ಚುನಾವಣೆ ಸಮಯದಲ್ಲಿ ಹೊರಬಿದ್ದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಮತದಾನ ಮುಗಿದ ಮೇಲೆ ತನಿಖೆಗೆ ಗುರಿಯಾಗುತ್ತಿವೆ. ಪೆನ್ ಡ್ರೈವ್ ಸುದ್ದಿಯನ್ನು ರಾಜ್ಯದ ಪ್ರಮುಖ ಸುದ್ದಿವಾಹಿನಿಗಳು ಪ್ರಸಾರ ಮಾಡಲಿಲ್ಲವಾದರೂ.. ಪವರ್ ಟಿವಿಯವರು ಸುದ್ದಿ ಮಾಡಿದರು. ಅದಾದ ಮೇಲೆ ಅದು ಸೋಷಿಯಲ್ ಮೀಡಿಯಾದಲ್ಲೂ ಸುದ್ದಿಯಾಗಿ, ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈಗ ಎಸ್ʻಐಟಿ ರಚನೆಯಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮೊದಲ ಎಫ್ ಐ ಆರ್ ದಾಖಲಾಗಿದೆ. ದೂರು ಕೊಟ್ಟಿರುವುದು 47 ವರ್ಷದ ಮಹಿಳೆ. ದೂರಿನ ಪ್ರಕಾರ ಹೆಚ್.ಡಿ.ರೇವಣ್ಣ ಆರೋಪಿ ನಂ.1 ಹಾಗೂ ಪ್ರಜ್ವಲ್ ರೇವಣ್ಣ ಆರೋಪಿ ನಂ.2.
ಯಾರು ಈ 47 ವರ್ಷದ ಸಂತ್ರಸ್ತೆ..?
ದೂರು ಕೊಟ್ಟಿರುವ ಮಹಿಳೆಯ ವಿವರ ಹೇಳುವುದು ಕಾನೂನು ಬಾಹಿರ. ಆದರೆ.. ಅಕೆ ಕೊಟ್ಟಿರುವ ದೂರಿನ ಪ್ರಕಾರ ಆಕೆ ನಾಗಲಾಪುರ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಕೊಡಿಸಿದ್ದವರು ಸ್ವತಃ ರೇವಣ್ಣ. ಅದಾದ ಮೇಲೆ 2015ರಲ್ಲಿ ರೇವಣ್ಣ ಅವರ ಮನೆಗೆಲಸಕ್ಕೆ ಸೇರಿಕೊಂಡರಂತೆ. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ಕರೆದು ಮೈಕೈ ಮುಟ್ಟಿದರಂತೆ. ಹಣ್ಣು ಕೊಡೋ ನೆಪದಲ್ಲಿ ಸೀರೆ ಎಳೆಯುತ್ತಿದ್ದರಂತೆ. ಇದೆಲ್ಲವೂ ನಡೀತಾ ಇದ್ದದ್ದು ಭವಾನಿ ರೇವಣ್ಣ ಅವರು ಮನೆಯಲ್ಲಿ ಇಲ್ಲದ ವೇಳೆಯಲ್ಲೇ.
ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈಮುಟ್ಟಿ ಹೊಟ್ಟೆ ಚಿವುಟುತ್ತಿದ್ದರು. ಮೈಗೆ ಎಣ್ಣೆ ಹಚ್ಚಲೆಂದು ಕರೆಸಿ ದೌರ್ಜನ್ಯ ಎಸಗುತ್ತಿದ್ದರು. ಮಾತ್ರವಲ್ಲ ಸಂತ್ರಸ್ಥೆಯ ಮಗಳಿಗೂ ವೀಡಿಯೋ ಕಾಲ್ ಮಾಡಿ ಪ್ರಜ್ವಲ್ ದೌರ್ಜನ್ಯ ಎಸಗುತ್ತಿದ್ದರು ಎಂದೆಲ್ಲ ಮಹಿಳೆ ಹೇಳಿಕೊಂಡಿದ್ಧಾರೆ. ಪದೇ ಪದೆ ದೌರ್ಜನ್ಯ ಎಸಗಿದ ಬಳಿಕ ಸಂತ್ರಸ್ಥೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದಳಂತೆ ಕಿರುಕುಳ ಹೆಚ್ಚಾದಾಗ ಕೆಲಸ ಬಿಟ್ಟು ಹೋಗಿದ್ದ ಸಂತ್ರಸ್ತೆಗೆ ಭಯ ಹುಟ್ಟಿಸಿದ್ದು ಹಾಸನದಲ್ಲಿ ವೈರಲ್ ಆದ ವಿಡಿಯೋಗಳು.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನನ್ನ ಗಂಡ ನನ್ನ ಶೀಲ ಶಂಕಿಸೋಕೆ ಶುರು ಮಾಡಿದ. ನಿಂದೂ ವಿಡಿಯೋ ಬಂದ್ರೆ ಏನ್ ಮಾಡೋದು ಎನ್ನತೊಡಗಿದೆ. ಅವರ ಮನೆ, ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಮಹಿಳೆಯರಿಗೂ ಇದೇ ಸ್ಥಿತಿ ಎದುರಾಯ್ತು. ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿರೋದು ಅವರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಎಂದಿರುವ ದೂರುದಾರೆ, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೊಕ್ಕಿದ್ದಾರೆ.
ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಐಪಿಸಿ 354ಡಿ (ಪದೇ ಪದೇ ಮಹಿಳೆಯರ ಸಂಪರ್ಕಕ್ಕೆ ಯತ್ನ. ಇಂಟರ್ನೆಟ್ ಅಥವಾ ಇಮೇಲ್ ಅಥವಾ ವಿಡಿಯೋ ಕಾಲ್ ಸಂವಹನ) ಐಪಿಸಿ 506 (ಕ್ರಿಮಿನಲ್ ಬೆದರಿಕೆ. ಕೊಲೆ ಬೆದರಿಕೆ ಹಾಗೂ ಮಹಿಳೆಯನ್ನು ಅಶ್ಲೀಲತೆಗೆ ಎಳೆಯುವುದು)
ಐಪಿಸಿ 509 (ಮಹಿಳೆಯನ್ನು ಅವಮಾನಿಸುವುದು ಹಾಗೂ ಲೈಂಗಿಕತೆಗೆ ಪ್ರಚೋದಿಸುವುದು)
ಈ ಮೂರೂ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ. ಎಲ್ಲ ಆರೋಪಗಳೂ ಸಾಬೀತಾದರೆ.. 13 ವರ್ಷ ಜೈಲು ಹಾಗೂ ಲಕ್ಷಾಂತರ ರೂ. ದಂಡ ಕಟ್ಟಬೇಕಾಗಬಹುದು.
ತನಿಖೆಗೆ ಎಸ್ʻಐಟಿ : ತಂಡದ ಲೀಡರ್ ಆಗಿರುವುದು ಎಡಿಜಿಪಿ ಬಿ.ಕೆ ಸಿಂಗ್. ಗೌರಿ ಲಂಕೇಶ್ ಕೊಲೆ ಕೇಸ್ ನಲ್ಲಿ ಅತಿದೊಡ್ಡ ಪಾತ್ರ ವಹಿಸಿದ್ದಅಧಿಕಾರಿ. ತಂಡದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳೂ ಇದ್ದಾರೆ.
ಇನ್ನು ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿ, ನಾನಾಗಲಿ, ಹೆಚ್ ಡಿ ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಎಸ್ ಐಟಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಗಮನಿಸಿದ್ದೇನೆ.
ಹಾಸನ ಚುನಾವಣಾ ಪ್ರಚಾರ ವೇಳೆ ಪ್ರಕರಣ ಆರಂಭವಾಗಿದೆ. ವಾಸ್ತವಾಂಶ ಹೊರಬರಲಿ, ತನಿಖೆ ಆದ್ಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ಈ ನೆಲದ ಕಾನೂನಲ್ಲಿ, ತಪ್ಪು ಮಾಡಿದವನು ಉಪ್ಪು ತಿಂದವನು ನೀರು ಕುಡಿಯಲೇಬೇಕು. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ. ಹೀಗಾಗಿ ತನಿಖೆ ವರದಿ ಬರಲಿ, ಬಂದ್ಮೇಲೆ ಮಾತಾಡುತ್ತೇನೆ. ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ರೆ ನನಗೆ ಸಂಬಂಧವಿಲ್ಲ. ಎಸ್ ಐಟಿ ತನಿಖೆಗೆ ಆದೇಶಿಸಿದ್ದಾರೆ, ಎಸ್ ಐಟಿ ಅಧಿಕಾರಿಗಳನ್ನು ನೇಮಿಸಿದ್ದಾರೆ. ವಿದೇಶಕ್ಕೆ ಹೋಗಿದ್ರೆ ಕರ್ಕೊಂಡು ಬರೋ ಜವಾಬ್ದಾರಿ ಅವರದ್ದು, ನಾನು ಉತ್ತರಿಸಕ್ಕಾಗೋದಿಲ್ಲ, ಅವರೇ ಕರ್ಕೊಂಡು ಬರ್ತಾರೆ ಎಂದಿದ್ದಾರೆ.



