ಶ್ರೀರಾಮನ ಹುಟ್ಟುಹಬ್ಬದ ಸಂಭ್ರಮಕ್ಕೆಂದು ಆಚರಿಸುವ ರಾಮನವಮಿ, ಶ್ರೀಕೃಷ್ಣ ಜನ್ಮದಿನಕ್ಕಾಗಿಯೇ ಇರುವ ಕೃಷ್ಣಾಷ್ಟಮಿ, ಉಪವಾಸವಿದ್ದು, ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಶಿವರಾತ್ರಿ, ಅಣ್ಣ ತಂಗಿಯರ ಬಾಂಧವ್ಯ ರಕ್ಷೆಯನ್ನು ಸಾರುವ ರಕ್ಷಾಬಂಧನ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಕ್ಕೆ ನೀಡಲಾಗುವ ಗಾಂಧಿ ಜಯಂತಿಯ ರಜೆ ಎಲ್ಲವನ್ನೂ ಬಿಹಾರ ಸರ್ಕಾರ ರದ್ದು ಮಾಡಿದೆ. ಅಷ್ಟೇ ಅಲ್ಲ ಬಿಹಾರಿಗಳ ಸ್ಥಳೀಯ ಹಬ್ಬಗಳಾದ ತೇಜ್, ವಸಂತ ಪಂಚಮಿ, ಜೀತಿಯಾ ಹಬ್ಬಗಳಿಗೆ ರಜೆ ಇರುವುದಿಲ್ಲ.
ಕೇವಲ ಹಿಂದೂಗಳ ಹಬ್ಬ ರಜೆ ಕಡಿತ ಮಾಡಿರುವುದಷ್ಟೇ ಅಲ್ಲ, ಅದೇ ವೇಳೆ ಮುಸ್ಲಿಮರ ಹಬ್ಬಗಳಿಗೆ ನೀಡುತ್ತಿದ್ದ ರಜೆಯನ್ನು ಹೆಚ್ಚು ಮಾಡಲಾಗಿದೆ. ವಿವಾದಕ್ಕೆ ಕಾರಣವಾಗಿರುವುದೇ ಇದು. ಬಿಹಾರ ಸರ್ಕಾರ 2024ರ ಸರ್ಕಾರಿ ರಜಾದಿನಗಳನ್ನು ಘೋಷಿಸಿದ್ದಲ್ಲದೇ ಅದರಲ್ಲಿ ಕೆಲವೊಂದು ಹಬ್ಬಗಳಿಗೆ ರಜೆಯನ್ನು ಹೆಚ್ಚಳ ಮಾಡಿದ್ದು, ಮತ್ತೊಂದಷ್ಟು ಹಬ್ಬಗಳಿಗೆ ರಜೆಯನ್ನು ಕಡಿತಗೊಳಿಸಿರುವುದು ವಿವಾದಕ್ಕೆ ಗುರಿಯಾಗಿದೆ.
ಮುಸ್ಲಿಮರ ಹಬ್ಬಕ್ಕೆ ರಜೆ ಹಾಗೂ ವಿನಾಯಿತಿ ಏರಿಕೆ
1. ಉರ್ದು ಶಾಲೆಗಳಿಗೆ ಶುಕ್ರವಾರ ರಜಾದಿನ
ಮುಸ್ಲಿಮರ ಪ್ರಾಬಲ್ಯ ಹೆಚ್ಚು ಇರುವ ಮತ್ತು ಉರ್ದು ಶಾಲೆಗಳಿಗೆ ಶುಕ್ರವಾರ ರಜಾ ದಿನವಾಗಿದ್ದು, ಭಾನುವಾರ ಇರುವುದಿಲ್ಲ. ಮುಸಲ್ಮಾನರಿಗೆ ನಮಾಜ್ ಮಾಡಲು ಅನುಕೂಲವಾಗುವ ದೃಷ್ಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶುಕ್ರವಾರ ಮುಸ್ಲಿಮರಿಗೆ ಸರ್ಕಾರಿ ವಾರದ ರಜೆ ಘೋಷಿಸಿದ ದೇಶದ ಮೊದಲ ರಾಜ್ಯ ಬಿಹಾರ. ಅಷ್ಟೇ ಅಲ್ಲ, ಉರ್ದು ಶಾಲೆಗಳು ಅಥವಾ ಮಕ್ತಬ್‌ಗಳಿಗೆ ಮಾತ್ರವಲ್ಲ, ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದ ಯಾವುದೇ ಸರ್ಕಾರಿ ಶಾಲೆಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಇರುತ್ತದೆ. ಆ ಜಿಲ್ಲೆಯ ಡಿಎಂ ಅನುಮತಿ ಪಡೆದರೆ ಸಾಕು.
