧವೇ ಇವರ ಪ್ರಮುಖ ಗುರಿ.
ಆನಂದ ಅಖಾರ
ಹೆಸರೇ ಸೂಚಿಸುವಂತೆ ಜೀವನದ ಆನಂದ ಪಡೆಯಲು ಧರ್ಮ ಮಾರ್ಗದಲ್ಲಿ ನಡೆಯಿರಿ ಎಂಬ ಸಂದೇಶ ರವಾನಿಸುವುದೇ ಇವರ ಕೆಲಸ. ಇವರಿಗೆ ಯಾವುದೇ ಪದ್ಥತಿ, ಸಂಪ್ರದಾಯ, ಶಾಸ್ತ್ರಗಳ ನಿರ್ಬಂಧ ಇಲ್ಲ.ಸೂರ್ಯ ಇವರ ಮುಖ್ಯ ದೇವರು. ಆಧ್ಯಾತ್ಮಿಕ ಜ್ಞಾನ ಮತ್ತು ಶಿಕ್ಷಣ ಇವರ ಪ್ರಮುಖ ಗುರಿ. ವೇದ ಪಂಡಿತರಾಗಿರುತ್ತಾರೆ. ಮಹಾರಾಷ್ಟ್ರದ ನಾಸಿಕ್ ಕೇಂದ್ರ ಸ್ಥಾನ. ಮಹಾಕುಂಭ ಮೇಳದಲ್ಲಿ ಇವರು ಆಚಾರ, ವಿಚಾರ, ಸಂಪ್ರದಾಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.
ಆವಾಹನ್ ಅಖಾರ
ಇವರು ಪ್ರಕೃತಿಯಲ್ಲಿದ್ದುಕೊಂಡು ಪ್ರಕೃತಿಗೇ ಸವಾಲು ಹಾಕುವಂತೆ ಆಚಾರ, ವಿಚಾರಗಳನ್ನು ನಡೆಸುವವರು. ಇವರ ಜೀವನವೂ ಕಠೋರವಾಗಿರುತ್ತದೆ. ಹೀಗಾಗಿಯೇ ಈ ಅಖಾರಕ್ಕೆ ಆವಾಹನ್ ಅಖಾರ ಎಂದು ಹೆಸರಿಡಲಾಗಿದೆ. ಈ ಅಖಾರದ ಸದಸ್ಯರನ್ನು ನೇಮಕ ಮಾಡುವುದು, ಆಯ್ಕೆ ಮಾಡುವುದು ನಾಗಾಸಾಧುಗಳು. ವಾರಾಣಸಿ, ಕೇಂದ್ರಸ್ಥಾನ. ಇವರು ಧರ್ಮ ಯುದ್ಧಕ್ಕೆ ಹೊರಟರೆ ಮೊದಲು ಪಿಂಡ ಪ್ರಧಾನ ಮಾಡಿಯೇ ಹೊರಡುತ್ತಾರೆ. ಸೂರ್ಯನ ಆರಾಧಕರು.
ಅಗ್ನಿ ಅಖಾರ
ಹೆಸರೇ ಹೇಳೋಹಾಗೆ ಇವರು ಅಗ್ನಿಸ್ನಾನ ಮಾಡುವುದರಲ್ಲಿ ಪ್ರವೀಣರಾಗಿರುತ್ತಾರೆ. ಯಜ್ಞ ಯಾಗಾದಿಗಳನ್ನು ನಡೆಸುವುದು ಇವರೇ. ಇವರಲ್ಲಿ ನಾಗಾಸಾಧುಗಳು ಇರುವುದಿಲ್ಲ. ಹಸುಗಳ ಪಾಲನೆ, ರಕ್ಷಣೆ ಇವರ ಮುಖ್ಯ ಧ್ಯೇಯ. ಗುಜರಾತಿನ ಜುನಾಘರ್, ಭವನಾಥ್, ಗಿರಿನಗರ್ ಇವರ ಕೇಂದ್ರಸ್ಥಾನಗಳು. ಗಾಯತ್ರಿ ಮಾತೆಯ ಆರಾಧಕರು.
ಈ 7 ಅಖಾರಗಳು ಮುಗಿದ ನಂತರ ವೈಷ್ಣವ ಅಖಾರಗಳು ಬರುತ್ತವೆ. ಈ ಅಖಾರದಲ್ಲಿರುವವರು ಶಿವನ ಆರಾಧಕರಲ್ಲ. ವಿಷ್ಣುವಿನ ಆರಾಧಕರು. ವಿಷ್ಣು ಮತ್ತು ವಿಷ್ಣುವಿನ ಅವತಾರಗಳನ್ನು ಪೂಜಿಸುತ್ತಾರೆ.
