ಪಾಕಿಸ್ತಾನದ ಕರಾಚಿಯಲ್ಲಿ ಬಹುತೇಕ ಜನ ಸೋಪನ್ನೇ ಬಳಕೆ ಮಾಡ್ತಾ ಇರಲಿಲ್ಲ. ಕೈ ತೊಳೆಯುವುದಕ್ಕೆ ಬಿಡಿ, ಸ್ನಾನಕ್ಕೂ ಬಳಕೆ ಮಾಡದಂತಹ ಜನರಿದ್ದರು. ಅಂತಹ ಕಡೆ ಪ್ರಾಕ್ಟರ್ & ಗ್ಯಾಂಬಲ್ ಕಂಪೆನಿ ʻಉಚಿತʼವಾಗಿ ಶಾಂಪೂ, ಸೋಪು ಕೊಟ್ಟು, ಶುಚಿತ್ವದ ಮಹತ್ವ ತಿಳಿಸಿಯೇ, ತನ್ನ ಮಾರ್ಕೆಟಿಂಗ್ ವಿಸ್ತರಿಸಿತ್ತು. ಅಂತಹ ಪ್ರಾಕ್ಟರ್ & ಗ್ಯಾಂಬಲ್ ಕಂಪೆನಿ, ಈಗ ಪಾಕಿಸ್ತಾನಕ್ಕೆ ಗುಡ್ ಬೈ ಹೇಳ್ತಾ ಇದೆ.
ಇನ್ನು ಮುಂದೆ ಪಾಕಿಸ್ತಾನದಲ್ಲಿ ಜಿಲೆಟ್ ಶೇವಿಂಗ್ ಕ್ರೀಂ, ಜಿಲೆಟ್ ಶೇವಿಂಗ್ ಬ್ಲೇಡ್, ಹೆಡ್ ಆ್ಯಂಡ್ ಶೋಲ್ಡರ್, ಪ್ಯಾಂಟೀನ್ ಶಾಂಪೂ, ಏರಿಯಲ್, ಟೈಡ್ ವಾಷಿಂಗ್ ಪೌಡರ್, ಪ್ಯಾಂಪರ್ಸ್, ವಿಕ್ಸ್, ಓರಲ್ ಬಿ ಬ್ರಷ್‌ಗಳು.. ಇತ್ಯಾದಿ ಇತ್ಯಾದಿ ಸಿಕ್ಕಲ್ಲ. ಎಲ್ಲಾ ಉತ್ಪನ್ನಗಳನ್ನು ತಯಾರಿಸುವ ಪ್ರೋಕ್ಟರ್ ಆ್ಯಂಡ್ ಗ್ಯಾಂಬಲ್ ಕಂಪನಿ, ಪಾಕಿಸ್ತಾನದಲ್ಲಿ ತನ್ನ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಉತ್ಪನ್ನಗಳನ್ನು ತಯಾರಿಸುತ್ತಿದ್ದ ಫ್ಯಾಕ್ಟರಿಗಳನ್ನು ಕೂಡಲೇ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ವಾರದ ಹಿಂದೆಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸ್ಟಾಕ್ ಕ್ಲಿಯರ್ ಆಗುತ್ತಿದ್ದಂತೆಯೇ ಎಲ್ಲರೂ ಪಾಕಿಸ್ತಾನ ಬಿಟ್ಟು ಹೊರಡಲಿದ್ದಾರೆ.
