ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದ್ದಾರೆ. ಅದೂ ಕೂಡಾ ಅವರದ್ದೇ ಪಕ್ಷದ ಸಾಧನೆ, ಇತಿಹಾಸಗಳನ್ನು ನೆನಪಿಸುವುದರ ಮುಖಾಂತರ ಎನ್ನುವುದು ವಿಶೇಷ. ಕಾಂಗ್ರೆಸ್‌ಗೆ ಬುದ್ದಿ ಹೇಳಿರುವುದು ರಾಜ್ಯಸಭೆಯಲ್ಲಿ. ಇಡೀ ದೇಶಕ್ಕೇ ಕೇಳುವಂತೆ ಹೇಳಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಪ್ರಧಾನಿಗಳ ವಿರುದ್ಧ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಕುರಿತಂತೆ ಮಾತನಾಡಿದ ದೇವೇಗೌಡ ಇದೇ ರೀತಿ ಸುಳ್ಳು ಹೇಳುತ್ತಾ ಹೋದರೆ ಅದು ದೇಶಕ್ಕೆ ಹಾಗೂ ಅವರ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತದೆ ಎಂದು ತಿಳಿಸಿ ಹೇಳಿದ್ದಾರೆ. ನಮ್ಮದು ಬಹಳ ದೊಡ್ಡ ರಾಷ್ಟ್ರ. ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು. ನನ್ನ ಪ್ರತಿಪಕ್ಷ ಸ್ನೇಹಿತರೇ ದಯವಿಟ್ಟು ನೆನಪಿಡಿ ‘ವೋಟ್ ಚೋರಿ’ಯಂತ ಪದಗಳನ್ನು ಬಳಸಿ ನೀವು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುತ್ತೀರಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ಚುನಾವಣೆಗಳಲ್ಲಿ ತಪ್ಪುಗಳಾಗುವುದು ಸಹಜ. ಅದು ಹಿಂದೆಯೂ ಆಗಿತ್ತು. ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಬರೆದಿದ್ದ ಪತ್ರ ನೆನಪಿದೆಯೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದರು.
ಬಿಹಾರದಲ್ಲಿ ಈ ರೀತಿಯಲ್ಲೇ ಮಾತನಾಡಿ ಕೇವಲ 6 ಶಾಸಕರ ಹಂತಕ್ಕೆ ಕಾಂಗ್ರೆಸ್ ಇಳಿಯಿತು ಎಂದು ಹೇಳಿದ ದೇವೇಗೌಡ ದೇಶದಲ್ಲಿ ಚುನಾವಣಾ ಆಯೋಗವಿದೆ, ಸುಪ್ರೀಂ ಕೋರ್ಟ್ ಇದೆ. ಈ ಎಲ್ಲ ವಿಷಯಗಳನ್ನು ಸರಿಪಡಿಸಲು ಚುನಾವಣಾ ಆಯೋಗವು ಎಲ್ಲಾ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ ಎಂದು ನೆನಪಿಸಿದರು.
ವಾಸ್ತವ ಏನೆಂದರೆ ವೋಟ್ ಚೋರಿ ಕುರಿತ ರಾಹುಲ್ ಗಾಂಧಿ ಟೀಕೆಗಳು ಇದೇ ಮೊದಲೂ ಅಲ್ಲ. ರಾಹುಲ್ ಗಾಂಧಿ ಸುದ್ದಿಗೋಷ್ಟಿ ಮಾಡಿ ಆರೋಪ ಮಾಡುತ್ತಾರೆಯೇ ಹೊರತು, ಅದನ್ನು ಕಾನೂನು ಹಂತಕ್ಕೆ ಒಯ್ಯುವುದೇ ಇಲ್ಲ. ಇನ್ನು ರಾಹುಲ್ ಗಾಂಧಿ ಅವರು ಇದುವರೆಗೆ ತೋರಿಸಿದ ಎಲ್ಲ ಪ್ರಕರಣಗಳಲ್ಲೂ ʻವಾಸ್ತವವೇ ಬೇರೆ, ರಾಹುಲ್ ಗಾಂಧಿ ಹೇಳಿದ್ದೇ ಬೇರೆʼ ಎನ್ನುವುದು ಕೂಡಾ ಸಾಬೀತಾಗಿದೆ. ಆದರೆ, ಅದು ತಮಗೆ ಗೊತ್ತೇ ಇಲ್ಲವೇನೋ ಎಂಬಂತೆ ಕಾಂಗ್ರೆಸ್ ವರ್ತಿಸ್ತಾ ಇದೆ. ಅಂದರೆ ಕಾಂಗ್ರೆಸ್ಸಿಗರು ಏನಂದುಕೊಂಡಿದ್ದಾರೆ ಎಂದರೆ ನಾವು ಹೇಳುತ್ತಿರುವುದು ಬಿಟ್ಟು.. ಯಾರಿಗೂ ಏನೂ ಗೊತ್ತಿಲ್ಲ. ನಾವು ಹೇಳುತ್ತಿರುವುದು ಮಾತ್ರವೇ ಸತ್ಯ ಎಂಬ ನಂಬಿಕೆಗೆ ಜೋತು ಬಿದ್ದಿದ್ದಾರೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್‌ನ್ನು ನಂಬಿಸುವುದಕ್ಕೆ ಎಂದೇ ಒಂದಷ್ಟು ಗಿರಾಕಿಗಳು ಲಭ್ಯ ಇದ್ದಾರೆ. ಇದೆಲ್ಲದರ ಪರಿಣಾಮ ಕಾಂಗ್ರೆಸ್ ಎದುರಿಸುತ್ತಿದೆ.
ಅಂದಹಾಗೆ ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದೆ. ಎಡಪಕ್ಷಗಳ ಎಲ್‌ಡಿಎಫ್ ಸೋತಿದೆ. ಬಿಜೆಪಿ ಕೇವಲ ಒಂದು ಮಹಾನಗರ ಪಾಲಿಕೆಯನ್ನು ಗೆದ್ದುಕೊಂಡಿದೆ. ಮತ್ತು ಬಿಜೆಪಿ ಇವಿಎಂ, ಎಲೆಕ್ಷನ್ ಕಮಿಷನ್ ಯಾರ ಮೇಲೆಯೂ ಆರೋಪ ಮಾಡ್ತಿಲ್ಲ.



