ಈಗಿನ ಕಾಲದಲ್ಲಿ ಒಮ್ಮೆ ನಾಯಕಿಯಾದರೆ ಸಾಕು, ಸ್ಟಾರ್ ಪಟ್ಟ ಸಿಕ್ಕರೆ ಮುಗೀತು.. ಪಾತ್ರಕ್ಕೆ ಎಷ್ಟೇ ಮಹತ್ವ ಇರಲಿ, ಬೇರೆ ಕ್ಯಾರೆಕ್ಟರ್ʻನಲ್ಲಿ ನಟಿಸಲ್ಲ. ನಾಯಕಿಯೇ ಆಗಬೇಕು ಎಂದು ಹಠಕ್ಕೆ ಬೀಳ್ತಾರೆ. ನಾಯಕರೂ ಇದಕ್ಕೆ ಹೊರತಲ್ಲ. ಚಿತ್ರರಂಗವೂ ಹಾಗೆ.. ಪಾತ್ರ ಚೆನ್ನಾಗಿದೆ ಎಂದು ಒಮ್ಮೆ ಬೇರೆ ಪಾತ್ರಗಳಿಗೆ ಒಪ್ಪಿಕೊಂಡರೆ, ಅಂತಹುದ್ದೇ ಪಾತ್ರಗಳಿಗೆ ಬ್ರಾಂಡ್ ಮಾಡಿ ಬಿಡುತ್ತೆ. ನಾಯಕ, ನಾಯಕಿಯರು ಹೆದರುವುದೇ ಅದಕ್ಕೆ.
ಆದರೆ ಆಗಿನ ಕಾಲದಲ್ಲಿ ಇಂತಾದ್ದೆಲ್ಲ ಇರಲಿಲ್ಲ. ರಾಜ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಪಂತುಲು ಮೊದಲಾದವರೆಲ್ಲ ಒಬ್ಬೊಬ್ಬರ ಚಿತ್ರಗಳಲ್ಲಿ ನಟಿಸುತ್ತಿದ್ದರು. ಖಳನಟರಾಗಿ, ಪೋಷಕ ನಟರಾಗಿಯೂ ನಟಿಸುತ್ತಿದ್ದರು. ನಾಯಕಿಯರೂ ಅದಕ್ಕೆ ಹೊರತಲ್ಲ. ಅದಕ್ಕೆ ಸಾಕ್ಷಿ ರಾಜ್ ಲೀಲಾ ಜೋಡಿ.
ಡಾ.ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿ. ಆಗಿನ ಕಾಲದಲ್ಲಿ ಅತ್ಯಂತ ಯಶಸ್ವಿ ಜೋಡಿ ಎಂದೇ ಹೇಳಬೇಕು. ಇಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳು ೩೬. ಒಟ್ಟಾರೆಯಾಗಿ ಒಟ್ಟಿಗೇ ನಟಿಸಿದ್ದ ಚಿತ್ರಗಳು ೪೬ಕ್ಕೂ ಹೆಚ್ಚು. ಇವರಿಬ್ಬರೂ ಒಟ್ಟಿಗೇ ನಟಿಸಿದ್ದ ಯಾವ ಚಿತ್ರವೂ ಸೋತಿಲ್ಲ ಎನ್ನುವುದೂ ಅಷ್ಟೇ ಗಮನಾರ್ಹ. ನಾಯಕ ನಾಯಕಿಯಾದವರು ಬೇರೆ ಬೇರೆ ಸಂಬಂಧಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ರಾಜ್ ಜೊತೆ ನಾಯಕಿಯಾಗಿ, ಅತ್ತೆ, ಅತ್ತಿಗೆ ತಂಗಿ, ಸೊಸೆಯಾಗಿ ಕಾಣಿಸಿಕೊಂಡಿದ್ದರು ಲೀಲಾವತಿ.
