ಬಹುತೇಕ ಹಿಂದೂ ದೇವಾಲಯಗಳು ʻಜಾತ್ಯತೀತʼವಾಗಿವೆ. ಎಷ್ಟೋ ಹಿಂದೂ ದೇವಸ್ಥಾನಗಳ ನಿರ್ವಹಣೆ ಮಾಡುವವರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರವನ್ನು ನಿರ್ವಹಿಸುವುದು ಜೈನ ಧರ್ಮದವರು. ಹಿಂದೂ ಧರ್ಮ ಬೇರೆ ಧರ್ಮಗಳ ಹಾಗಲ್ಲ. ಇದು ಈ ಹಿಂದೆ ತಿರುಪತಿಯಲ್ಲೂ ಇತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಟಿಟಿಡಿ ನೂತನ ಅಧ್ಯಕ್ಷ ಬಿ ಆರ್ ನಾಯ್ಡು.
“ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ, ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜ ದೇವಸ್ಥಾನದಲ್ಲಿ ಹಾಗೂ ಟಿಟಿಡಿ ಮೇಲುಸ್ತುವಾರಿಯ ಎಲ್ಲಾ ದೇವಸ್ಥಾನಗಳಲ್ಲಿ ಹಿಂದೂ ಸಿಬ್ಬಂದಿಯನ್ನು ಮಾತ್ರ ನೇಮಿಸಲು ಚಿಂತನೆ ನಡೆಸಲಾಗಿದೆ. ಟಿಟಿಡಿಯಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕೆಂದು ಖಚಿತಪಡಿಸಿಕೊಳ್ಳುವುದು ತಮ್ಮ ಪ್ರಾಥಮಿಕ ಪ್ರಯತ್ನ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು ಅದನ್ನು ಪರಿಶೀಲಿಸಬೇಕಾಗಿದೆʼʼ ಎಂದು ಹೇಳಿದ್ದಾರೆ.
ಇಂತಹ ನಿರ್ಧಾರ ಏಕೆ ಗೊತ್ತೇ..?
ತಿರುಮಲದ ಶ್ರೀ ವೆಂಕಟೇಶ್ವರ ಸನ್ನಿಧಾನದಲ್ಲಿ ಭಕ್ತರಿಗೆ ವಿತರಿಸಲಾಗುವ ಪ್ರಸಾದದ ಲಡ್ಡು ಪ್ರಸಾದ ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತ್ತು. . ಆಂಧ್ರಪ್ರದೇಶದಲ್ಲಿ ಈ ಹಿಂದೆ ಜಗನ್ ರೆಡ್ಡಿಯವರ ಸರ್ಕಾರವಿದ್ದಾಗ ಲಡ್ಡು ತಯಾರಿಕೆಗೆ ಕೆಳಮಟ್ಟದ ಎಣ್ಣೆಯನ್ನು ಬಳಸಲಾಗುತ್ತಿತ್ತು. ಅವುಗಳಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿರುವ ತೈಲವನ್ನು ಬಳಸಲಾಗುತ್ತಿತ್ತು ಎಂದು ಖುದ್ದು ಈಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಹೇಳಿಕೆ ನೀಡಿದ್ದರು. ವಿವಾದ ಈಗ ಸುಪ್ರೀಂಕೋರ್ಟ್ ಅಂಗಳಕ್ಕೆ ಹೋಗಿದೆ. ವಿವಾದದ ನಂತರ, ಟಿಟಿಡಿಯು ಲಡ್ಡು ತಯಾರಿಕೆಗೆ ದೇವಸ್ಥಾನಕ್ಕೆ ಸರಬರಾಜು ತೈಲ, ತುಪ್ಪದ ಸರಬರಾಜು ಒಪ್ಪಂದವನ್ನು ರದ್ದುಗೊಳಿಸಿ ಕರ್ನಾಟಕದ ಖ್ಯಾತ ಬ್ರಾಂಡ್ ಆದ ನಂದಿನಿ ತುಪ್ಪವನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ದಾಖಲೆಗಳ ಪ್ರಕಾರ ಹಿಂದೂ ಆಗಿದ್ದರೂ, ಮನೆ, ಕುಟುಂಬದಲ್ಲಿ ಕ್ರೈಸ್ತ ಧರ್ಮೀಯರು. ತಾವು ಕ್ರೈಸ್ತ ಧರ್ಮ ಪಾಲಿಸುತ್ತಿರುವುದನ್ನು ಅವರೇ ಹೇಳಿಕೊಂಡಿದ್ದಾರೆ ಕೂಡಾ. ಹೀಗಾಗಿ ಈ ರೀತಿಯ ಪ್ರಮಾದಗಳು ಜರುಗಿವೆ ಎನ್ನುವುದು ವಿರೋಧಿಗಳ ವಾದ.
ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಟಿಟಿಡಿಯಿಂದ ನಿರ್ವಹಿಸಲ್ಪಡುವ ಎಲ್ಲಾ ದೇವಸ್ಥಾನಗಳೂ ಆಂಧ್ರಪ್ರದೇಶ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಟಿಟಿಡಿ ಸಿಬ್ಬಂದಿಯನ್ನು ಸರ್ಕಾರವೇ ನೇಮಿಸುತ್ತದೆ. ಹಾಗಾಗಿ, ಅಲ್ಲಿ ಹಿಂದೂಗಳು ಮಾತ್ರವಲ್ಲದೆ ಅನ್ಯ ಧರ್ಮೀಯರನ್ನೂ ನೇಮಿಸಲಾಗಿದೆ. ಇದರಿಂದಾಗಿಯೇ ಹಿಂದೂ ಧರ್ಮಕ್ಕೆ ಅಪಚಾರ ಎಸಗುವ ಕೆಲಸವಾಗುತ್ತಿದೆ ಎಂಬ ವಾದಗಳೂ ಇವೆ.
ಮುಂದೇನು ಮಾಡುತ್ತಾರೆ..?
ಬಿ ಆರ್ ರೆಡ್ಡಿಯವರು ಇನ್ನೂ ಈ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ. ಹಿಂದೂ ಅಲ್ಲದವರು ಈಗಾಗಲೇ ಕೆಲಸ ಮಾಡುತ್ತಿದ್ದರೆ, ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸುವುದೋ ಅಥವಾ ವಿಆರ್‌ಎಸ್ ತೆಗೆದುಕೊಳ್ಳುವಂತೆ ಹೇಳುವುದೋ ಮಾಡಲಾಗುವುದು ಎನ್ನಲಾಗುತ್ತಿದೆ.
ಈ ಮಧ್ಯೆ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನರೇಶ್ ಕುಮಾರ್ ಅವರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಬೋರ್ಡ್ ಸದಸ್ಯರಾಗಿ ನೇಮಕವಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಇದೇ ಮೊದಲ ಬಾರಿಗೆ ಸವಿತಾ ಸಮಾಜದ ವ್ಯಕ್ತಿಯೊಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಹೊಸದೊಂದು ಕ್ರಾಂತಿಗೆ ಟಿಟಿಡಿ ದೇವಸ್ಥಾನ ಮುಂದಾಗಿದೆ.
ನರೇಶ್ ಕುಮಾರ್ ಅವರಷ್ಟೇ ಅಲ್ಲದೆ ನ್ಯಾ.ಹೆಚ್.ಎಲ್.ದತ್ತು ಹಾಗೂ ದರ್ಶನ್ ಆರ್. ಅವರನ್ನು ಕರ್ನಾಟಕದಿಂದ ನೇಮಕ ಮಾಡಲಾಗಿದೆ.



