ಮಾಜಿ ಪ್ರಧಾನಿ ದೇವೇಗೌಡರಿಗೆ ನಾಳೆ ಅಂದ್ರೆ ಮೇ 18ರಂದು 91 ತುಂಬುತ್ತಿದೆ. 92ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಸಂಭ್ರಮ ಎಲ್ಲರಿಗೂ ಸಿಗುವುದಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 92ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅಪರೂಪದ ಅದೃಷ್ಟ ದೊರಕಿದೆ. ಆದರೆ.. ಹೆಚ್.ಡಿ.ದೇವೇಗೌಡರು ನಾಳೆ ಮನೆಯನ್ನು ಬಿಟ್ಟು ಹೊರಗೇ ಬರುವುದಿಲ್ಲ ಎನ್ನುವ ಪರಿಸ್ಥಿತಿ ಇದೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದರೆ, ಸಂತ್ರಸ್ತೆ ಅಪಹರಣ ಆರೋಪದ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಹೀಗಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ನೋವಿನಲ್ಲಿದ್ದಾರೆ. ಹೀಗಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಪತ್ರ ಬರೆದಿದ್ದು, ಈ ವರ್ಷ ಕಾರಣಾಂತರಗಳಿಂದ ನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ, ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಎಚ್ಡಿ ದೇವೇಗೌಡ ಅವರು ಇದೇ ಮೇ 18ಕ್ಕೆ 91 ವರ್ಷ ಪೂರೈಸಿ 92ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ, ಈ ಬಾರಿ ಕಾರಣಾಂತರಗಳಿಂದ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ. ಅಲ್ಲದೇ ಪ್ರಸಕ್ತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ (ಎನ್ಡಿಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ಸದ್ಯಕ್ಕೆ ಹೊರಗೆ ನಿರ್ಭೀತಿಯಿಂದ ಓಡಾಡುತ್ತಿರುವುದು ಕುಮಾರಸ್ವಾಮಿ ಮಾತ್ರ. ಕುಮಾರಸ್ವಾಮಿ ದೇವೇಗೌಡರ ಮನೆಗೆ ಪ್ರತಿದಿನ ಹೋಗಿ ಬರುತ್ತಿದ್ಧಾರೆ. ಜಾಮೀನಿನ ಮೇಲಿರುವ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ತಮ್ಮ ಬೆಂಗಳೂರಿನ ಬಸವನಗುಡಿಯಲ್ಲಿನ ಸ್ವಂತ ನಿವಾಸದಿಂದ ದೂರ ಉಳಿದಿದ್ದಾರೆ. ತಂದೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಸ್ವಂತ ಮನೆಯಲ್ಲಿ ಕೆಲವೇ ನಿಮಿಷಗಳ ಕಾಲ ಮಾತ್ರ ಇದ್ದು, ವಾಪಸ್ ಬಂದಿದ್ದರು. ನಿವಾಸದಿಂದ ದೂರ ಉಳಿಯಲು ಜ್ಯೋತಿಷ್ಯರು ಸಲಹೆ ನೀಡಿದ್ದಾರೆ ಎಂಬು ಮಾತುಗಳೂ ಕೇಳಿ ಬಂದಿವೆ.
ಪೆನ್‌ಡ್ರೈವ್ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರೆ, ರೇವಣ್ಣ ಅವರು ಬಸವನಗುಡಿ ನಿವಾಸದತ್ತ ಸುಳಿಯುತ್ತಿಲ್ಲ. ಜೈಲಿಗೆ ಹೋಗಿ ಬಂದ ಬಳಿಕ ದೇವೇಗೌಡ ನಿವಾಸದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರೇವಣ್ಣ ಅವರು ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಜ್ಯೋತಿಷ್ಯದ ಮೇಲೆಯೇ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ ಇಂತಹ ಅನುಮಾನ ಸಹಜವಾಗಿಯೇ ಮೂಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಆದರೆ.. ಪ್ರತಿ ವರ್ಷ ದೇವೇಗೌಡರ ಹುಟ್ಟುಹಬ್ಬ ಹೀಗಿರುತ್ತಿರಲಿಲ್ಲ. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜನಸಾಗರವೇ ಸೇರುತ್ತಿತ್ತು. ರಾಜಕೀಯ ಗಣ್ಯರು ಪಕ್ಷಭೇದ ಮರೆತು ದೇವೇಗೌಡರಿಗೆ ಶುಭ ಕೋರುತ್ತಿದ್ದರು. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.