ದಿಗಂಬರ್ ಅನಿ ಅಖಾರ
ಇವರು ಆಧ್ಯಾತ್ಮ, ಧ್ಯಾನ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ರಾಮನ ಭಂಟ ಹನುಮಂತನ ಆರಾಧಕರು.ಇವರಲ್ಲಿಯೂ ನಾಗಾ ಸನ್ಯಾಸಿಗಳು ಬರುತ್ತಾರೆ. ಆದರೆ ಯಾವಾಗಲೂ ಶ್ವೇತ ವಸ್ತ್ರವನ್ನೇ ಧರಿಸಿರುತ್ತಾರೆ. ಇವರು ಶಾಸ್ತ್ರ ಮತ್ತು ಶಸ್ತ್ರ ಪಾರಂಗತರು. ಅಂದರೆ ಇವರಿಗೆ ಜ್ಞಾನವೂ ಇದೆ. ಶಸ್ತ್ರ ಜ್ಞಾನವೂ ಇದೆ.
ನಿರ್ಮೋಹಿ ಅನಿ ಅಖಾರ
ರಾಮಜನ್ಮಭೂಮಿ ಕಾನೂನು ಹೋರಾಟ ನಡೆಸಿದ್ದೇ ಇವರು. ಏಕೆಂದರೆ ಇವರು ವಿಷ್ಣುವಿನ ಅವತಾರವಾದ ರಾಮನನ್ನು ಮಾತ್ರವೇ ಪೂಜೆ ಮಾಡ್ತಾರೆ. ಇವರು ಮುಖ್ಯವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು, ಶಾಸ್ತ್ರ, ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಾರೆ. ಗುಜರಾತಿನ ಸಂಭಾರ್ ಕಥಾ ಕೇಂದ್ರಸ್ಥಾನ. ಕ್ರಿಶ 1784ರಲ್ಲಿ ಸ್ಥಾಪನೆಯಾದ ಅಖಾರ. ಸಂಘಟಿತರಾಗಿರುವ ಇವರ ಪಂಥದಲ್ಲಿ ದೇಶಾದ್ಯಂತ 6 ಲಕ್ಷಕ್ಕೂ ಹೆಚ್ಚು ಸ್ವಾಮಿಗಳಿದ್ದಾರೆ.
ನಿರ್ವಾಣಿ ಅಖಾರ
ಇವರೂ ಕೂಡಾ ಧ್ಯಾನವನ್ನೇ ಪ್ರಚಾರ ಮಾಡುತ್ತಾರೆ. ತತ್ವಶಾಸ್ತ್ರವನ್ನು ಪ್ರಚಾರ ಮಾಡುವುದೇ ಇವರ ಕೆಲಸ. ಇವರೂ ಕೂಡಾ ಹನುಂತನ ಆರಾಧಕರೇ. ಹಣೆಗೆ ಯಾವಾಗಲೂ ಒಂದು ವಿಶಿಷ್ಟ ತಿಲಕ ಧರಿಸಿರುತ್ತಾರೆ. ಕುಸ್ತಿಪಟುಗಳೂ ಹೌದು. ಉತ್ತರ ಪ್ರದೇಶದ ಅಯೋಧ್ಯೆ ಕೇಂದ್ರ ಸ್ಥಾನ. ಆಯುಧಗಳಿಲ್ಲದೆ ಯುದ್ಧ ಮಾಡುವ ತರಬೇತಿ ಪಡೆದಿರುತ್ತಾರೆ.
ಉಡಾಸೀನ್ ಪಂಥ. ಇವರು ಬಹುತೇಕ ಸಿಖ್ಖರು. ಸಿಖ್ಖರ ಧರ್ಮಗುರು ಗುರು ನಾನಕ್ ಹಾಗೂ ಶಿವ ಮತ್ತು ವಿಷ್ಣುವಿನ ಆರಾಧಕರು.
