ಕೋಗಿಲು ಲೇಔಟ್. ಇಲ್ಲಿ ಲೇಔಟ್ ಎಂಬ ಪದ ಇದೆ ಎಂದ ಮಾತ್ರಕ್ಕೆ ಇದು ಸಕ್ರಮ ಅಲ್ಲ. ಕಲ್ಲಿನ ಕ್ವಾರಿ ಸುತ್ತ ಆಕ್ರಮಿಸಿಕೊಂಡು ಕಟ್ಟಿಕೊಂಡಿದ್ದ ಮನೆಗಳಷ್ಟೇ. ಅದು ಅಪ್ಪಟ ಬಿಬಿಎಂಪಿ ಸರ್ಕಾರಿ ಜಾಗ. ಇತ್ತೀಚೆಗೆ ಅಲ್ಲಿದ್ದವರನ್ನು ತೆರವು ಮಾಡಿ, ಕಾನೂನಿನ ಪಾಠದ ಮಾಡಿದ್ದ ಸರ್ಕಾರ, ಯಾವಾಗ ಕೇರಳ ಸಿಎಂ ಪಿಣರಾಯಿ ವಿಜಯನ್, ತಮ್ಮದೇ ಪಕ್ಷದ ಕೆಸಿ ವೇಣುಗೋಪಾಲ್ ಗುರ್ ಗುರ್ ಎಂದರೋ.. ಸಡನ್ನಾಗಿ ವರಸೆ ಬದಲಿಸಿಬಿಟ್ಟಿತು. ಅವರಿಗೀಗ ಕರ್ನಾಟಕ ಸರ್ಕಾರ ಮನೆಯನ್ನಷ್ಟೇ ಕೊಡ್ತಾ ಇಲ್ಲ. ಮನೆ ಕಟ್ಟುವುದಕ್ಕೆ ಹಣವನ್ನೂ ಕೊಡ್ತಿದೆ. ಜಾಗದ ಸಮೇತ. ಆದರೆ ಗೂಗಲ್ ಮ್ಯಾಪ್ ಹೇಳುತ್ತಿರುವ ಸತ್ಯವೇ ಬೇರೆ. ಇಲ್ಲಿ ಆ ಮ್ಯಾಪ್ ಇವೆ. ಅವುಗಳನ್ನು ನೀವೂ ಪರಿಶೀಲನೆ ಮಾಡಬಹುದು.
ಇಲ್ಲಿ ಗೂಗಲ್ ಅರ್ಥ್ ಮ್ಯಾಪ್ ಇದೆ. ಅದು 2016 ರಿಂದಲೂ ಇದೆ. ಬೇಕಾದರೆ ಚೆಕ್ ಮಾಡಿಕೊಳ್ಳಬಹುದು. ಅಲ್ಲಿ ಇರುವುದು ಕಲ್ಲಿನ ಕ್ವಾರಿ. ಕೆರೆಯೂ ಅಲ್ಲ, ನದಿಯೂ ಅಲ್ಲ. ಕಲ್ಲು ತೆಗೆದ ಮೇಲೆ ಹಳ್ಳವಾಗಿದೆ. ಆ ಹಳ್ಳದಲ್ಲಿ ನೀರು ನಿಂತಿದೆ. ಅದನ್ನು ಯಾರೂ ಮುಚ್ಚಿಲ್ಲ. ಆ ಕಲ್ಲಿನ ಕ್ವಾರಿಯನ್ನು ಸ್ಟೆಪ್ ಬೈ ಸ್ಟೆಪ್ ನೋಡುತ್ತಾ ಬಂದರೆ, ಅಂದರೆ 2016ರಿಂದ 2025ರವರೆಗೆ ನೋಡುತ್ತಾ ಬಂದರೆ, 2023ರವರೆಗೂ ಅಲ್ಲಿ ನೀರು ನಿಂತಿತ್ತು. 2024ರಲ್ಲಿ ದಿಢೀರನೆ ಅಲ್ಲಿ ಮಣ್ಣು ಸುರಿದರು. ಮಣ್ಣು ಸುರಿದ ಮರುದಿನದಿಂದಲೇ ಸೃಷ್ಟಿಯಾಗಿದ್ದೇ ಈ ಸ್ಲಂ. ಕೇವಲ 2 ವರ್ಷದಲ್ಲಿ ಇಲ್ಲಿ ನೂರಾರು ಮನೆಗಳು ಬಂದವು. ಯಾವುದೂ ಕೂಡಾ ಮನೆ ಅಲ್ಲ. ಎಲ್ಲವೂ ಕೇವಲ ಸಿಮೆಂಟ್ ಇಟ್ಟಿಗೆಯನ್ನು ಒಂದರ ಮೇಲೊಂದು ಜೋಡಿಸಿದ ಝೋಪಡಿಗಳಷ್ಟೇ. ಆದರೂ, ಈಗ ಅಲ್ಲಿರುವ ಬಹುತೇಕರು ಮುಸ್ಲಿಂ ಎಂಬ ಕಾರಣಕ್ಕೆ ಪರಿಹಾರ ಕೊಡುವುದಕ್ಕೆ ಹೊರಟಿದೆ. ಒಟ್ಟು 167 ಮನೆಗಳು.
ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಇಬ್ರಾಹಿಂ ಹೇಳಿದಂತೆ ಅವರೇನೂ 30 ವರ್ಷದಿಂದ ಮನೆ ಇಲ್ಲದೆ ಅಲ್ಲಿಯೇ ನೆಲೆಸಿಲ್ಲ. ಇಪ್ಪತ್ತು ವರ್ಷ, ಮೂವತ್ತು ವರ್ಷ ಯಾರಾದರೂ ವಾಸವಾಗಿದ್ದರೆ, ಅವರೇ ಭೂಮಿಯ ಒಡೆಯ. ಮನೆ ಕಳೆದುಕೊಂಡವರು ಭಿಕ್ಷಕರು, ಫಕೀರರು.. ಎಂಬ ಇಬ್ರಾಹಿಂ ಡೈಲಾಗಿಗೆ ಅರ್ಥ ಇಲ್ಲ.
ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅರ್ಹರಿಗೆ ಪರಿಹಾರದ ರೂಪದಲ್ಲಿ ಬೈಯಪ್ಪನಹಳ್ಳಿ ಸರ್ವೆ ನಂಬರ್ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಹೊಸ ವರ್ಷದ ಆರಂಭದ ದಿನ ಮನೆ ಸಿಗಲಿದೆ. 7 ಕಿ.ಮೀ ಅಂತರದಲ್ಲಿ ತಲಾ ಒಂದು ಮನೆಗೆ 11.2 ಲಕ್ಷ ರೂ ಮೌಲ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಹಂಚಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ , ಜಿಬಿಎ ಮುಖ್ಯ ಆಯುಕ್ತ ಡಾ. ಮಹೇಶ್ವರರಾವ್ ಅವರೊಂದಿಗೆ ಸಭೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ 1 ಲಕ್ಷ, ಬಿಬಿಎಂಪಿಯಿಂದ 5 ಲಕ್ಷ, ವಸತಿ ನಿಗಮ ಹಣ ಎಲ್ಲವೂ ಸೇರಿ ಸುಮಾರು 8 ಲಕ್ಷ ಸರ್ಕಾರದಿಂದಲೇ ಆಗುತ್ತದೆ. ಕಟ್ಟಿರುವ ಮನೆ. ಈಗ ಬರುತ್ತಿರುವ ಪ್ರಮಾಣ ನೋಡಿದರೆ, ಉಳಿದ ಹಣವನ್ನು ಕೊಡುವುದಕ್ಕೆ ಜಮೀರ್ ಅಹ್ಮದ್ ಮುಂದಾಗಿದ್ದಾರೆ ಎಂಬ ಮಾಹಿತಿಗಳಿವೆ.
ಆದರೆ ಅರ್ಥವಾಗದೇ ಇರುವುದು, ಕೇವಲ 2 ವರ್ಷಗಳ ಹಿಂದೆ ಬಂದು, ಇಲ್ಲಿ ನೆಲೆಸಿರುವವರು ನಮ್ಮ ಮತದಾರರು, ನಮ್ಮ ರಾಜ್ಯದವರು ಎಂಬ ಮಾಹಿತಿ ಕೇರಳ ಸರ್ಕಾರಕ್ಕೆ ಇರುತ್ತದೆ ಎಂದರೆ ಅವರ ನೆಟ್ ವರ್ಕ್ ಎಂಥದ್ದಿರಬಹುದು..?



