ಪ್ರತಿಯೊಬ್ಬ ಸಾಧಕರ ಬದುಕೂ ಒಂದು ಪಾಠವೇ. ಕಷ್ಟವಿಲ್ಲದೆ ಸಾಧನೆ ಮಾಡಿದವರನ್ನು ಹುಡುಕುವುದು ಕಷ್ಟ. ಬಡತನ, ಅವಮಾನ, ನೋವು ಅನುಭವಿಸಿದವರೇನೇ ಸಾಧನೆ ಮಾಡೋದು. ಅದೇ ವಿಧಿವಿಲಾಸವೋ ಏನೋ.. ಸುಮ್ಮನೆ ನೋಡಿದರೆ ಚಿನ್ನದ ಸ್ಪೂನು ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಅಪ್ಪ ಅಮ್ಮನ ಸಾಧನೆ, ಶ್ರೀಮಂತಿಕೆಗೆ ವಾರಸುದಾರರಾಗುತ್ತಾರೆಯೇ ಹೊರತು, ಉತ್ತರಾಧಿಕಾರಿಗಳಾಗಲ್ಲ. ತಂದೆ ತಾಯಿಯ ಸಾಧನೆ ಮೀರಿಸಿದ ಮಕ್ಕಳ ಸಂಖ್ಯೆ ಕಡಿಮೆ ಎಂದರೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಲೀಲಾವತಿಯವರ ಬದುಕೂ ಹಾಗೆಯೇ.
ವಿಧಿ ವಿಲಾಸ. ಅದು ಲೀಲಾವತಿ ನಟಿಸಿದ್ದ ಸಿನಿಮಾ. ವಿಧಿ ಬರೆದಿದ್ದನ್ನು ತಪ್ಪಿಸೋಕೆ ಆಗಲ್ಲ ಎನ್ನುವುದನ್ನೇ ಸಿನಿಮಾ ಮಾಡಲಾಗಿತ್ತು. ಹಾಗೆಯೇ ವಿಧಿ ಲೀಲಾವತಿ ಅವರ ಬದುಕಿನಲ್ಲಿ ಎಲ್ಲವನ್ನೂ ಬರೆದಿತ್ತೇನೋ..
ತಂದೆ ತಾಯಿ ಇಲ್ಲದ ತಬ್ಬಲಿ.. ಅವರಿವರ ಮನೆ ಮುಸುರೆ ತಿಕ್ಕಿ.. :
ಲೀಲಾವತಿ ಅವರ ತಂದೆ ತಾಯಿಯನ್ನು ಕಳೆದುಕೊಂಡಾಗ ಅವರಿಗಿನ್ನೂ ೬ ವರ್ಷ. ಅಪ್ಪ ಅಮ್ಮಂದಿರ ಮಡಿಲಲ್ಲಿ ಆಡಬೇಕಾದ ವಯಸ್ಸಲ್ಲಿ ಕೆಲಸಕ್ಕೆ ಹೋಗಿ ಬದುಕು ಕಟ್ಟಿಕೊಂಡವರು ಲೀಲಾವತಿ. ಆ ದಿನಗಳಲ್ಲಿ ಅವರಿವರ ಮನೆ ಮುಸುರೆ ತಿಕ್ಕುವ ಕೆಲಸವೇ ಅವರಿಗೆ ಸಿಕ್ಕಿದ್ದು. ಆಗ ಮನೆಯ ಮಾಲಕಿಯ ತಲೆಯಲ್ಲಿ ಹೇನು ಹುಡುಕಿದರೆ ನಾಲ್ಕಾಣೆ ಸಿಗುತ್ತಿತ್ತಂತೆ. ಅಪ್ಪ-ಅಮ್ಮ ಇಲ್ಲದೆ ಲೀಲಾವತಿ ಹೊಟ್ಟೆಪಾಡಿಗಾಗಿ ಮಾಡಿದ ಕೆಲಸಗಳು ಒಂದೆರಡಲ್ಲ. ಓದಿದ್ದು ಎರಡನೇ ಕ್ಲಾಸ್ ಅಷ್ಟೇ. ಒಮ್ಮೆ ಬಿಸಿ ಎಣ್ಣೆ ಬಾಂಡ್ಲಿಯೊಳಗೆ ಲೀಲಾವತಿ ಕಾಲು ಹಾಕ್ಬಿಟ್ಟಿದ್ದರಂತೆ. ಅಲ್ಲಿಗೆ ಲೀಲಾವತಿಯ ಸ್ಕೂಲಿನ ಭಾಗ್ಯವೂ ಮುಚ್ಚಿತ್ತು.
