ವಕ್ಫ್ ದಾಖಲೆಯಲ್ಲಿ ಇದೀಗ ರೈತರ ಪುಟ್ಟ ಪುಟ್ಟ ಜಮೀನುಗಳೂ, ಗುಂಟೆಗಳ ಲೆಕ್ಕದಲ್ಲಿ, ಎಕರೆಗಳ ಲೆಕ್ಕದಲ್ಲಿ ಸೇರ್ಪಡೆಯಾಗಿವೆ. ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಷ್ಟೇ ಅಲ್ಲ, ಬಿಜೆಪಿ ಸರ್ಕಾರ ಇದ್ದಾಗಲೂ ಸೇರ್ಪಡೆಯಾಗಿವೆ. ಇದರಲ್ಲಿ ಪಕ್ಷಗಳ ನಡುವೆ ವ್ಯತ್ಯಾಸವೇನಿಲ್ಲ. ಏಕೆಂದರೆ ಅದು ವಕ್ಫ್ ಮಂಡಳಿಗೆ ಇರುವ ಅಧಿಕಾರ. ಇಷ್ಟಕ್ಕೂ ರಾಜ್ಯದಲ್ಲಿ ಇದುವರೆಗೆ ಬೆಳಕಿಗೆ ಬಂದಿರುವ ವಕ್ಫ್ ದಾಖಲೆಗಳಲ್ಲಿ ಕಂಡು ಬಂದಿರುವ ಮಠ, ದೇವಸ್ಥಾನ, ಸರ್ಕಾರಿ ಶಾಲೆ, ಐತಿಹಾಸಿಕ ಸ್ಥಳಗಳು ಯಾವುವು.. ನೋಡುತ್ತಾ ಹೋದರೆ ಅಚ್ಚರಿ ಎನಿಸಬಹುದಾದ ಪಟ್ಟಿ ಇಲ್ಲಿದೆ.
ವಕ್ಫ್ ದಾಖಲೆಯಲ್ಲಿರುವ ಮಠಗಳು
ಸಿಂಧಗಿಯಲ್ಲಿರುವ ವಿರಕ್ತ ಮಠ. ಈ ಮಠಕ್ಕೆ ಬಸವಣ್ಣನವರ ಕಾಲದಿಂದಲೂ ಇತಿಹಾಸ ಇದೆ. 12ನೇ ಶತಮಾನದ ಮಠವಿದು.
ಗದಗ ಜಿಲ್ಲೆಯ ನರೇಗಲ್ ತಾಲೂಕಿನ ಅನ್ನದಾನೇಶ್ವರ ಮಠ. ಮಠದ ಆಸ್ತಿಯಲ್ಲಿ ಮಠದ ಆಸ್ತಿ ಉತಾರದಲ್ಲಿ ರೆಹಮಾನ್ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದೆ. ಮಠಕ್ಕೆ ೫೦೦ ವರ್ಷಗಳ ಇತಿಹಾಸ ಇದೆ. ಮಠದಲ್ಲಿ ನಿತ್ಯ ಅನ್ನದಾಸೋಹ ನಡೆಯುತ್ತಿದ್ದು, ಭಕ್ತರೊಬ್ಬರು ಮಠಕ್ಕೆ ದಾನವಾಗಿ ನೀಡಿದ್ದ ಭೂಮಿ ಇದು.
ವಕ್ಫ್ ದಾಖಲೆಯಲ್ಲಿ ಐತಿಹಾಸಿಕ ಸ್ಥಳಗಳು
ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಯಾವುದೇ ಜಾಗವನ್ನು ಅತಿಕ್ರಮಿಸುವಂತಿಲ್ಲ. ಇದು ಸುಪ್ರೀಂಕೋರ್ಟ್ ಕಾನೂನು. ಹೀಗಿದ್ದರೂ ವಿಜಯಪುರದ ಗೋಳಗುಮ್ಮಟ, ಬಾರಾಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ 43 ಸ್ಥಳಗಳಿಗೆ ವಕ್ಫ್ ನೋಟಿಸ್ ಕೊಡಲಾಗಿದೆ.
ಬೀದರ್‌ನ ಐತಿಹಾಸಿಕ ಕೋಟೆ (ಇದು ಏಷ್ಯಾದಲ್ಲಿಯೇ ಅತೀ ದೊಡ್ಡ ಕೋಟೆ)ಯೂ ಈಗ ವಕ್ಫ್ ದಾಖಲೆಯಲ್ಲಿದೆ.
ವಕ್ಫ್ ದಾಖಲೆಯಲ್ಲಿ ಸರ್ಕಾರಿ ಶಾಲೆಗಳು
ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆ (ಇದು ಸರ್ ಎಂ ವಿಶ್ವೇಶ್ವರಯ್ಯ ಓದಿದ್ದ ಶಾಲೆ), ಮಂಡ್ಯದ ಗ್ರಾಮದ ಸರ್ಕಾರಿ ಶಾಲೆ.. ಹೀಗೆ ಹಲವು ಸರ್ಕಾರಿ ಜಾಗಗಳೂ ವಕ್ಫ್ ಮಂಡಳಿಯ ಹೆಸರು ನಮೂದಾಗಿದೆ.
