ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಇಡಿಯವರು ಹೊಸ ಕೇಸು ದಾಖಲಿಸಿಕೊಂಡಿದ್ದಾರೆ. ಇದನ್ನು ರಾಜಕೀಯ ದ್ವೇಷದ ಕಥೆ ಎನ್ನುವುದು ಕಾಂಗ್ರೆಸ್ಸಿಗರ ವಾದ. ಬಿಜೆಪಿಯವರು ಜನರ ದುಡ್ಡನ್ನು ಗಾಂಧಿ ಕುಟುಂಬ ನುಂಗಿತು ಎನ್ನುವ ವಾದ ಮುಂದಿಡುತ್ತಾರೆ. ಇದು ಹೊಸ ಎಫ್‌ಐಆರ್ ಆದರೂ, 2012ರಿಂದಲೇ ಈ ಕೇಸ್ ತನಿಖೆ ಶುರುವಾಗಿದೆ. ಪದೇ ಪದೇ ಕೋರ್ಟಿಗೆ ಹೋಗಿರುವ ಕಾಂಗ್ರೆಸ್, ತನಿಖೆ, ವಿಚಾರಣೆಯನ್ನು ಮುಂದೂಡುತ್ತಲೇ ಬಂದಿದೆ. ಆಕ್ಚುವಲಿ ಆಗಿರುವುದು ಏನು..?
ನ್ಯಾಷನಲ್ ಹೆರಾಲ್ಡ್ ಸ್ಥಾಪನೆ ಆಗಿದ್ದು ನೆಹರು ಕಾಲದಲ್ಲಿ, 1938ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಸ್ಥಾಪಿತವಾದ ಇಂಗ್ಲಿಷ್ ಪತ್ರಿಕೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಮೂಲಕ ಪ್ರಕಟವಾಗುತ್ತಿದ್ದ ಪತ್ರಿಕೆಗೆ 1,057 ಶೇರ್‌ಹೋಲ್ಡರ್‌ಗಳಿದ್ದರು ಮತ್ತು ಇದು ದೆಹಲಿ, ಲಖನೌ, ಮುಂಬೈ ಇತ್ಯಾದಿ ಸ್ಥಳಗಳಲ್ಲಿ ₹5,000 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿತ್ತು. ಸಂಕಷ್ಟ ಶುರುವಾಗಿದ್ದು 2008ರಲ್ಲಿ.
2008ರಲಿ ಆರ್ಥಿಕ ಸಂಕಷ್ಟದ ಕಾರಣ ಹೇಳಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕಟಣೆಯನ್ನೇ ನಿಲ್ಲಿಸಿತು. ಆಗ ಆ ಪತ್ರಿಕೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 90 ಕೋಟಿ ರೂ. ಸಾಲವನ್ನಾಗಿ ಕೊಟ್ಟಿತು. ಅದಕ್ಕೆ ನ್ಯಾಷನಲ್ ಹೆರಾಲ್ಡ್ ಬಡ್ಡಿಯನ್ನೂ ಕೊಡಲಿಲ್ಲ. ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ 10 ವರ್ಷಗಳ ಅವಧಿಯಲ್ಲಿ ಸುಮಾರು 100 ಕಂತುಗಳಲ್ಲಿ 90 ಕೋಟಿ ರು. ಸಾಲ ನೀಡಿತ್ತು.
ಇದರ ಮಧ್ಯೆ 2010ರಲ್ಲಿ ಯಂಗ್ ಇಂಡಿಯಾ ಎಂಬ ಸಂಸ್ಥೆ ಶುರುವಾಯ್ತು. ಆ ಸಂಸ್ಥೆಗೆ 76% ಶೇರು ಹೊಂದಿದ್ದವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ. ಉಳಿದ 24% ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರದ್ದು.
