ಕಳೆದ ವರ್ಷವಿಡೀ ಹಿಜಾಬ್ ದೇಶದಾದ್ಯಂತ ಸದ್ದು ಮಾಡಿತ್ತು. ವಿವಾದವನ್ನು ಹುಟ್ಟು ಹಾಕಿತ್ತು. ದೇಶದಾದ್ಯಂತ ಶಾಂತಿಯುತ ಪ್ರತಿಭಟನೆಗಳೂ ನಡೆದಿದ್ದವು. ವಿವಾದವೀಗ ಸುಪ್ರೀಂ ಕೋರ್ಟಿನಲ್ಲಿದೆ. ಇನ್ನೂ ವಿವಾದ ಇತ್ಯರ್ಥವಾಗಿಲ್ಲ. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಹಿಜಾಬ್ ತೆಗೆದುಹಾಕಿದ್ದ ಸರ್ಕಾರವನ್ನು ಮತದಾರ ತಿರಸ್ಕರಿಸಿದ್ದಾರೆ. ಹಿಜಾಬ್ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ನಡುವೆಯೇ ಮುಸ್ಲಿಂ ಮಾಲೀಕತ್ವದ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳಿಗೂ ಹಿಜಾಬ್ ಕಡ್ಡಾಯ ಮಾಡಿರುವ ವಿವಾದ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಧಮೋಹ್`ನಲ್ಲಿರುವ ಗಂಗಾ ಜಮುನಾ ಶಾಲೆಯಲ್ಲಿ ಹಿಂದೂ ಹೆಣ್ಣು ಮಕ್ಕಳಿಗೂ ಹಿಜಾಬ್ ಹಾಕಿಸಲಾಗಿದೆ. ಇದು ಬೆಳಕಿಗೆ ಬಂದಿರೋದು ಶಾಲೆಯವರಿಂದಲೇ. ಶಾಲೆಯಲ್ಲಿನ ಟಾಪರ್ಸ್ ಪಟ್ಟಿಯನ್ನು ಬೋರ್ಡ್ ಹಾಕಿಸಿದಾಗ ಅಲ್ಲಿನ ಹಿಂದೂ ವಿದ್ಯಾರ್ಥಿಗಳಿಗೂ ಹಿಜಾಬ್ ಹಾಕಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಟಾಪರ್ಸ್ ಲಿಸ್ಟಿನಲ್ಲಿ ಎಲ್ಲರೂ ಹಿಜಾಬ್ ಧರಿಸಿದ್ದರು. ಆ ಲಿಸ್ಟಿನಲ್ಲಿ ಲಕ್ಷ್ಮೀ ಪಟೇಲ್, ಪಲಕ್ ಜೈನ್, ರೂಪಾಲಿ ಸಾಹು, ಬೃಂದಾ ಹೆಸರುಗಳೂ ಇದ್ದವು. ಆದರೆ ಹಿಜಾಬ್ ಧರಿಸಿದ್ದರು. ಹೀಗೇಕೆ ಎಂದು ಪ್ರಶ್ನೆ ಮಾಡಿದಾಗ ಮೊದಲು ಜಿಲ್ಲಾಧಿಕಾರಿಗಳು ತಮಗೆ ಗೊತ್ತೇ ಇಲ್ಲ ಎಂದಿದ್ದಾರೆ. ನಂತರ ಹಾಗೆ ನಡೆದೇ ಇಲ್ಲ ಎಂದಿದ್ದಾರೆ. ಅದಾದ ನಂತರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಗ ಕೇಸು ದಾಖಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದಾರೆ.
ಈ ಗಂಗಾ ಜಮುನ ಶಾಲೆಯ ಮಾಲೀಕನ ಹೆಸರು ಮುಷ್ತಾಕ್ ಖಾನ್. ಅವರು ಹಿಜಾಬ್‍ನ್ನು ನಮ್ಮ ಶಾಲೆಯ ಸಮವಸ್ತ ಮಾಡಿದ್ದೇವೆ. ಹಿಜಾಬ್ ಕೂಡಾ ಸಮವಸ್ತ್ರದ ಭಾಗ ಎಂದು ಹೇಳಿಕೆ ಕೊಟ್ಟಿದ್ದಾರೆ. ಹಿಜಾಬ್ ಸಮವಸ್ತ್ರದ ಬಗ್ಗೆ ನನಗೆ ಯಾರೂ ಒತ್ತಡ ಹೇರಿಲ್ಲ ಎಂದಿದ್ದಾರೆ. ವಿವಾದದ ನಂತರ ಶಾಲೆಯ ಆವರಣದಲ್ಲಿ ಹಾಗೂ ಪ್ರದೇಶಗಳಲ್ಲಿ ಅಲ್ಲಲ್ಲಿ ಹಾಕಲಾಗಿದ್ದ ಪೋಸ್ಟರುಗಳನ್ನು ತೆಗೆಯಲಾಗಿದೆ.