ಬಡಾ ಉಡಾಸೀನ್ ಅಖಾರ
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕೇಂದ್ರಸ್ಥಾನ. ಧಾರ್ಮಿಕ ಸಾಮರಸ್ಯ ಸಾರುವುದು, ಸಮಾಜ ಸೇವೆ ಇವರ ಕೆಲಸ. ಕುಂಭಮೇಳದಲ್ಲಿ ಸೇವೆ ಮಾಡುವುದೇ ಇವರ ಕರ್ತವ್ಯ. ಜಾತಿಗಳನ್ನು ನಂಬುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅಖಾರ. ದೇಶದಲ್ಲಿ 100ಕ್ಕೂ ಹೆಚ್ಚು ಆಶ್ರಮಗಳಿವೆ. ಅಷ್ಟಾಂಗ ಯೋಗ ಸಾಧನೆ ಮಾಡಿದವರು. ಗುರು ಚಂದ್ರದೇವ್ ಇವರ ಗುರು.
ನಯಾ ಉಡಾಸೀನ್ ಅಖಾರ
ಶಿಕ್ಷಣ ಮತ್ತು ಸಮಾಜ ಸೇವೆಯೇ ಇವರ ಗುರಿ. ಧಾರ್ಮಿಕ ಜಿಜ್ಞಾಸೆಗಳ ಬಗ್ಗೆ, ಗೊಂದಲಗಳ ಬಗ್ಗೆ ತಿಳಿಸಿ ಹೇಳುವುದು ಇವರ ಕೆಲಸ. ಕ್ರಿಶ 1846ರಲ್ಲಿ ಸ್ಥಾಪನೆಯಾದ ಅಖಾರ. ಸಂಸ್ಕೃತ ಶಾಲೆ, ಆಸ್ಪತ್ರೆ, ಐಕ್ಯತೆ ಸಾರುವುದೇ ಇವರ ಗುರಿ. ಇವರ ಗುರು ಚಂದ್ರಾಚಾರ್ಯ.
ನಿರ್ಮಲ್ ಅಖಾರ
17ನೇ ಶತಮಾನದಲ್ಲಿ ಕ್ರಿಶ 1765ರಲ್ಲಿ ಸ್ಥಾಪನೆಯಾದ ಅಖಾರ. ಗುರು ಗೋವಿಂದ್ ಸಿಂಗ್ ಸ್ಥಾಪಿಸಿದ ಅಖಾರ. ಧಾರ್ಮಿಕ ತತ್ವಗಳನ್ನು ಪ್ರಚಾರ ಮಾಡುವುದು ಇವರ ಕೆಲಸ. ಸಿಖ್ಖರಲ್ಲಿ ಖಾಲ್ಸಾ ಮತ್ತು ನಿಹಾಂಗ್ ಸಿಖ್ಖರು ಈ ಅಖಾರದಲ್ಲಿರುತ್ತಾರೆ.
ಈ ಎಲ್ಲ ಅಖಾರಗಳಲ್ಲಿ ಶೈವ ಪಂಥದ ಮೊದಲ ಮೂರು ಅಖಾರಗಳನ್ನು ಬಿಟ್ಟರೆ ಉಳಿದೆಲ್ಲ ಅಖಾರಗಳೂ ಧಾರ್ಮಿಕ ಜ್ಞಾನ, ಪರಂಪರೆ, ಸಮಾಜ ಸೇವೆ, ಧಾರ್ಮಿಕ ಸಾಮರಸ್ಯ, ತತ್ವಶಾಸ್ತ್ರದ ಪ್ರಚಾರ, ಯೋಗ, ಧ್ಯಾನ ಇಂಥಹವುಗಳನ್ನೇ ಪ್ರಚಾರ ಮಾಡುವವರು.
ಇಷ್ಟೂ ಅಖಾರಗಳಲ್ಲಿ ದೊಡ್ಡ ಮಟ್ಟದ ಗೌರವ ಇರುವುದು ನಾಗಾಸಾಧುಗಳು ಇರುವ ಅಖಾರಕ್ಕೆ. ಏಕೆಂದರೆ ಉಳಿದವರೆಲ್ಲ ಸಮಾಜದ ಒಳಗೇ ಇದ್ದುಕೊಂಡು ಧರ್ಮ ಪ್ರಚಾರ ಮಾಡಿದರೆ, ನಾಗಾಸಾಧುಗಳು ಮಾತ್ರ, ಸಮಾಜದಿಂದ ದೂರ ಇದ್ದುಕೊಂಡು ಧರ್ಮ ರಕ್ಷಣೆ ಮಾಡ್ತಾರೆ.



