ಚಿತ್ರರಂಗದಲ್ಲಿ ಕೆಲವೊಂದು ವಿಷಯಗಳು ಹಾಗೂ ಘಟನೆಗಳನ್ನು ಮರೆಯುವುದಕ್ಕೆ ಸಾಧ್ಯ ಇಲ್ಲ. ಇದು ರಾಜಕೀಯದ ಹಾಗಲ್ಲ. ರಾಜಕೀಯದಲ್ಲಿ ಆದರೆ.. ಯಾರೂ ಶತ್ರುಗಳಲ್ಲ. ಯಾರೂ ಮಿತ್ರರೂ ಅಲ್ಲ ಎನ್ನಬಹುದು. ಆದರೆ, ಸಿನಿಮಾ ರಂಗದಲ್ಲಿ ಯಾರೂ ಮಿತ್ರರಲ್ಲ. ಶಾಶ್ವತ್ರ ಫ್ರೆಂಡ್ ಶಿಪ್ ಇರುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ. ಹಾಗಂತ.. ಶತ್ರುತ್ವ, ದ್ವೇಷವೂ ಶಾಶ್ವತ ಅಲ್ಲ. ಎಸ್.ನಾರಾಯಣ್ ಮತ್ತೊಮ್ಮೆ ದುನಿಯಾ ವಿಜಯ್ ಜೊತೆಗೆ ಕೈ ಜೋಡಿಸಿದ್ದಾರೆ.
ಈ ಹಿಂದೆ ಇದೇ ಜೋಡಿ 2007ರಲ್ಲಿ ‘ಚಂಡ’ ಹಾಗೂ 2013ರಲ್ಲಿ ‘ದಕ್ಷ’ ಸಿನಿಮಾ ಮಾಡಿದ್ದರು. ಇದೀಗ ಮತ್ತೊಮ್ಮೆ ಜೊತೆಯಾಗಿದ್ದು, ಮೂರನೇ ಬಾರಿಗೆ ನಾರಾಯಣ್, ವಿಜಯ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ಧಾರೆ.
ವಿಶೇಷ ಎಂದರೆ.. ಚಂಡ ಚಿತ್ರ ಮಾಡಿದಾಗ, 2007ರಲ್ಲಿ ಎಸ್.ನಾರಾಯಣ್ ಮತ್ತು ವಿಜಯ್ ಇಬ್ಬರೂ ಪರಸ್ಪರ ಠೂ ಬಿಟ್ಟಿದ್ದರು. ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ವಿಜಯ್, ಡಬ್ಬಿಂಗ್ ಮಾಡುವುದಕ್ಕೆ ನಿರಾಕರಿಸಿದ್ದರು. ಒಂದು ಹಂತದಲ್ಲಿ ಫಿಲ್ಮ್ ಚೇಂಬರ್, ವಿಜಯ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಿತ್ತು. ಆಮೇಲೆ.. ವಿಜಯ್ ಕೂಡಾ ಬಗ್ಗಿದರು. ನಾರಾಯಣ್ ಕೂಡಾ ವಿವಾದವನ್ನು ಅಲ್ಲಿಗೇ ಬಿಟ್ಟರು. ಇಬ್ಬರೂ ಕೂಡಾ ಮತ್ತೊಮ್ಮೆ ಜೊತೆಯಾಗಿದ್ದು 2013ರಲ್ಲಿ. ದಕ್ಷ ಚಿತ್ರಕ್ಕೆ ವಿಜಯ್ ಅವರೇ ಹೀರೋ.
ದಕ್ಷ ಚಿತ್ರ ಒಂದೇ ದಿನದಲ್ಲಿ ಚಿತ್ರೀಕರಣಗೊಂಡ ಸಿನಿಮಾ. ಈ ಚಿತ್ರದಲ್ಲೊಂದು ದೃಶ್ಯವನ್ನು ಸತತ ಎರಡು ಗಂಟೆಗಳ ಕಾಲ ಒಂದೇ ಟೇಕ್ʻನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಹೆಬ್ಬಾಳದ ಬಳಿ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿತ್ತು. ರಾತ್ರಿ ಶುರುವಾದ ಚಿತ್ರೀಕರಣ ಮರುದಿನ ರಾತ್ರಿಗೆ ಕಂಪ್ಲೀಟ್ ಆಗಿತ್ತು. ವಿಚಿತ್ರವೆಂದರೆ, ಎಸ್.ನಾರಾಯಣ್ ಮತ್ತು ವಿಜಯ್ ಕಾಂಬಿನೇಷನ್ನಿನ ಎರಡೂ ಚಿತ್ರಗಳು ಅಟ್ಟರ್ ಫ್ಲಾಪ್.
ಇದೀಗ ಇದೇ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಈ ಚಿತ್ರದಲ್ಲಿ ಇನ್ನೂ ಒಬ್ಬ ಹೀರೋ ಇರುತ್ತಾರೆ. ಇದೇ ಮೊದಲ ಬಾರಿಗೆ ‘ದುನಿಯಾ’ ವಿಜಯ್ ಜೊತೆಗೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ನಟಿಸುತ್ತಿದ್ಧಾರೆ. ಫಾಸ್ಟ್ ಆಗಿ ಕೆಲಸ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಎಸ್. ನಾರಾಯಣ್ ಪ್ರೊಡಕ್ಷನ್ ನಂ 1 ಹೆಸರಿನಲ್ಲಿ ಶೂಟಿಂಗ್ ಆರಂಭಿಸಿದ್ದೂ ಆಗಿದೆ. ಚಿಕ್ಕಮಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣವೂ ಮುಗಿದಿದೆ.
ಕೆ ಮಂಜು ಮತ್ತು ರಮೇಶ್ ಯಾದವ್ ಇಬ್ಬರೂ ಸೇರಿ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಎಂಬ ಪ್ರೊಡಕ್ಷನ್ಸ್ ಹುಟ್ಟುಹಾಕಿದ್ಧಾರೆ. ಈ ಸಂಸ್ಥೆಯ ಮೊದಲ ಪ್ರಯತ್ನವಾಗಿ ಎಸ್ ನಾರಾಯಣ್ ನಿರ್ದೇಶನದ ಈ ಸಿನಿಮಾ ಸಿದ್ಧವಾಗುತ್ತಿದೆ. ‘ದುನಿಯಾ’ ವಿಜಯ್ ಮತ್ತು ಶ್ರೇಯಸ್ ಮಂಜು ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾಗೆ ಬೃಂದಾ ಆಚಾರ್ಯ ನಾಯಕಿ. ಇನ್ನು, ವಿಭಿನ್ನ ಪಾತ್ರದಲ್ಲಿ ಸಾಧುಕೋಕಿಲ ನಟಿಸುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧಾ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಗಿರಿ, ಜಯರಾಮ್, ಕಲ್ಯಾಣಿ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಮುಂತಾದವರು ಈ ಸಿನಿಮಾದಲ್ಲಿದ್ದಾರೆ.