ಸಿನಿಮಾಗಳು ಸೃಷ್ಟಿಸಿದ್ದ ಬಣ್ಣ ಬಣ್ಣದ ಬದುಕು.. :
ಆ ಬಡತನದಲ್ಲೂ ಲೀಲಾವತಿಯ ಕಣ್ಣಲ್ಲಿ ಆಸೆ ಹುಟ್ಟಿಸಿದ್ದು ಸಿನಿಮಾಗಳು. ಸಿನಿಮಾ ಮಾಡಿದರೆ ದುಡ್ಡು ಸಿಗುತ್ತೆ ಅಂತ ಜನ ಹೇಳೋದು ಕೇಳಿ.. ಅವಕಾಶಗಳನ್ನು ಅರಸಿ ಸೀದಾ ಮೈಸೂರಿಗೆ ಬಂದರಂತೆ ಲೀಲಾವತಿ. ಅಲ್ಲಿಗೆ ಬಂದು ನಾಟಕ ಕಂಪೆನಿ ಸೇರಿದರು. ಸುಬ್ಬಯ್ಯ ನಾಯ್ಡು ಅವರ ಡ್ರಾಮಾ ಕಂಪನಿಯಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸೋಕೆ ತೊಡಗಿದರು.
ನಟಿಸಿದ್ರಷ್ಟೇ ಊಟ ಎಂದಾಗ.. ನಿದ್ರೆಯಲ್ಲೂ ಪ್ರಾಕ್ಟೀಸ್ :
ಚೆನ್ನಾಗಿ ನಟಿಸಿದ್ರಷ್ಟೇ ಊಟ ಎಂದು ಹೇಳುತ್ತಿದ್ದರಿಂದ ನಿದ್ರೆಯಲ್ಲೂ ನಾಟಕದ ಡೈಲಾಗ್ ಕನವರಿಸುತ್ತಿದ್ದರಂತೆ ಲೀಲಾವತಿ. ಹಾಗೆ ನಟಿಸುತ್ತಿದ್ದ ಲೀಲಾವತಿಗೆ ನಾಟಕದಲ್ಲಿನ ಚಂಚಲಕುಮಾರಿ ಪಾತ್ರ ಹೆಸರು ತಂದುಕೊಟ್ಟಿತ್ತು. ಬಳಿಕ ಶಂಕರ್ ಸಿಂಗ್ ಅವರ ‘ನಾಗ ಕನ್ನಿಕೆ’ ಚಿತ್ರದಲ್ಲಿ ಲೀಲಾವತಿ ಅಭಿನಯಿಸಿದರು. ಆನಂತರ ಮಹಾಲಿಂಗ ಭಾಗವತರ್ ಅವರ ನಾಟಕದ ಕಂಪನಿಯನ್ನ ಲೀಲಾವತಿ ಸೇರಿಕೊಂಡರು. ಮಹಾಲಿಂಗ ಭಾಗವತರ್ ಅವರ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿ’ಯಲ್ಲಿ ಹಲವು ನಾಟಕಗಳಲ್ಲಿ ಲೀಲಾವತಿ ನಟಿಸಿದರು.
1958ರಲ್ಲಿ ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಲೀಲಾವತಿ ನಟಿಸಿದರು. ಅಲ್ಲಿಂದ ಅವರಿಗೆ ಚಿತ್ರರಂಗದಿಂದ ಹೆಚ್ಚು ಅವಕಾಶಗಳು ಬರಲಾರಂಭಿಸಿತು. ‘ಮಾಂಗಲ್ಯ ಯೋಗ’, ‘ಧರ್ಮ ವಿಜಯ’, ‘ರಣಧೀರ ಕಂಠೀರವ’ ಮುಂತಾದ ಚಿತ್ರಗಳಲ್ಲಿ ಲೀಲಾವತಿ ಕಾಣಿಸಿಕೊಂಡರು. ‘ರಾಣಿ ಹೊನ್ನಮ್ಮ’ ಸಿನಿಮಾದ ಮೂಲಕ ಲೀಲಾವತಿ ಪೂರ್ಣ ಪ್ರಮಾಣದ ನಾಯಕಿಯಾದರು.
ಅದಾದ ಮೇಲೆ ಲೀಲಾವತಿ ಜನಪ್ರಿಯತೆಯೂ ಏರಿತು. ಡಾ.ರಾಜ್, ಉದಯಕುಮಾರ್, ಕಲ್ಯಾಣ ಕುಮಾರ್, ಎಂಜಿಆರ್, ಶಿವಾಜಿ ಗಣೇಶನ್ ಸೇರಿದಂತೆ ತಮಿಳು ಮತ್ತು ಕನ್ನಡದಲ್ಲಿ ಎಲ್ಲ ಸ್ಟಾರ್ ನಟರ ಜೊತೆ ನಟಿಸಿದರು. ರಾಜ್ ಜೊತೆಯಲ್ಲಿಯೇ ೩೬ ಚಿತ್ರಗಳಲ್ಲಿ ಹೀರೋಯಿನ್.
