ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಹೋರಾಟದಲ್ಲಿ ವಿ.ಸೋಮಣ್ಣ ಮನೆ ದೆಹಲಿಯ ಹೆಡ್ ಕ್ರೌರ್ಟರ್ಸ್ ಆಗುತಿದೆಯಾ.. ಹೀಗೊಂದು ಅನುಮಾನ ಅಲ್ಲ.. ಪ್ರಶ್ನೆ ಹುಟ್ಟುಹಾಕಿರುವುದು ಸ್ವತಃ ಸೋಮಣ್ಣ ಅವರ ಮನೆ. ಯತ್ನಾಳ್ ಬಣದ ನಾಯಕರು ವಾರಕ್ಕೆರಡು ಬಾರಿ ದೆಹಲಿಗೆ ಹೋಗಿ ಅಲ್ಲಿ ಉಳಿಯುತ್ತಿರುವುದು ವಿ.ಸೋಮಣ್ಣ ಅವರ ಮನೆಯಲ್ಲಿ. ಕೇಂದ್ರ ಸಚಿವರೂ ಆಗಿರುವ ವಿ.ಸೋಮಣ್ಣ ಅವರ ಮನೆಯಲ್ಲೇ ಯತ್ನಾಳ್ ಟೀಂನ ನಾಯಕರು ಸೇರುತ್ತಿದ್ದಾರೆ. ತಟಸ್ಥರು ಎಂದುಕೊಂಡಿರುವ ಬೊಮ್ಮಾಯಿ, ಅಶೋಕ್ ಅವರಂತಹವರೂ ಹೋಗುತ್ತಿದ್ದಾರೆ. ಹೋಗದೇ ಇರುವುದು ವಿಜಯೇಂದ್ರ ಬಣದ ನಾಯಕರು ಮಾತ್ರ. ಸ್ಸೋ. ವಿ ಸೋಮಣ್ಣ ದೆಹಲಿಯ ಮನೆ ʻಯತ್ನಾಳ್ ಬಣದ ದೆಹಲಿ ಹೆಡ್ ಆಫೀಸ್ʼ ಆಗುತ್ತಿದೆ.
ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆದಿರುವ ಮಧ್ಯೆಯೇ ಪಕ್ಷದ ಇಬ್ಬರು ಹಿರಿಯ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಮಂಗಳವಾರ ದೆಹಲಿಯ ಸಂಸತ್ ಭವನದಲ್ಲಿ ಅಮಿತ್ ಶಾರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯನ್ನು ವ್ಯವಸ್ಥೆ ಮಾಡಿರುವುದು ಸ್ವತಃ ಸೋಮಣ್ಣ ಎನ್ನುವುದು ವಿಶೇಷ.
ಮೇಲ್ನೋಟಕ್ಕೆ ಉಭಯ ನಾಯಕರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಶಾ ಅವರನ್ನು ಭೇಟಿಯಾಗಿದ್ದಾರೆ. ಹಾಗಂತ ಅವರು ಅದನ್ನು ಸಾಮಾಜಿಕ ಜಾಲತಾಣದ ಮೂಲಕವೂ ಬಹಿರಂಗಪಡಿಸಿದ್ದಾರೆ. ಆದರೆ, ಅಸಲಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಚರ್ಚೆ ಮಾಡಿದ್ದಾರೆ ಅನ್ನೋದು ಮೂಲಗಳ ಮಾಹಿತಿ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಕಳೆದ ಒಂದು ವಾರದಲ್ಲಿ ಎರಡು ಬಾರಿ ದೆಹಲಿಗೆ ತೆರಳಿ ವಿಜಯೇಂದ್ರ ಅವರನ್ನು ಮುಂದುವರೆಸುವುದು ಬೇಡ ಎಂಬುದನ್ನು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಸೋಮಣ್ಣ ಅವರ ದೆಹಲಿಯ ನಿವಾಸದಲ್ಲಿ ಪೂಜೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಿದ್ದರು. ಇದರ ಮರುದಿನವೇ ಸೋಮಣ್ಣ ಮತ್ತು ಕಾರಜೋಳ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.
ಇನ್ನು ಯತ್ನಾಳ್ ಅವರಿಗೆ ನೋಟಿಸ್ ಕೊಡಲಾಗಿದೆ ಎನ್ನಲಾಗುತ್ತಿದೆಯಾದರೂ, ನನಗ್ಯಾವ ನೋಟಿಸ್ ಬಂದಿಲ್ಲ ಅಂತಿದ್ಧಾರೆ ಯತ್ನಾಳ್. ಅತ್ತ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡುವ ಮೂಲಕ ಭಿನ್ನರ ಟೀಂಗೆ ಬಿಸಿ ಮುಟ್ಟಿಸಿರುವ ಬಿಜೆಪಿ ಹೈಕಮಾಂಡ್ ಇತ್ತ, ವಿಜಯೇಂದ್ರಗೂ ಲಗಾಮು ಹಾಕುವ ಕೆಲಸಕ್ಕೆ ಮುಂದಾಗಿದೆ. ಜಿಲ್ಲಾಧ್ಯಕ್ಷರ ನೇಮಕಾತಿ ವಿಚಾರವಾಗಿ ಬಿಜೆಪಿಯ ರೆಬೆಲ್ ಬಣದಲ್ಲಿ ಅಸಮಾಧಾನ ಇತ್ತು. ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕಾತಿಯನ್ನು ಸಂಸದ ಡಾ. ಕೆ ಸುಧಾಕರ್ ತೀವ್ರವಾಗಿ ವಿರೋಧ ಮಾಡಿದ್ದರು. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ರೆಡ್ಡಿ ನೇಮಕಾತಿಯನ್ನು ತಡೆಹಿಡಿದು ವಿಜಯೇಂದ್ರಗೆ ಶಾಕ್ ನೀಡಲಾಗಿದೆ. ಬಿಎಸ್ ಯಡಿಯೂರಪ್ಪ ಅವರ ಪುತ್ರನನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಿದರು ಕೂಡ ಸಂಘಟನೆ, ನಿರ್ಧಾರದ ವಿಚಾರದಲ್ಲಿ ವಿಜಯೇಂದ್ರಗೆ ಸಂಪೂರ್ಣ ಅಧಿಕಾರ ನೀಡದಿರಲು ಬಿಜೆಪಿ ಹೈಕಮಾಂಡ್ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮೂಲಗಳ ಪ್ರಕಾರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ಸಂಬಂಧ ಫೆಬ್ರವರಿ 20ರ ಒಳಗೆ ಚಟುವಟಿಕೆ ಆರಂಭಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.