ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿರುವುದು ನಿಜ. ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದರೆ ಗೊತ್ತಾಗುತ್ತದೆ. ಹೀಗಾಗಿ ಹೊರಗೆ ಹೋಗಿದ್ದಾರೆ ಎಂದು ಹೇಳಿರುವ ಡಿಕೆ ಶಿವಕುಮಾರ್, ಸಿಂಗಾಪುರ್`ನಲ್ಲಿ ಸರ್ಕಾರ ಬೀಳಿಸುವ ತಂತ್ರಗಾರಿಕೆ ಮಾಡಲಾಗುತ್ತಿದೆ ಎಂದು ಹೇಳಿಕೆ ಕೊಟ್ಟು (DK Shivakumar) ಬಾಂಬ್ ಸಿಡಿಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಪ್ರತಿ ನಡೆಯೂ ಟ್ರ್ಯಾಕ್ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ. ಮುಂದೇನು ಆಗಲಿದೆ ಎಂಬುದನ್ನು ನೋಡೋಣ. ಶತ್ರುವಿನ ಶತ್ರು ಮಿತ್ರ ಎಂಬ ತಂತ್ರಗಾರಿಕೆ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆ ಕಾಂಗ್ರೆಸ್ಸಿಗರಲ್ಲೂ ಟೆನ್ಷನ್ ಸೃಷ್ಟಿಸಿರುವುದು ಸುಳ್ಳಲ್ಲ.
ಏಕೆಂದರೆ ಇಂತಹ ಹೇಳಿಕೆ ನೀಡಿರುವುದು ಡಿಕೆ ಶಿವಕುಮಾರ್(DK Shivakumar). ಕೆಪಿಸಿಸಿ ಅಧ್ಯಕ್ಷರೂ (KPCC President) ಹೌದು. ತಂತ್ರಗಾರಿಕೆಯಲ್ಲಿ ಕುಮಾರಸ್ವಾಮಿಗೆ (HD Kumaraswamy) ಠಕ್ಕರ್ ಕೊಡುವ ಇನ್ನೊಬ್ಬ ಲೀಡರ್ ಇದ್ದಾರೆ ಎಂದರೆ, ಅದು ಡಿಕೆ (DK Shivakumar) ಮಾತ್ರ. ಉಳಿದವರು ಹೋರಾಟ ಮಾಡಬಹುದು, ತಂತ್ರಗಾರಿಕೆಯಲ್ಲಿ ಠಕ್ಕರ್ ಕೊಡುವಷ್ಟು ನಿಪುಣರಲ್ಲ. ಹೀಗಾಗಿಯೇ ಡಿಕೆಶಿ ಮಾತನ್ನು ಯಾರೂ ಅಲ್ಲಗಳೆಯುತ್ತಲೂ ಇಲ್ಲ. ಕೃಷ್ಣಬೈರೇಗೌಡ(Krishan bairegowda), ಸತೀಶ್ ಜಾರಕಿಹೊಳಿ(Satheesh Jarakiholi), ಶಿವಾನಂದ ಪಾಟೀಲ್ (Shivananda Patil), ಕೊತ್ತನೂರು ಮಂಜುನಾಥ್.. ಹೀಗೆ ಎಲ್ಲರೂ ಡಿಕೆ ಮಾತಿಗೆ ಯೆಸ್ ಎಂದಿದ್ದಾರೆ. ಹಾಗೆಯೇ ಸರ್ಕಾರದ ಪತನ ಸಾಧ್ಯವಿಲ್ಲ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ (Satheesh Jarakiholi) : ಬಿಜೆಪಿಯವರು ದೇಶಾದ್ಯಂತ ಜನರಿಂದ ಆಯ್ಕೆ ಆದ ಸರ್ಕಾರ ಉರುಳಿಸುವುದರಲ್ಲಿ ಪರಿಣಿತರಾಗಿದ್ದಾರೆ. ಬೇರೆ, ಬೇರೆ ರಾಜ್ಯಗಳಲ್ಲಿ ಅನೇಕ ಸರ್ಕಾರಗಳನ್ನು ಪತನಗೊಳಿಸಿದ್ದಾರೆ. ಅವರು ನಿರಂತರವಾಗಿ ಇಂತಹ ಕೆಲಸ ಮಾಡುತ್ತಾರೆ. ಮೊದಲು ಮಹಾರಾಷ್ಟ್ರದಲ್ಲಿ ಆಯ್ತು, ನಂತರ ತೆಲಂಗಾಣ, ಮಧ್ಯಪ್ರದೇಶದಲ್ಲಿಯೂ ಈ ನಿಟ್ಟಿನಲ್ಲಿ ಯತ್ನ ನಡೆಯಿತು, ಅದು ವಿಫಲ ಆಗಿದೆ. ಅವರು ಜನಾದೇಶ ಪಡೆದುಕೊಂಡು ಬರುವುದಿಲ್ಲ. ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂಬುದಾಗಿ ಆಮಿಷ ಒಡ್ಡುತ್ತಾರೆ. ಕೆಲವರು ಇದಕ್ಕೆ ಬಲಿಯಾಗಬಹುದು. ಇನ್ನೂ ಕೆಲವರು ಬಲಿಯಾಗದನೇ ಇರಬಹುದು. ಹಾಗಾಗಿ, ನಾವು ಎಚ್ಚರಿಕೆಯಿಂದ ಇರಬೇಕು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷದಲ್ಲಿ ಅಸಮಾಧಾನಿತ ಶಾಸಕರಿದ್ದಾರೆ. ಅವರವರ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಹೇಳುವುದಕ್ಕೆ ಆಗುವುದಿಲ್ಲ. ಕುಮಾರಸ್ವಾಮಿಯವರು ಇದೇ ಉದ್ದೇಶಕ್ಕೆ ಹೋಗಿರಬಹುದು. ಅದು ನಿಜಾನೂ ಇರಬಹುದು. ಸುಳ್ಳು ಇರಬಹುದು. ಆದರೆ, ನಮ್ಮ ಪಕ್ಷ, ಸಿಎಂ, ಡಿಸಿಎಂ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಬೇಕು. ಅವರು ಹೆಚ್ಚು ಜವಾಬ್ದಾರರು. ಏಕೆಂದರೆ ಪಾರ್ಟಿ ಅವರ ಮೇಲೆ ಡಿಪೆಂಡ್ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆಯೋ, ಇಲ್ಲವೋ ಎಂಬುದು ಅವರಿಗೆ ಗೊತ್ತಿರುತ್ತದೆ. ಅವರ ಕಡೆ ಎಲ್ಲ ಮಾಹಿತಿ ಇರುತ್ತದೆ. ರಾಜಕಾರಣ ಎಂದರೆ ‘ಟ್ವೆಂಟಿ ಫೋರ್ ಇಂಟು ಸೆವೆನ್’ ಇದ್ದ ಹಾಗೆ.
ಕೃಷ್ಣ ಬೈರೇಗೌಡ (Krisha Bairegowda) : ಬಿಜೆಪಿಯವರು ದೇಶಾದ್ಯಂತ ಸರ್ಕಾರಗಳನ್ನು ಉರುಳಿಸುವಲ್ಲಿ ಪರಿಣತರಿದ್ದಾರೆ. ಹೀಗಾಗಿ ನಮ್ಮ ಹುಷಾರಲ್ಲಿ ನಾವಿದ್ದೇವೆ. ಯಾವುದಕ್ಕೂ ಬಿಜೆಪಿಯವರು ಹೇಸುವುದಿಲ್ಲ. ನಮ್ಮ ಶಾಸಕರ ಬಗ್ಗೆ ನಮಗೆ ನಂಬಿಕೆ ಇದೆ. ಹುಷರಾಗಿರಬೇಕು ಅಷ್ಟೇ..
ರಾಮಲಿಂಗಾ ರೆಡ್ಡಿ (Ramalinga reddy): ಸರ್ಕಾರ ಬಂಡೆಯಷ್ಟೇ ಭದ್ರವಾಗಿ ಇರಲಿದೆ. ಡಿ.ಕೆ. ಶಿವಕುಮಾರ್ ಏನು ಹೇಳಿಕೆ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಆದರೆ, ನಮ್ಮ ಸರ್ಕಾರ ಐದು ವರ್ಷ ಪೂರ್ಣ ಅಧಿಕಾರ ನಡೆಸಲಿದೆ. 135 ಶಾಸಕರು ನಮ್ಮೊಂದಿಗಿದ್ದಾರೆ. ಯಾವ ಆಪರೇಷನ್ನೂ ನಡೆಯುವುದಿಲ್ಲ.
ಕೊತ್ತನೂರು ಮಂಜುನಾಥ್(Koththanuru Manjunath) : ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿರುವ ತನಕ ಕಾಂಗ್ರೆಸ್ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಶಕ್ತಿ ಯಾರಿಗೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತರಗಂಗೆ ಬೆಟ್ಟದಂತೆ ಗಟ್ಟಿಯಾಗಿ ನಿಂತಿದ್ದಾರೆ. ಆ ಬೆಟ್ಟವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ .
ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar): ನನಗೆ ಹೆಚ್ಚಿನ ವಿಷಯ ಗೊತ್ತಿಲ್ಲ. ಆದರೆ ಶಿವಕುಮಾರಣ್ಣಂಗೆ ಗೊತ್ತಿರುತ್ತೆ. ಅಷ್ಟು ಮಾಹಿತಿ ಇಲ್ಲದೆ ಅವರು ಹಾಗೆಲ್ಲ ಹೇಳುವುದಿಲ್ಲ. ಅದನ್ನು ಅವರೇ ನಿಭಾಯಿಸುತ್ತಾರೆ.
ಹೀಗೆ ಕಾಂಗ್ರೆಸ್ಸಿಗರು ಹೇಳುತ್ತಿದ್ದರೆ, ಅತ್ತ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಯೂರೋಪ್ ಪ್ರವಾಸದಲ್ಲಿದ್ದಾರೆ. ಅವರ ಜೊತೆ ಪತ್ನಿ ಅನಿತಾ, ಪುತ್ರ ನಿಖಿಲ್, ಸೊಸೆ ಮತ್ತು ಮೊಮ್ಮಗು ಕೂಡಾ ಇದ್ದಾರೆ. ಒಟ್ಟಿನಲ್ಲಿ ಅವರದ್ದು ಫ್ಯಾಮಿಲಿ ಟೂರ್. ಅಂದಹಾಗೆ ಬಿಜೆಪಿಯ ಸೀನಿಯರ್ ಲೀಡರ್ ಒಬ್ಬರು ಇತ್ತೀಚೆಗೆ ಸಿಂಗಾಪುರದಿಂದ ವಾಪಸ್ ಆಗಿದ್ದಾರೆ. ಇತ್ತೀಚೆಗೆ ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ರೆಬಲ್ ಆಗಿದ್ದವರು. ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಸೀನಿಯರ್ ಲೀಡರೊಬ್ಬರೂ ಕೂಡಾ ಇದೀಗ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಕಾಂಗ್ರೆಸ್ಸಿನ ಆ ಲೀಡರ್ ಕೂಡಾ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ನಾಯಕ. ಆದರೆ ಅಧಿಕೃತವಾಗಿ ಅವರೆಲ್ಲ ಹೋಗಿರುವುದು ಕುಟುಂಬದ ಜೊತೆಗೆ. ಅದನ್ನು ರಾಜಕೀಯಕ್ಕೆ ಲಿಂಕ್ ಮಾಡುವುದು ತಪ್ಪಾಗಲಿದೆ.
ಅಲ್ಲದೆ ಕಾಂಗ್ರೆಸ್ ಗೆದ್ದಿರುವುದು 135 ಸೀಟು. ಪಕ್ಷೇತರರ ಬೆಂಬಲವೂ ಸಿಕ್ಕಿದೆ. ಸರ್ಕಾರವನ್ನು ಬೀಳಿಸೋಕೆ ಕನಿಷ್ಠ 23+ ಶಾಸಕರು ಬಂಡಾಯ ಏಳಬೇಕು. ಅಷ್ಟೊಂದು ಶಾಸಕರನ್ನು ಸೆಳೆದು ಸರ್ಕಾರವನ್ನು ಅಲುಗಾಡಿಸುವುದು ಅಷ್ಟು ಸುಲಭವೂ ಅಲ್ಲ. ಆಪರೇಷನ್ ಮಾಡಿ ಸರ್ಕಾರ ಕೆಡವುತ್ತೇವೆ ಎನ್ನುವುದಕ್ಕೆ ಇರುವ ಸಂಖ್ಯೆಗಳೂ ಕಡಿಮೆ ಇಲ್ಲ. ಇನ್ನು ಕಾಂಗ್ರೆಸ್ಸಿನಲ್ಲೇ ಎರಡು ಬಣಗಳಾಗಿ ಒಡೆಯುವುದು ಅಸಾಧ್ಯದ ಮಾತು. ಏಕೆಂದರೆ ಪಕ್ಷಾಂತರ ನಿಷೇಧ ಕಾಯೆ ಇರುವುದರಿಂದ ಕನಿಷ್ಠ 92 ಶಾಸಕರು ಒಟ್ಟಾಗಿ ಹೋಗಬೇಕು. ಅದು ಅಸಾಧ್ಯ. ಸಾಧ್ಯವಿಲ್ಲ. ಆದರೆ, ಇದು ರಾಜಕೀಯ.