ಅಂದಹಾಗೆ ಈ ಕಂಪೆನಿಗೆ ಪಾಕಿಸ್ತಾನದಲ್ಲಿ ಸುಮಾರು ಎರಡೂವರೆ ಕೋಟಿ ಕಸ್ಟಮರ್ಸ್ ಇದ್ದಾರೆ. ಅಷ್ಟು ದೊಡ್ಡ ಮಾರುಕಟ್ಟೆಯನ್ನು ಬಿಟ್ಟು ಹೋಗುತ್ತಿರುವುದೇಕೆ ಎಂದರೆ.. ಪ್ರಾಕ್ಟರ್ & ಗ್ಯಾಂಬಲ್ ಕಂಪೆನಿ ಬೆರಳು ತೋರಿಸುವುದು ಪಾಕಿಸ್ತಾನದ ಅರಾಜಕತೆಯತ್ತ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಲೂಟಿ ಕಾಮನ್ ಆಗಿದೆ. ಅಂಗಡಿ, ಮುಂಗಟ್ಟುಗಳಿಗೆ ನುಗ್ಗಿ ವಸ್ತುಗಳನ್ನು ದರೋಡೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಹೀಗಾದಾಗ.. ಅಂಗಡಿಯವರು ಖರೀದಿಸಿದ್ದ ವಸ್ತುಗಳಿಗೆ ಹಣವನ್ನೂ ಕೊಡೋದಿಲ್ಲ. ಕಾನೂನು ಪ್ರಕಾರ ಪರಿಹಾರವೂ ದೊರೆಯುತ್ತಿಲ್ಲ. ಈ ರೀತಿಯ ಗಲಭೆ,ಲೂಟಿ, ದರೋಡೆಗಳಿಂದಾಗಿಯೇ ಕಂಪೆನಿಗೆ ಸಾವಿರಾರು ಕೋಟಿ ನಷ್ಟವಾಗಿದೆಯಂತೆ. ಜೊತೆಗೆ ಅಲ್ಲಿನ ಕಾರ್ಮಿಕರು ಹದ್ದು ಮೀರಿದ್ದು, ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಂತ ಪ್ರಾಕ್ಟರ್ & ಗ್ಯಾಂಬಲ್ ಕಂಪೆನಿಯೇ ಫಸ್ಟ್ ಅಲ್ಲ.
ಪಾಕಿಸ್ತಾನದಲ್ಲಿರುವ ಅರಾಜಕತೆ, ಆರ್ಥಿಕ ಮುಗ್ಗಟ್ಟು ಮುಂತಾದ ಸಮಸ್ಯೆಗಳಿಂದಾಗಿ ಈಗಾಗಲೇ ಅಲ್ಲಿದ್ದ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು ಕಾಲ್ಕಿತ್ತಿವೆ. ಅವುಗಳಲ್ಲಿ ಮೈಕ್ರೋಸಾಫ್ಟ್, ಶೆಲ್ ಇಂಧನ ಸಂಸ್ಥೆ, ಉಬರ್, ಪಿಫೈಜರ್ (ಔಷಧ ಕಂಪನಿ) ಮುಂತಾದವು ಈಗಾಗಲೇ ಆ ದೇಶವನ್ನು ತೊರೆದಿವೆ. ಈಗ ಅಮೆರಿಕ ಮೂಲದ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ಕೂಡ ಅಲ್ಲಿಂದ ಹೊರ ನಡೆದಿದೆ.
ಇದರ ಪರಿಣಾಮ ಏನಾಗಬಹುದು ಎಂದು ನೋಡಿದರೆ ನಿಜಕ್ಕೂ ಭಯವಾಗುವ ಪರಿಸ್ಥಿತಿ ಇದೆ. ಏಕೆಂದರೆ ಮಾರುಕಟ್ಟೆಯಲ್ಲಿ ಪಾಕ್ ಜನತೆಗೆ ಗುಣಮಟ್ಟದ ವಸ್ತುಗಳ ಕೊರತೆ ಎದುರಾಗುತ್ತದೆ. ಅದನ್ನು ಲೋಕಲ್ ಕಂಪೆನಿಗಳು ಮ್ಯಾನೇಜ್ ಕೂಡಾ ಮಾಡಬಹುದು. ಕ್ವಾಲಿಟಿ ಕಡಿಮೆಯಿದ್ದರೂ ಜನ ಅಡ್ಜಸ್ಟ್ ಮಾಡಿಕೊಳ್ತಾರೆ. ಆದರೆ.. ಲಾಸ್ ಆದ ಉದ್ಯೋಗ, ಕುಲಗೆಟ್ಟು ಹೋದ ರೆಪ್ಯುಟೇಷನ್ ವಾಪಸ್ ತರುವುದು ಸುಲಭ ಅಲ್ಲ. ಧರ್ಮಕ್ಕೆ ದೇಶವನ್ನೇ ಅಡ ಇಟ್ಟು ಈ ಪರಿಸ್ಥಿತಿ ಉದ್ಭವವಾಗಿದೆ.