ಮುಸ್ಲಿಮರ ಹಬ್ಬಗಳ ರಜೆ ಏರಿಕೆ :
ಈದ್ ಮತ್ತು ಬಕ್ರೀದ್ ರಜೆಯನ್ನು ಹೆಚ್ಚಿಸಲಾಗಿದೆ. ಮೊದಲು ಈದ್ ಮತ್ತು ಬಕ್ರೀದ್ ಎರಡು ದಿನಗಳ ರಜೆ ಇತ್ತು. 2024 ರಲ್ಲಿ, ಎರಡೂ ಹಬ್ಬಗಳಲ್ಲಿ ಶಾಲೆಗಳಿಗೆ ಮೂರು ದಿನಗಳ ಕಾಲ ಸರ್ಕಾರಿ ರಜೆ ನೀಡಲಾಗಿದೆ. ಇದರ ಹೊರತಾಗಿ, ಮೊಹರಂನಲ್ಲಿ ಎರಡು ದಿನಗಳು, ಶಾಬ್-ಎ-ಬರಾತ್, ಚೆಹಲ್ಲುಮ್ ಮತ್ತು ಹಜರತ್ ಮೊಹಮ್ಮದ್ ಸಾಹಿಬ್ ಅವರ ಜನ್ಮದಿನದಂದು ತಲಾ ಒಂದು ದಿನ ರಜೆ ಇರುತ್ತದೆ.
ರಾಜ್ಯ ಸರ್ಕಾರದ ನಿಲುವಿಗೆ ಬಿಜೆಪಿ ಆಘಾತ ವ್ಯಕ್ತಪಡಿಸಿದ್ದು, ಬಿಹಾರದಲ್ಲಿ ನಿತೀಶ್ ಸರ್ಕಾರ ಘಜ್ವಾ-ಎ-ಹಿಂದ್ ಕಾನೂನನ್ನು ತರಲು ಬಯಸಿದೆ ಎಂದು ನಾವು ಈ ಹಿಂದೆ ಹೇಳುತ್ತಿದ್ದೆವು. ಈಗ ನಮ್ಮ ಆರೋಪಗಳು ಮತ್ತು ಅನುಮಾನಗಳು ನಿಜ ಎಂದು ಟೀಕಿಸಿದ್ಧಾರೆ. ಲಾಲು ಯಾದವ್ ಮತ್ತು ನಿತೀಶ್ ಸರ್ಕಾರ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಿರುವ ರೀತಿ ನೋಡಿದರೆ ಮುಂದೆ ಅವರು ಮೊಹಮ್ಮದ್ ನಿತೀಶ್ ಮತ್ತು ಮೊಹಮ್ಮದ್ ಲಾಲು ಎಂದು ಬದಲಾಗುತ್ತಾರೆ ಎಂದು ಟೀಕಿಸಿದೆ.
ಬಿಹಾರ ಸರ್ಕಾರದ ಶಿಕ್ಷಣ ಸಚಿವರು ಮಾತ್ರ ಇದು ನನ್ನ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಮಾಡಿರುವ ತಪ್ಪು. ಸರಿಪಡಿಸುತ್ತೇವೆ ಎಂದಿದ್ದಾರೆ.



