ಷೇರುಪೇಟೆ ವ್ಯವಹಾರ ಎನ್ನುವುದು ಗೊತ್ತಿಲ್ಲದವರಿಗೆ ಜೂಜು ಎನ್ನಿಸುತ್ತದೆ. ವ್ಯವಹಾರ ಗೊತ್ತಿದ್ದವರ ಪಾಲಿಗೆ ಇದು ಲೆಕ್ಕಾಚಾರದ ಬಿಸಿನೆಸ್. ಆದರೂ, ಇಲ್ಲಿನ ವ್ಯವಹಾರ, ಲಾಭ-ನಷ್ಟ, ಹೂಡಿಕೆದಾರರಿಗೆ ಸಂಬಂಧವೇ ಇಲ್ಲದರಿಂದ ನಿರ್ಧಾರವಾಗುವ ಕಾರಣದಿಂದ ಇದನ್ನು ಜೂಜು ಎಂದೇ ಹೇಳಬಹುದು. ಇಷ್ಟೆಲ್ಲದರ ನಡುವೆ ಷೇರುಪೇಟೆಯಲ್ಲಿ ಇತ್ತೀಚೆಗೆ ಲಾಸುಗಳೇ ಹೆಚ್ಚು ಆಗುತ್ತಿವೆ. ಸೆನ್ಸೆಕ್ಸ್ ಕುಸಿಯುತ್ತಲೇ ಹೋಗುತ್ತಿದೆ. ಬಹುತೇಕ ಪ್ರಮುಖ ಷೇರು ದರಗಳು ಕುಸಿಯುತ್ತಿವೆ. ಹೀಗಾಗಿ ಇದು ಎಚ್ಚರಿಕೆ ಸಮಯ. ಏಕೆಂದರೆ..
ಷೇರು ಮಾರುಕಟ್ಟೆಯಿಂದ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ. ಅದಕ್ಕೆ ಕಾರಣ, ಈಗ ಅಮೆರಿಕದಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಎನ್ನುವುದು ಕಾರಣ. ಅದಕ್ಕೂ ಕಾರಣಗಳಿವೆ.
ಡಾಲರ್ ಎದುರು ರುಪಾಯಿ ದಿನೇ ದಿನೇ ಮೌಲ್ಯ ಕುಸಿತ ಕಾಣುತ್ತಿದೆ. ಇದು ಹೀಗೆಯೇ ಮುಂದುವರೆದರೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ನಷ್ಟವಾದರೆ, ರಪ್ತು ಮಾಡುವ ಕಂಪೆನಿಗಳಿಗೆ ಲಾಭವಾಗಲಿದೆ. ಅಂದರೆ ಭಾರತದಲ್ಲಿ ರೂಪಾಯಿಯಲ್ಲಿ ಹೂಡಿಕೆ ಮಾಡಿರುವವರಿಗೆ ಲಾಭ. ಡಾಲರ್ ಹೂಡಿಕೆ ಮಾಡಿದವರಿಗೆ ನಷ್ಟ. ಸರಳವಾಗಿ ಹೇಳಬೇಕು ಎಂದರೆ ಲಾಭವನ್ನು ರೂಪಾಯಿಯಿಂದ ಡಾಲರ್‌ಗೆ ಕನ್ವರ್ಟ್ ಮಾಡಿ ಲಾಭ ಪಡೆಯುವವರಿಗೆ ಲಾಭ ಕಡಿಮೆ. ಸದ್ಯಕ್ಕೆ ರಫ್ತು ಮಾಡುವ ಕಂಪೆನಿಗಳಿಗೆ ಮಾತ್ರವೇ ಲಾಭ ಇದೆ. ಏಕೆಂದರೆ ಅವರು ಡಾಲರ್‌ನಿಂದ ರೂಪಾಯಿಗೆ ಕನ್ವರ್ಟ್ ಮಾಡಿಕೊಳ್ತಾರೆ.
ಇನ್ನು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ತುಸು ಏರಿಕೆ ಕಂಡಿದೆ. ಬ್ಯಾರಲ್ ತೈಲಕ್ಕೆ 63.83 ಡಾಲರ್ ಆಗಿದೆ. ಇದರಿಂದ ಭಾರತದ ಆಮದು ವೆಚ್ಚ ಹೆಚ್ಚಿ, ಅದರಿಂದ ಹಣದುಬ್ಬರ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ. ಈ ಕಾರಣಕ್ಕೂ ವಿದೇಶೀ ಹೂಡಿಕೆಗಳಿಂದ ಹೊರಹರಿವು ಆಗುತ್ತಿರುವ ಸಾಧ್ಯತೆ ಇದೆ.
ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ನ ಎರಡು ದಿನದ ಸಭೆ ನಡೆಯುತ್ತಿದೆ. ಬಡ್ಡಿದರ, ಹಣದುಬ್ಬರ, ನಿರುದ್ಯೋಗ, ಜಿಡಿಪಿ ಇತ್ಯಾದಿ ಬಗ್ಗೆ ಸೆಂಟ್ರಲ್ ಬ್ಯಾಂಕ್ ಅನಿಸಿಕೆ ಏನಿರಬಹುದು ಎನ್ನುವ ಕುತೂಹಲ ಇದೆ. ಮುನ್ನೆಚ್ಚರಿಕೆಯಾಗಿ ವಿದೇಶೀ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ತಾತ್ಕಾಲಿಕವಾಗಿ ಹೊರಹೊರಟಿರಬಹುದು. ಭಾರತ ಹಾಗೂ ಅಮೆರಿಕಾ ನಡುವಿನ ಟ್ರೇಡ್ ಡೀಲ್ ಎದುರು ನೋಡುತ್ತಿರುವವರಿಗೆ ಕೂಡಾ ಯಾವುದೇ ಬೆಳವಣಿಗೆ ಕಾಣಿಸುತ್ತಿಲ್ಲ. ಡಿಸೆಂಬರ್ ತಿಂಗಳು ಬಂದರೂ ಟ್ರೇಡ್ ಡೀಲ್ ಅಂತಿಮವಾಗಿಲ್ಲ, ಇನ್ನೂ ಡಿಸೆಂಬರ್ ಕೊನೆಗೆ ಕ್ರಿಸ್‌ಮಸ್, ಹೊಸ ವರ್ಷದ ರಜಾದಿನಗಳು ಬರೋದ್ರಿಂದ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷಣ ಕಂಡುಬಂದಿಲ್ಲ.
ಇದೇ ವೇಳೆಯಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಭಾರತದ ಕೃಷಿ ಉತ್ಪನ್ನಗಳ ಆಮದಿನ ಮೇಲೆ, ಅದ್ರಲ್ಲೂ ರೈಸ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ಸಹ ಮಾರುಕಟ್ಟೆಯ ಭಾವನೆಯ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ. ತಜ್ಞರ ಪ್ರಕಾರ ಒಮ್ಮೆ ಡಿಸೆಂಬರ್ ಕ್ವಾರ್ಟರ್ ರಿಸಲ್ಟ್ ಪ್ರಕಟವಾಗಲು ಶುರುವಾಗುತ್ತದೆಯೋ ಮಾರುಕಟ್ಟೆ ಸಾಕಷ್ಟು ಏರುಪೇರು ಕಾಣಲಿದೆ.



