ಉಡುಪಿ ಒಂದು ಶಾಲೆಯಲ್ಲಿ ಶುರುವಾದ ಹಿಜಾಬ್ ವಿರೋಧಿ ಹೋರಾಟ ದೇಶಾದ್ಯಂತ ವಿಸ್ತರಿಸಿತ್ತು. ಉಡುಪಿಯಲ್ಲಿನ ಆ ಶಾಲೆಯಲ್ಲಿ ಶಾಲೆಯ ಆವರಣದಲ್ಲಿ ಹಿಜಾಬ್ ಧರಿಸುವುದಕ್ಕೆ ನಿರ್ಬಂಧ ಇರಲಿಲ್ಲವಾದರೂ, ಶಾಲೆಯ ಒಳಗೆ ನಿರ್ಬಂಧ ಇತ್ತು. ಹಲವು ವರ್ಷಗಳಿಂದ ಇದ್ದ ಈ ನಿಯಮದ ವಿರುದ್ಧ ನಾಲ್ವರು ವಿದ್ಯಾರ್ಥಿನಿಯರು ಧ್ವನಿ ಎತ್ತಿ ಕೋರ್ಟಿಗೆ ಹೋಗುವುದರೊಂದಿಗೆ, ಇಡೀ ವಿವಾದಕ್ಕೆ ಧರ್ಮ ದಂಗಲ್ ಸ್ವರೂಪ ಸಿಕ್ಕಿತ್ತು. ಆ ವಿಷಯ ಈಗ ಸುಪ್ರೀಂಕೋರ್ಟಿನಲ್ಲಿದೆ. ಇನ್ನೂ ಇತ್ಯರ್ಥವಾಗಿಲ್ಲ. ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ.
ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದೀನಿ. ಹಿಜಾಬ್ ಹಾಕಿಕೊಂಡು ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಬಿಜೆಪಿಯವರು ಟೋಪಿ ಹಾಕಿಕೊಂಡವರು, ಗಡ್ಡ ಬಿಟ್ಟವರು ಎಂದೆಲ್ಲಾ ಬೇಧ ಮಾಡುತ್ತಾರೆ. ಆದರೆ, ನಾವು ಯಾವುದೇ ಜಾತಿ, ಧರ್ಮಕ್ಕೆ ಕಟ್ಟುಬಿದ್ದಿಲ್ಲ. ನಮ್ಮ ಯೋಜನೆಗಳು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಬಡಜನರಿಗೂ ನಮ್ಮ ಯೋಜನೆಗಳು ತಲುಪಬೇಕು ರೂಪಿಸಿದ್ದೇವೆ ಎಂದಿರುವ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಅಂತ ಎಕ್ಸ್ ನಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.
ಶಿಕ್ಷಣ ಕೇಂದ್ರ/ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡಿದ್ರೆ ಯುವ ಜನಾಂಗವನ್ನು ಧಾರ್ಮಿಕವಾಗಿ ವಿಭಜಿಸಲು ಉತ್ತೇಜನೆ ನೀಡಿದಂತಾಗುತ್ತದೆ. ಇದು ಅಂತರ್ಗತ ಕಲಿಕೆಯ ವಾತಾವರಣವನ್ನು ತಡೆಯುವ ಸಾಧ್ಯತೆ ಇರುತ್ತೆ. ಮಕ್ಕಳು ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಲು ಸಮವಸ್ತ್ರ ಕಡ್ಡಾಯ ಎಂದಿರುವ ವಿಜಯೇಂದ್ರ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿದ್ಧಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯದಲ್ಲಿ ಮತ್ತೊಮ್ಮೆ ಧರ್ಮದಂಗಲ್ ಶುರುವಾಗುವ ಸೂಚನೆ ಕೊಟ್ಟಿದೆ. ಏಕೆಂದರೆ ಈಗಾಗಲೇ ಬಿಜೆಪಿ ವಿರೋಧಿಸಿದೆ. ಹಿಜಾಬ್ ಯುದ್ಧ ಶುರುವಿನ ದಿಗನಳಲ್ಲಿ ಹಿಜಾಬ್ ಪರ ಇದ್ದ ಜೆಡಿಎಸ್ ಕೂಡಾ, ಈಗ ವಿರೋಧಿಸಲಿದೆ. ಹೀಗಾಗಿ ಇದು ಅಂತ್ಯವಲ್ಲ. ಆರಂಭ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆಯೂ ಇರುವುದರಿಂದ ಸಿದ್ದರಾಮಯ್ಯ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ.



