ಹೆಚ್‌ಎಂಟಿ. ಭಾರತದ ಪ್ರಖ್ಯಾತ ವಾಚ್ ತಯಾರಿಕಾ ಸಂಸ್ಥೆ. ಭಾರತದ ಟೈಂನ್ನು ಆಳುತ್ತಿದ್ದ ಹೆಚ್‌ಎಂಟಿ ಟೈಂ ಕೆಟ್ಟು ಹೋಯ್ತು. ಬಹುಶಃ ಟೈಟಾನ್ ಎಂಟ್ರಿ ಆದ ಮೇಲೆ ಪೈಪೋಟಿಗೆ ಇಳಿಯದೆ ಅಥವಾ ಪೈಪೋಟಿಯನ್ನೇ ನೀಡದೆ ಹೆಚ್‌ಎಂಟಿ ಮುಚ್ಚಿತು. ಅಂದಹಾಗೆ ಈ ಹೆಚ್‌ಎಂಟಿ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸು. ಆದರೆ ಕಾಲಕ್ರಮೇಣ ತನ್ನ ಚರಿಷ್ಮಾ ಕಳೆದುಕೊಳ್ಳುತ್ತಾ ಬಂದ ಹೆಚ್‌ಎಂಟಿಗೆ ಗತವೈಭವ ಮರಳಿ ಬರಲೇ ಇಲ್ಲ. ಇದಕ್ಕೆ ಸಂಸ್ಥೆಯ ಮ್ಯಾನೇಜ್ʻಮೆಂಟಿನಷ್ಟೇ ರಾಜಕೀಯವೂ ಕಾರಣ. ಈಗ ಅದೇ ಹೆಚ್‌ಎಂಟಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮರುಜೀವ ತುಂಬುವ ಭರವಸೆ ಕೊಟ್ಟಿದ್ದಾರೆ. ಆ ಒಂದೇ ಒಂದು ಭರವಸೆ ಹೆಚ್‌ಎಂಟಿ ಷೇರುದಾರರಲ್ಲಿ ದೊಡ್ಡ ಆಸೆಯನ್ನೇ ಚಿಗುರಿಸಿದೆ. ಅಷ್ಟೇ ಅಲ್ಲ, ಡಬಲ್ ಏರಿಕೆ ಕಂಡಿದೆ.
ಎಚ್‌ಎಂಟಿ ಭವನದಲ್ಲಿ ಮಾತನಾಡಿದ ಅವರು ಹೆಚ್‌ಎಂಟಿಗೆ ಪುನಃಶ್ಚೇತನ ನೀಡುವ ಭರವಸೆ ನೀಡಿದರು. ಈಗಾಗಲೇ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತದಲ್ಲಿ ನಿರ್ಧಾರ ತೆಗೆದುಕೊಂಡಾಗಿದೆ. ಆದರೆ, ನಾನು ಹೊಸ ಪ್ಲಾನ್ ಇಟ್ಟುಕೊಂಡು ಹೊರಟಿದ್ದೇನೆ. ಹೆಚ್‌ಎಂಟಿಗೆ ಮತ್ತೊಂದಿಷ್ಟು ಬಂಡವಾಳ ಹೂಡಿ, ಆ ಸಂಸ್ಥೆಯನ್ನು ಮೇಲೆತ್ತುವ ಪ್ಲಾನ್ ಮಾಡಿದ್ದೇನೆ. ನಮ್ಮ ವಿಶ್ವೇಶ್ವರಯ್ಯನವರ ಕನಸು, ಸಾವಿರಾರು ಉದ್ಯೋಗಿಗಳ ಬದುಕು, ಕರ್ನಾಟಕದ ಕನ್ನಡಿಗರ ಸ್ವಾಭಿಮಾನ, ಪ್ರತಿಷ್ಠೆಯನ್ನು ಮತ್ತೆ ಮೇಲೆತ್ತುವ ಅವಕಾಶ ಇದೆ. ನಾನು ಅದನ್ನು ಮಾಡಿಯೇ ತೀರುತ್ತೇನೆ ಎಂದಿದ್ದಾರೆ ಸೆಂಟ್ರಲ್ ಮಿನಿಸ್ಟರ್ ಕುಮಾರಸ್ವಾಮಿ.
ಅಚ್ಚರಿಯೆಂದರೆ.. ಕುಮಾರಸ್ವಾಮಿ ಈ ಮಾತು ಹೇಳಿದ್ದೇ ತಡ, ಷೇರುಪೇಟೆಯಲ್ಲಿ 45 ರೂ.ಗಳಷ್ಟಿದ್ದ ಹೆಚ್‌ಎಂಟಿ ಷೇರುಗಳ ಮೌಲ್ಯ ದಿಢೀರ್ ಡಬಲ್ ಏರಿಕೆ ಕಂಡಿದೆ. ಅಂದರೆ ಮಂಗಳವಾರದ ದಿನದ ಸಂಜೆಯ ಹೊತ್ತಿಗೆ ಹೆಚ್‌ಎಂಟಿ ಷೇರುಗಳ ಮೌಲ್ಯ 92 ರೂ. ಗಡಿ ದಾಟಿತ್ತು. ಅಂದರೆ.. ಎರಡುಪಟ್ಟಿಗಿಂತ ಹೆಚ್ಚು. ಈ ದಿನವೂ ಷೇರುಪೇಟೆಯಲ್ಲಿ ಹೆಚ್‌ಎಂಟಿ ಸಂಚಲನ ಸೃಷ್ಟಿಸಿದ್ದರೆ ಆಶ್ಚರ್ಯವಿಲ್ಲ.
ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನಡುವೆ ಹೆಚ್‌ಎಂಟಿ ಗಲಾಟೆಯೂ ಶುರುವಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಸಂಸ್ಥೆಯು ರಿಯಲ್ ಎಸ್ಟೇಟ್‌ನಂತೆ ವರ್ತಿಸುತ್ತಿದ್ದು, ಹಲವು ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿದೆ. ಕಾನೂನಾತ್ಮಕವಾಗಿ ಹೋರಾಟ ನಡೆಸಿ ಆ ಭೂಮಿಯನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. 1997ರಿಂದ 2011ರವರೆಗೆ ಎಚ್ಎಂಟಿ ಸಂಸ್ಥೆ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಯು.ಎಸ್. ಸ್ಟೀಲ್ ಕಂಪನಿ, ಸಿಲ್ವರ್ ಲೈನ್ ಎಸ್ಟೇಟ್ಸ್, ಎಂ.ಎಂ.ಆರ್. ಕನ್‌ಸ್ಟ್ರಕ್ಷನ್ಸ್ ಸೇರಿದಂತೆ ಹಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ 165 ಎಕರೆ ಭೂಮಿಯನ್ನು 313 ಕೋಟಿ ರು.ಗಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ.
ಭೂಮಿಯನ್ನು 1963ರಲ್ಲಿ ಎಚ್ಎಂಟಿಗೆ ದಾನ ನೀಡಲಾಗಿದೆ ಎಂದು ತಿಳಿಸಿದೆ. ಈಗ ಕುಮಾರಸ್ವಾಮಿ ಭೂಮಿಯನ್ನು ಎಚ್ಎಂಟಿ ಸಂಸ್ಥೆ ಖರೀದಿಸಿರುವುದಾಗಿ ಹೇಳುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಮಾಡದೆ ಮಾರಾಟ ಮಾಡಲು ಅಥವಾ ದಾನ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಕುಮಾರಸ್ವಾಮಿ ಅವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಉತ್ತರ ಕೊಟ್ಟಿದ್ದಾರೆ ಈಶ್ವರ ಖಂಡ್ರೆ.
ಇದಕ್ಕೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ? ಮೈಸೂರು ಮಹಾರಾಜರ ಕಾಲದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಎಚ್‌ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ ನೀಡಿಲ್ಲ. ಯಾವ ಆಧಾರದ ಮೇಲೆ ಮರಳಿ ಅರಣ್ಯ ಇಲಾಖೆ ವಶಕ್ಕೆ ಭೂಮಿಯನ್ನು ಪಡೆಯುತ್ತೀರಿ? ಎಚ್ಎಂಟಿಗೆ 599 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ. 1963ರಲ್ಲಿ 185 ಎಕರೆಗೆ 4.40 ಲಕ್ಷ ರು. ಹಾಗೂ 1965ರಲ್ಲಿ 77 ಎಕರೆಗೆ 1.80 ಲಕ್ಷ ರು.ಗಳನ್ನು ಪಾವತಿಸಲಾಗಿದೆ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವರು ಪರಿಶೀಲಿಸುವುದು ಒಳ್ಳೆಯದು. ರಾಜ್ಯ ಸರ್ಕಾರ ಇದೇ ರೀತಿ ಕಂಪನಿಗೆ ಕಿರುಕುಳ ನೀಡಿದರೆ, ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ 2016ರಲ್ಲೇ ನಷ್ಟದ ಉದ್ಯಮವೆಂದು ಮುಚ್ಚಲು ತೀರ್ಮಾನಿಸಿತ್ತು. ಆದರೆ ಪ್ರಧಾನಿಗಳು, ಹಣಕಾಸು ಸಚಿವರು ಹಾಗೂ ಬಂಡವಾಳ ವಾಪಸಾತಿ ಇಲಾಖೆಯ ಮನವೊಲಿಸಿ ಈ ಹೆಮ್ಮೆಯ ಕಾರ್ಖಾನೆಗೆ ಕಾಯಕಲ್ಪ ನೀಡುವ ಗುರಿ ನನ್ನದು. ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಪ್ರಾಂಜಲ ಮನಸ್ಸಿನಿಂದ ಸಹಕಾರ ನೋಡಬೇಕು ಎಂದು ಕುಮಾರಸ್ವಾಮಿ ಅವರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಚ್ಎಂಟಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಪ್ರಧಾನ ವ್ಯವಸ್ಥಾಪಕ ಎಂ.ಆರ್.ವಿ ರಾಜ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಹೆಚ್‌ಎಂಟಿ ಕಂಪೆನಿಯ ಪುನಃಶ್ಚೇತನದ ಮಾತು ಕಂಪೆನಿ, ಕಂಪೆನಿಯ ಉದ್ಯೋಗಿಗಳು ಹಾಗೂ ಷೇರುದಾರರಲ್ಲಿ ಉತ್ಸಾಹ ಮೂಡಿಸಿದ್ದರೆ, ರಾಜಕೀಯವಾಗಿ ಜಟಾಪಟಿಗೂ ಕಾರಣವಾಗಿದೆ.



