5 ಮತ್ತು 8 ನೇ ತರಗತಿಗಳಿಗೆ ‘ನೋ-ಡಿಟೆನ್ಷನ್ ನೀತಿ’ಯನ್ನು (ಯಾರನ್ನೂ ಅನುತ್ತೀರ್ಣ ಮಾಡಬಾರದು ಎಂಬ ನೀತಿ ಅಥವಾ ಎಲ್ಲರೂ ಪಾಸ್ ಎಂಬ ನೀತಿ) ಕೇಂದ್ರ ಸರ್ಕಾರ ರದ್ದು ಮಾಡಿದೆ. ಇದು ಕೇಂದ್ರದ ಆಡಳಿತದ ಶಾಲೆಗಳಲ್ಲಿ ಸದ್ಯಕ್ಕೆ ಅನ್ವಯವಾಗಲಿದೆ. ದೇಶದ 3000 ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸೈನಿಕ ಶಾಲೆಗಳಿಗೆ ಅನ್ವಯಿಸಲಿದೆ.
ಹೊಸ ನಿಯಮದ ಪ್ರಕಾರ, 5 ಹಾಗೂ 8ನೇ ಕ್ಲಾಸಿನ ವಾರ್ಷಿಕ ಪರೀಕ್ಷೆಗಳಲ್ಲಿ ಫೇಲಾದರೆ ಮಕ್ಕಳಿಗೆ 2 ತಿಂಗಳಲ್ಲಿ ಮರುಪರೀಕ್ಷೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಗಲೂ ಫೇಲ್ ಆದರೆ ಮತ್ತೆ ಅವರನ್ನು 5 ಅಥವಾ 8ನೇ ಕ್ಲಾಸಲ್ಲೇ ಓದಿಸಬೇಕು ಎಂದು ಸೂಚಿಸಲಾಗಿದೆ. 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ತಿದ್ದುಪಡಿಯ ನಂತರ, ಈಗಾಗಲೇ 18 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಎಲ್ಲರೂ ಪಾಸ್’ ಎಂಬ ನೀತಿಯನ್ನು 5 ಹಾಗೂ 8ನೇ ಕ್ಲಾಸ್‌ಗಳಿಗೆ ಜಾರಿ ಮಾಡಲಾಗಿತ್ತು. ನಪಾಸಾದ ಮಕ್ಕಳನ್ನೂ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುತ್ತಿತ್ತು. ಇದು ಶೈಕ್ಷಣಿಕ ಗುಣಮಟ್ಟ ಇಳಿಮುಖಕ್ಕೆ ಕಾರಣವಾಗಿತ್ತು.
ಈಗಿನ ನಿಯಮದ ಪ್ರಕಾರ ಶಿಕ್ಷಣ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುವ ಕಾರಣ, ಈ ನೀತಿಯನ್ನು ಅನುಸರಿಸಬೇಕೇ, ಬೇಡವೇ ಎಂಬುದನ್ನು ಆಯಾ ರಾಜ್ಯಗಳೇ ನಿರ್ಧರಿಸಲಿ ಎಂಬ ಸಲಹೆಯನ್ನೂ ನೀಡಿದೆ.
ಫೇಲ್ ಆದರೂ ಇದೆ ಚಾನ್ಸ್ : ನೋ ಡಿಟೆನ್ಷನ್ ನೀತಿ ರದ್ದು ಬಳಿಕ ಫೇಲಾದ ಮಕ್ಕಳು ಇನ್ನು ಮುಂದೆ ಶಿಕ್ಷಣ ವಂಚಿತರಾಗಬೇಕೇ ಎನ್ನುವುದು ಪ್ರಶ್ನೆ. ಆದರೆ ಹಾಗಿಲ್ಲ. 5/8ನೇ ತರಗತಿಗಳ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದರೆ, ಅವರಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಎರಡು ತಿಂಗಳಲ್ಲಿ ಅವರು ಪರೀಕ್ಷೆಗೆ ಸಿದ್ಧರಾಗಬೇಕು. ಅಲ್ಲಿಯೂ ಫೇಲ್ ಆದರೆ ಮುಂದಿನ ಹಂತಕ್ಕೆ ತೇರ್ಗಡೆ ಮಾಡುವಂತಿಲ್ಲ. ಅದೇ ತರಗತಿಗೆ ಅವರನ್ನು ಮರಳಿ ದಾಖಲಾತಿ ಪಡೆದುಕೊಂಡು ಶಿಕ್ಷಣ ನೀಡಬೇಕು.
ಯಾವುದೇ ಮಕ್ಕಳು ಫೇಲ್ ಆದ ಕಾರಣಕ್ಕಾಗಿ ಶಾಲೆಯಿಂದ ಹೊರಗುಳಿಯವಂತಿಲ್ಲ. ಹಾಗಾಗದಂತೆ ನೋಡಿಕೊಳ್ಳೋದು ಶಾಲೆಯ ಜವಾಬ್ದಾರಿ ಎಂದಿದೆ.
2009ರ ಶಿಕ್ಷಣ ಹಕ್ಕು ತಿದ್ದುಪಡಿ ಕಾಯಿದೆಯ (ಆರ್‌ಟಿಇ) ಪ್ರಕಾರ ಈ ನಿಯಮವನ್ನು ರದ್ದು ಮಾಡಿ, ನಪಾಸಾದ ಮಕ್ಕಳನ್ನೂ ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುತ್ತಿತ್ತು. ಇದು ಶೈಕ್ಷಣಿಕ ಗುಣಮಟ್ಟ ಇಳಿಮುಖಕ್ಕೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ಎಸ್ ಎಸ್ ಎಲ್ ಸಿ ಓದಿದ ಮಕ್ಕಳಿಗೆ ಸರಿಯಾಗಿ ಕನ್ನಡ ಬರುವುದಕ್ಕೆ ಬರೆಯುವುದಿಲ್ಲ ಎಂಬ ಸಮೀಕ್ಷೆ ಚಿಂತೆಗೂ ಕಾರಣವಾಗಿತ್ತು. ಅಂದರೆ ದಾಖಲೆಗಳಲ್ಲಿ ಅವರು ಪಾಸ್ ಆಗಿರ್ತಾರೆ. ಆದರೆ ವಾಸ್ತವದಲ್ಲಿ ಅವರು ಅವಿದ್ಯಾವಂತರೇ ಆಗಿರುತ್ತಾರೆ.
ಆರ್‌ಟಿಇ ಕಾಯಿದೆಯ ಬಳಿಕವೂ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ನೋ ಡೆಟೆನ್ಷನ್ ನೀತಿಯನ್ನು ರದ್ದು ಮಾಡಿವೆ. ಹರಿಯಾಣ ಮತ್ತು ಪುದುಚೇರಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನೀತಿಯನ್ನು ಅನುಸರಿಸಲು ನಿರ್ಧರಿಸಿವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