ವಕ್ಫ್ ದಾಖಲೆಯಲ್ಲಿ ದೇವಸ್ಥಾನಗಳು
ವಿಜಯಪುರದ ಚಾಲುಕ್ಯರ ಕಾಲದ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ, ಮಂಡ್ಯದ ಮಹದೇವಪುರ ಗ್ರಾಮದ ಚಿಕ್ಕಮ್ಮದೇವಿ ದೇವಸ್ಥಾನ, ಶ್ರೀರಂಗಪಟ್ಟಣದ ಕೆಲವು ದೇವಸ್ಥಾನಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂಬ ದಾಖಲೆ ಬಹಿರಂಗವಾಗಿವೆ.
ಕೆಲವು ಕಡೆಗಳಲ್ಲಿ ಗ್ರಾಮಕ್ಕೆ ಗ್ರಾಮಗಳೇ ವಕ್ಫ್ ದಾಖಲೆ ಪಟ್ಟಿ ಸೇರಿವೆ. ರೈತರು, ಮಠ-ಮಂದಿರಗಳು, ದೇವಸ್ಥಾನಗಳು, ಹಿಂದೂ ರುದ್ರಭೂಮಿಗಳ ಭೂಮಿಯನ್ನು ವಕ್ಫ್ ಆಸ್ತಿಯೆಂದು ಆರ್‌ಟಿಸಿಯಲ್ಲಿ ಹೆಸರು ಬದಲಾವಣೆ ಮಾಡಲು ನೊಟೀಸ್ ನೀಡಲಾಗಿದೆ.
ಇದು ಸಹಜವಾಗಿಯೇ ಎಲ್ಲರ ಕಣ್ಣಿನಲ್ಲೂ ಸಚಿವ ಜಮೀರ್ ಅಹ್ಮದ್ ವಿಲನ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿಯೇ ಹಲವು ನಾಯಕರು ಜಮೀರ್ ವಿರುದ್ಧ ಸಿದ್ದರಾಮಯ್ಯ ಅವರಿಗೆ ದೂರು ಕೊಟ್ಟಿದ್ದಾರೆ. ವಕ್ಫ್ ಆಸ್ತಿ ನೋಟಿಸ್ ವಿಷಯ ರಾಜ್ಯದಲ್ಲಿ ರಾಜಕೀಯವಾಗಿ ಭಾರೀ ಸದ್ದು ಮಾಡಲು, ವಿವಿಧ ಜಿಲ್ಲೆಗಳಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗಲು ಮತ್ತು ಪ್ರತಿಭಟನೆಗೆ ಕಾರಣವಾಗಲು ಸಚಿವ ಜಮೀರ್ ಕೈಗೊಂಡ ವಕ್ಫ್ ಅದಾಲತ್ ಕಾರಣ. ಜೊತೆಗೆ ಉಪಚುನಾವಣೆ ಸಮಯದಲ್ಲಿ ಬಿಜೆಪಿಯವರು ವಕ್ಫ್ ವಿವಾದವನ್ನು ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸುವ ಅಸ್ತ್ರವಾಗಿಸಿಕೊಂಡು ಧರಣಿ ನಡೆಸುತ್ತಿದ್ದಾರೆ. ಜಮೀರ್ ನಡೆಯಿಂದ ಪಕ್ಷ ಹಾಗೂ ಸರ್ಕಾರ ಎರಡಕ್ಕೂ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಮಧ್ಯಪ್ರವೇಶ ಮಾಡಿ ಹೆಚ್ಚು ಮಾತನಾಡದಂತೆ ಸೂಚನೆ ನೀಡಬೇಕು ಎಂದು ಹಲವು ಶಾಸಕರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರಂತೆ.
ಈ ನಡುವೆ ವಿಜಯಪುರದಲ್ಲಿ ನಡೆಯತ್ತಿರುವ ಅಹೋರಾತ್ರಿ ಪ್ರತಿಭಟನೆ ಜೋರಾಗುತ್ತಿದೆ. ಕುರುಬ ಸಮುದಾಯ ಸ್ವಾಮೀಜಿಗಳು ಕೂಡಾ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ್ದಾರೆ. ವಕ್ಫ್ ಕುರಿತಂತೆ ರಚನೆಯಾಗಿದ್ದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿರುವ ಜಗದಂಬಿಕಾ ಪಾಲ್ ನವೆಂಬರ್ ೭ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಬರುತ್ತಿದ್ದು, ರೈತರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ನೋಡ ನೋಡುತ್ತಿದ್ದಂತೆಯೇ ವಕ್ಫ್ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿದೆ.