ಗರ್ಭಿಣಿ ಎಂದಾಗುತ್ತಿದ್ದಂತೆಯೇ ಚಿತ್ರರಂಗ ದೂರವಿಟ್ಟಿತು.. :
ಯಶಸ್ಸಿನ ಉತ್ತುಂಗದಲ್ಲಿದ್ಧಾಗಲೇ ತಾಯಿಯಾದರು. ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಲೀಲಾವತಿ ಅವರಿಗೆ ಚಿತ್ರರಂಗದ ಬಾಗಿಲು ಬಂದ್ ಆಯಿತು. ಆಗ ಮತ್ತೆ ಹೊಟ್ಟೆಪಾಡಿಗಾಗಿ ನಾಟಕಕ್ಕೆ ಹೋದ ಲೀಲಾವತಿಗೆ, ಬಾಣಂತನ ಮುಗಿದ ಮೇಲೆ ದೊರಕಿದ್ದು ಪೋಷಕ ನಟಿಯ ಪಾತ್ರಗಳಷ್ಟೇ.
ಅದಾದ ಮೇಲೆ ಅಮ್ಮ, ಅತ್ತೆ, ಅಜ್ಜಿಯ ಪಾತ್ರಗಳೇ ಲೀಲಾವತಿಗೆ ಖಾಯಂ ಆದವು. ಚಿತ್ರರಂಗವನ್ನು ಕನ್ನಡಕ್ಕೆ ತಂದ ಸಾಧಕರ ತಂಡದಲ್ಲಿದ್ದ ಲೀಲಾವತಿ, ಆಮೇಲೆ ಕೆಲವು ಚಿತ್ರಗಳಿಗೆ ನಿರ್ಮಾಪಕಿಯೂ ಆದರು. ಮಗ ವಿನೋದ್ ರಾಜ್ ಅವರಿಗಾಗಿ ಕಾಲೇಜ್ ಹೀರೋ’, ‘ಕನ್ನಡದ ಕಂದ’, ‘ಶುಕ್ರ’, ‘ಯಾರದು’ ಚಿತ್ರಗಳಲ್ಲಿ ಬಂಡವಾಳ ಹಾಕಿದರು. ಕೆಲವೊಮ್ಮೆ ಗೆದ್ದರು. ಕೆಲವೊಮ್ಮೆ ಸೋತರು.
ನಾಯಕಿ.. ನಿರ್ಮಾಪಕಿ.. ರೈತ ಮಹಿಳೆಯಾಗಿ ನಿಂತಾಗ.. :
ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಗೌರವ ಡಾಕ್ಟರೇಟ್, ಡಾ.ರಾಜಕುಮಾರ್ ಪ್ರಶಸ್ತಿಗಳನ್ನೆಲ್ಲ ಸ್ವೀಕರಿಸಿದ ಲೀಲಾವತಿ, ಕೃಷಿಕರಾಗಿಯೂ ಗೆದ್ದವರು. ಸಿನಿಮಾಗಳ ಜೊತೆ ಜೊತೆಗೇ ರೈತ ಮಹಿಳೆಯಾಗಿ ಹಣ್ಣು, ತರಕಾರಿ ಬೆಳೆದ ಲೀಲಾವತಿ, ಬಣ್ಣದ ಬದುಕಿನಲ್ಲಿ ಬದುಕಿದ್ದು ಕನಸೇನೋ ಎಂಬಂತೆ ಅಪ್ಪಟ ರೈತ ಮಹಿಳೆಯಾದರು. ೮೦ರ ದಶಕದಲ್ಲಿ ತರಕಾರಿಗಳ ಮಾರಾಟದಲ್ಲೇ ದಿನಕ್ಕೆ ೧೦ ಸಾವಿರ ದುಡಿಯುತ್ತಿದ್ದ ಲೀಲಾವತಿ, ತಾವಿದ್ದ ಹಳ್ಳಿಯ ಸುತ್ತಮುತ್ತ ಬಡವರ ಬಂಧುವಾಗಿದ್ದರು.
ಜನರಿಗಾಗಿ ಒಂದು ಆಸ್ಪತ್ರೆ ಕಟ್ಟಿಸಿದ್ದ ಲೀಲಾವತಿ, ಕೊನೆಯ ದಿನಗಳಲ್ಲಿ ಪಶು ಆಸ್ಪತ್ರೆಯನ್ನೂ ಕಟ್ಟಿಸಿದ್ದರು. ಕೆಲವೇ ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.
ಒಂದು ಕಾಲದಲ್ಲಿ ಹೊಟ್ಟೆಪಾಡಿಗಾಗಿ ತುತ್ತು ಅನ್ನಕ್ಕಾಗಿ ಮುಸುರೆ ತಿಕ್ಕಿದ್ದ ಅದೇ ಬಾಲಕಿ, ಸಾಯುವ ವಯಸ್ಸಿನಲ್ಲಿ ಅದೆಷ್ಟೋ ಕುಟುಂಬಗಳ ಕಣ್ಣಿರು ಒರೆಸುವ ಸಾಧಕಿಯಾಗಿದ್ದರು. ನೋವು ಮಾತ್ರ ಅವರ ಹೃದಯಲ್ಲಿ ಶಾಶ್ವತವಾಗಿ ನೆಲೆಯೂರಿತ್ತು. ಆ ನೋವನ್ನು ಅವರು ವಿಷದಂತೆ ನುಂಗಿಕೊಂಡೇ ಬದುಕಿಬಿಟ್ಟರು.



