ಅಣ್ಣಾವ್ರ ಕುಟುಂಬ ರಾಜಕೀಯದಿಂದ ದೂರವೇ ಇದೆ. ದೊಡ್ಮನೆ ಕುಟುಂಬದಲ್ಲಿ ರಾಜಕೀಯದಲ್ಲಿಯೂ ಆಕ್ಟಿವ್ ಆಗಿರುವುದು ಗೀತಾ ಶಿವರಾಜ್ʻಕುಮಾರ್ ಮಾತ್ರ. ಶಿವಣ್ಣ, ಗೀತಾ ಅವರ ಜೊತೆಯಲ್ಲಿರುತ್ತಾರೆ. ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಶಿವಣ್ಣ, ಪತ್ನಿ ಗೀತಾ ಅವರ ರಾಜಕೀಯಕ್ಕೆ ಮಾತ್ರ ಬೆನ್ನಿಗೆ ನಿಂತಿದ್ಧಾರೆ. ಏಕೆ.. ಅನ್ನೋ ಪ್ರಶ್ನೆಗೆ ಶಿವಣ್ಣ ಉತ್ತರವನ್ನೂ ಕೊಟ್ಟಿದ್ಧಾಗಿದೆ. ಗೀತಾ, ಬಂಗಾರಪ್ಪನವರ ಮಗಳು. ಅಣ್ಣ ಮತ್ತು ತಮ್ಮ ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದಷ್ಟು ಶತ್ರಗಳಾಗಿದ್ದರೂ, ಅವರೂ ರಾಜಕೀಯದಲ್ಲೇ ಇದ್ಧಾರೆ. ಸದ್ಯಕ್ಕೆ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಾರೆ. ಅವರು ಮಾಜಿ ಸಚಿವ. ಇನ್ನೊಬ್ಬ ತಮ್ಮ ಮಧು ಬಂಗಾರಪ್ಪ, ಜೆಡಿಎಸ್ ಬಿಟ್ಟು, ಕಾಂಗ್ರೆಸ್ಸಿಗೆ ಬಂದು, ಗೆದ್ದು ಸಚಿವರೂ ಆಗಿದ್ಧಾರೆ. ಇನ್ನು ಗೀತಾ ಅವರೂ ಕೂಡಾ ಜೆಡಿಎಸ್ಸಿನಲ್ಲೇ ಇದ್ದವರು. ಅವರೂ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಿವಣ್ಣ ನಾನು ರಾಜಕೀಯಕ್ಕೆ ಬರುವುದಿಲ್ಲ, ನನಗೆ ಅದರಲ್ಲಿ ಆಸಕ್ತಿ ಇಲ್ಲ. ರಾಜಕೀಯದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನೋದು ನನಗೆ ಗೊತ್ತಿಲ್ಲ. ಯಾರಾದರೂ ಕಷ್ಟ ಅಂತಾ ಬಂದ್ರೆ ಒಂದಿಷ್ಟು ಹಣ ಕೊಟ್ಟು ಕಳಿಸುತ್ತೇನಷ್ಟೆ. ಆದರೆ, ಗೀತಾ ರಾಜಕೀಯದ ಕುಟುಂಬದಿಂದಲೇ ಬಂದವರು. ರಾಜಕೀಯ ಎಂಬುದು ಅವರಿಗೆ ರಕ್ತದಲ್ಲಿಯೇ ಇದೆ. ಅವರು ಎಂಪಿ ಆಗಿ ಆಯ್ಕೆ ಆದರೆ ಬಹಳ ಸಂತೋಷ ಎಂದಿದ್ದಾರೆ.
ಕಳೆದ ಚುನಾವಣೆಯಲ್ಲಿ ಒಂದು ಅವಕಾಶ ಕೊಡಿ ಎಂದು ಕೇಳಿದ್ದೆವು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡಬೇಕು ಎಂದು ಹೇಳಿದ್ಧಾರೆ ಶಿವಣ್ಣ. ಕಳೆದ ಬಾರಿ ಅಲ್ಲ, 2014ರಲ್ಲಿ ಗೀತಾ ಅವರು ಶಿವಮೊಗ್ಗ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು. ಆದರೆ, ಸೋತಿದ್ದರು. ಆಗ ಗೀತಾ ಅವರ ಪರವಾಗಿ ಶಿವಣ್ಣ ಅವರ ಜೊತೆ ಚಿತ್ರರಂಗದ ಹಲವರೂ ಪ್ರಚಾರ ಮಾಡಿದ್ದರು. ಆದರೆ, ದೊಡ್ಮನೆಯ ಪುನೀತ್ ಅವರಾಗಲೀ, ರಾಘವೇಂದ್ರ ಅವರಾಗಲೀ ಪ್ರಚಾರ ಮಾಡಿರಲಿಲ್ಲ. ಹಾಗೆ ನೋಡಿದರೆ ಆ ಚುನಾವಣೆಯಲ್ಲಿ ಪುನೀತ್, ಚುನಾವಣಾ ರಾಯಭಾರಿಯಾಗಿದ್ದರು.
ನನಗೆ ಪಕ್ಷ, ಪತಿ ಹಾಗೂ ಸಹೋದರ ಈ ಮೂವರು ಹೈ ಕಮಾಂಡ್ಗಳಿಂದ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಸ್ಪರ್ಧಿಸುವೆ. ಸದ್ಯ ನಾನು ಮೈಸೂರಿನ ಶಕ್ತಿಧಾಮ ನೋಡಿಕೊಂಡು ಹೋಗುತ್ತಿದ್ದೇನೆ. ನನಗೆ ಸಾಮಾಜಿಕ ಕಾರ್ಯಗಳನ್ನು ಮಾಡುವುದು ಬಹಳ ಇಷ್ಟ ಎಂದು ಹೇಳಿದ್ದಾರೆ ಗೀತಾ ಶಿವರಾಜಕುಮಾರ್.