ಒಟ್ಟಿಗೇ ನಟಿಸಿದ ಅಷ್ಟೂ ಚಿತ್ರಗಳು ಸೂಪರ್ ಹಿಟ್ :
ವಿಧಿ ವಿಲಾಸ, ಜೀವನ ತರಂಗ, ಕನ್ಯಾ ರತ್ನ, ಕುಲವಧು, ಮಲ್ಲಿ ಮದುವೆ, ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಇದೆ ಮಹಾಸುದಿನ, ನಾಗಪೂಜಾ, ವಾತ್ಯಲ್ಯ, ಪ್ರೇಮಮಯಿ, ತೂಗುದೀಪ, ಗಂಗೆ ಗೌರಿ, ಭಾಗ್ಯ ದೇವತೆ, ಉಯ್ಯಾಲೆ, ವಸಂತ ಗೀತ, ಎರಡು ನಕ್ಷತ್ರಗಳು, ಮಹಾಸತಿ ಅನಸೂಯ, ಸಿಪಾಯಿ ರಾಮು, ಶ್ರಾವಣ ಬಂತು, ಮೂರೂವರೆ ವಜ್ರಗಳು, ಜಗಜ್ಯೋತಿ ಬಸವೇಶ್ವರ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಮನ ಮೆಚ್ಚಿದ ಮಡದಿ, ಚಂದ್ರಹಾಸ, ಮದುವೆ ಮಾಡಿ ನೋಡು, ಮೋಹಿನಿ ಬ್ರಹ್ಮಾಸುರ, ದಶಾವತಾರ, ಭೂದಾನ, ಧರ್ಮ ವಿಜಯ, ಕಣ್ತೆರದು ನೋಡು, ವೀರ ಕೇಸರಿ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ, ಜ್ವಾಲಾಮುಖಿ, ಅಬ್ಬಾ ಆ ಹುಡುಗಿ, ರಣಧೀರ ಕಂಠೀರವ, ಕರುಣೆಯೇ ಕುಟುಂಬದ ಕಣ್ಣು, ಕಲಿತರೂ ಹೆಣ್ಣೆ, ನಂದಾ ದೀಪ, ವಾಲ್ಮೀಕಿ.. ಹೀಗೆ ನಟಿಸಿದ್ದ ಚಿತ್ರಗಳು ಹಲವು.
ನಾಯಕಿ..ಅತ್ತೆ.. ಅತ್ತಿಗೆ.. ನಾದಿನಿ.. ಸೋದರತ್ತೆ.. ಸೊಸೆ :
ಅತ್ತೆಯಾಗಿ : ನಾ ನಿನ್ನ ಮರೆಯಲಾರೆ, ವಸಂತ ಗೀತ..
ಅತ್ತಿಗೆಯಾಗಿ : ಪ್ರೇಮಮಯಿ
ನಾದಿನಿಯಾಗಿ : ಕಲಿತರೂ ಹೆಣ್ಣೆ
ಸೋದರತ್ತೆಯಾಗಿ : ಶ್ರಾವಣ ಬಂತು
ಸೊಸೆಯಾಗಿ : ಕಿತ್ತೂರು ಚೆನ್ನಮ್ಮ
ತಂಗಿಯಾಗಿ : ವಾತ್ಸಲ್ಯ
ಹೀಗೆ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದರು. ಡಾ.ರಾಜ್ ಕುಮಾರ್ ಲೀಲಾವತಿ ಜೋಡಿ ಕನ್ನಡ ಚಿತ್ರರಂಗದ ಒಂದು ವಿಶೇಷ ಇತಿಹಾಸ. ಇಷ್ಟೆಲ್ಲ ಇದ್ದರೂ ರಾಜ್ ಅವರಿಗೆ ಲೀಲಾವತಿ ತಾಯಿಯಾಗಿ ಮಾತ್ರ ನಟಿಸಿಲ್ಲ. ಉಳಿದಂತೆ ಸಾಹುಕಾರ್ ಜಾನಕಿ, ಪಂಡರಿಭಾಯಿ, ಕಾಂಚನ ಮೊದಲಾದ ನಟಿಯರು ನಾಯಕಿಯಾಗಿ ಅಷ್ಟೇ ಅಲ್ಲ, ರಾಜ್ ಅವರಿಗೆ ತಾಯಿಯಾಗಿಯೂ ನಟಿಸಿದ್ದಾರೆ. ಲೀಲಾವತಿ ಮಾತ್ರ ಹಾಗೆ ತಾಯಿಯಾಗಿ ನಟಿಸಲಿಲ್ಲ.