ಈ ಯಂಗ್ ಇಂಡಿಯಾ ಸಂಸ್ಥೆ, ಎಜೆಎಲ್ ಸಾಲವನ್ನು ಕಾಂಗ್ರೆಸ್ಸಿಂದ ತನಗೆ ಶಿಫ್ಟ್ ಮಾಡಿಕೊಳ್ಳುತ್ತೆ. 2011ರಲ್ಲಿ ಕಾಂಗ್ರೆಸ್ಸಿಗೆ 50 ಲಕ್ಷ ರೂಪಾಯಿ ಕೊಟ್ಟು, ಎಜೆಲ್ ಸಂಸ್ಥೆಗೆ ಕೊಟ್ಟಿದ್ದ 90 ಕೋಟಿಯನ್ನು ತೆಗೆದುಕೊಳ್ಳುತ್ತೆ. 90 ಕೋಟಿ ಸಾಲಕ್ಕೆ, 50 ಲಕ್ಷ ಕೊಟ್ರೆ ಕ್ಲಿಯರ ಆಗುತ್ತಾ.. ಗೊತ್ತಿಲ್ಲ. ಆಗಿದ್ದಂತೂ ಹೌದು.
ಹಾಗೆ ಸಾಲವನ್ನ ಕಾಂಗ್ರೆಸ್ಸಿಂದ ಟ್ರಾನ್ಸ್‌ಫರ್ ಮಾಡಿಕೊಂಡ ಯಂಗ್ ಇಂಡಿಯಾ, ಅದರ ಮೂಲಕ ಎಜೆಎಲ್ ಗ್ರೂಪ್‌ನ ವಶದಲ್ಲಿದ್ದ 5 ಸಾವಿರ ಕೋಟಿಗೂ ಮಾಲೀಕನಾಗುತ್ತದೆ. 10 ವರ್ಷಕ್ಕೆ ನೀಡಿದ್ದ ಸಾಲವನ್ನು, 4 ವರ್ಷಗಳಲ್ಲೇ ಕ್ಲಿಯರ್ ಮಾಡ್ಕೊಂಡಿದ್ದು ಏಕೆ..?
ಇಂತಹ ಉತ್ತರ ಇಲ್ಲದ ಪ್ರಶ್ನೆಗಳಲ್ಲೇ ಇಲ್ಲೇನೋ ಸಮಸ್ಯೆ ಆಗಿದೆ ಎಂಬ ಅನುಮಾನಗಳಿವೆ. ಸಾಲವನ್ನೇ ಷೇರುಗಳಾಗಿ ಪರಿವರ್ತಿಸಿ, ಷೇರುಗಳ ಮೂಲಕ ಎಜೆಲ್ ಸಂಸ್ಥೆಯನ್ನು ಯಂಗ್ ಇಂಡಿಯಾಗೆ ಅಂದರೆ ಸೋನಿಯಾ, ರಾಹುಲ್ ಗಾಂಧಿ ಅವರಿಗೆ ಕೊಡಲಾಗಿದೆ.
ಸಮಸ್ಯೆ ಏನು..?
2012ರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಅವರಿಂದ ಪ್ರಕರಣ ಹೊರಬಂತು. ಆದರೆ, ಮತ್ತೆ ಮತ್ತೆ ಕಾಂಗ್ರೆಸ್ ಕೋರ್ಟಿಗೆ ಹೋದ ಕಾರಣ, ಎಫ್‌ಐಆರ್ ದಾಖಲಾಗಿದ್ದು 2014ಲ್ಲಿ. ಆಗಲೂ ಯುಪಿಎ ಸರ್ಕಾರವೇ ಇತ್ತು. ಎಫ್‌ಐಆರ್ ದಾಖಲಾದ ನಂತರವೂ ವಿಚಾರಣೆಗೆ ಪದೇ ಪದೇ ಕೋರ್ಟಿಗೆ ಹೋಗಿ ವಿಚಾರಣೆಗೆ ತಡೆ ತರಲಾಗುತ್ತಿದ್ದು, ಈಗ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ.



