ಹಾವಿನ ದ್ವೇಷ 12 ವರುಷ.. ಅನ್ನೋದು ಜನಗಳ ನಂಬಿಕೆ. ಹಂಗೇನು ಇಲ್ಲ, ಹಾವಿಗೆ ನೆನಪಿನ ಶಕ್ತಿಯೇ ಇಲ್ಲ. ಹಾವಿಗೆ ಕಣ್ಣೂ ಕಾಣಲ್ಲ. ಇನ್ನು ನೆನಪಿಟ್ಟುಕೊಳ್ಳೋದಾದ್ರೂ ಹೇಗೆ ಅನ್ನೋದು ಪ್ರಾಣಿತಜ್ಞರ ವಾದ. ಆದರೆ ಹಾವುಗಳ ದ್ವೇಷದ ಕಥೆಗಳಂತೂ ಮುಗಿದಿಲ್ಲ. ಹಾವಿನ ದ್ವೇಷದ ಬಗ್ಗೆ ಬಂದಿರೋ ಸಿನಿಮಾಗಳು, ಸೃಷ್ಟಿಯಾಗಿರೋ ಕಥೆಗಳಿಗೆ ಲೆಕ್ಕವೇ ಇಲ್ಲ. ಹಾವಿನ ದ್ವೇಷ 12 ವರುಷ.. ನಾಗರಹಾವು ಚಿತ್ರದ ಹಾಡನ್ನಂತೂ ಕನ್ನಡಿಗರು ಕನಸಿನಲ್ಲಿ ಕೇಳಿದರೂ ಇಡೀ ಸಾಹಿತ್ಯ ಹೇಳ್ತಾರೆ. ವಿಜ್ಞಾನವೇ ಬೇರೆ.. ನಂಬಿಕೆಯೇ ಬೇರೆ. ಆದರೆ ಆ ವಿಜ್ಞಾನವೇ ಈಗ ಕಾಗೆಗಳೂ ಕೂಡಾ ಸೇಡು ತೀರಿಸಿಕೊಳ್ಳುತ್ತವೆ ಎಂದು ಹೇಳುತ್ತಿದೆ. ಅಂದಹಾಗೆ ಹಾವಿನ ದ್ವೇಷ 12 ವರುಷವಾದರೆ, ಕಾಗೆಗಳ ದ್ವೇಷ 17 ವರ್ಷಗಳಂತೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜುಫ್ ಅನ್ನೋವ್ರು ಈ ಬಗ್ಗೆ ಸುದೀರ್ಘ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನ ಶುರುವಾಗಿದ್ದು 2006ರಲ್ಲಿ. ಕಾಗೆಗಳು ಸೇಡು ತೀರಿಸಿಕೊಳ್ಳುತ್ತವೆಯೇ ಎಂಬುದರ ಬಗ್ಗೆ ಪ್ರಯೋಗ ಆರಂಭಿಸಿದ ಮಾರ್ಜುಫ್ ಒಂದು ರಾಕ್ಷಸ ಮುಖವಾಡ ಹಾಕಿಕೊಂಡರು. ಆ ರಾಕ್ಷಸ ಮುಖವಾಡವನ್ನು ಧರಿಸಿ ಏಳು ಕಾಗೆಗಳನ್ನು ಬಲೆ ಹಾಕಿ ಹಿಡಿದರು. ನಂತರ, ಅವುಗಳ ರೆಕ್ಕೆಗಳ ಮೇಲೆ ಗುರುತು ಹಾಕಿ ಬಿಟ್ಟರು. ಯಾವುದೇ ಹಿಂಸೆ ಕೊಡಲಿಲ್ಲ. ಆದರೆ, ಆ ಕಾಗೆಗಳು ಮರೆಯಲಿಲ್ಲ. ನಂತರ ಆ ಏಳು ಕಾಗೆಗಳು ತಮ್ಮನ್ನು ಹಿಡಿದ ವ್ಯಕ್ತಿಯನ್ನು ಹುಡುಕುತ್ತಲೇ ಇದ್ದವು. ಪ್ರೊಫೆಸರ್ ಜಾನ್ ಮಾರ್ಜುಫ್ ಮುಖವಾಡ ಧರಿಸಿ ಕ್ಯಾಂಪಸ್‌ಗೆ ಬಂದಾಗಲೆಲ್ಲಾ, ಕಾಗೆಗಳು ಅವರ ಮೇಲೆ ದಾಳಿ ಮಾಡುತ್ತಿದ್ದವು. ಆದರೆ ಮುಖವಾಡ ಧರಿಸದೇ ಬಂದ ದಿನ ಕಾಗೆಗಳು ಮಾರ್ಜುಫ್ ಅವರನ್ನು ಗುರುತು ಹಿಡಿಯುತ್ತಿರಲಿಲ್ಲ.
ಪ್ರೊಫೆಸರ್ ಮಾರ್ಜುಫ್ ಅವರಿಗೆ ಆಶ್ಚರ್ಯವಾದ ವಿಷಯವೆಂದರೆ, ಈ ದಾಳಿಗಳಲ್ಲಿ ಆ ಏಳು ಕಾಗೆಗಳಷ್ಟೇ ಅಲ್ಲ, ಅಲ್ಲಿ ಇದ್ದ ಇತರ ಕಾಗೆಗಳು ಸಹ ಅಟ್ಯಾಕ್ ಮಾಡುತ್ತಿದ್ದವು. ಕಾಗೆಗಳ ಈ ಸಮೂಹ ದಾಳಿ ಸುಮಾರು ಏಳು ವರ್ಷಗಳ ಕಾಲ ನಡೆದರೆ, 2013 ರ ನಂತರ, ಕಾಗೆಗಳ ದಾಳಿ ಕ್ರಮೇಣ ಕಡಿಮೆಯಾಗತೊಡಗಿತು. ಕೊನೆಗೆ, ತಮ್ಮ ಪ್ರಯೋಗವನ್ನು ಆರಂಭಿಸಿ 17 ವರ್ಷಗಳ ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಪ್ರೊಫೆಸರ್ ಜಾನ್ ಮಾರ್ಜ್ಲುಫ್ ಮತ್ತೆ ಮುಖವಾಡ ಧರಿಸಿ ಹೊರಗೆ ಹೋದರು. ಪ್ರಯೋಗ ಆರಂಭವಾದ ನಂತರ ಮೊದಲ ಬಾರಿಗೆ ಕಾಗೆಗಳು ಅವರ ಮೇಲೆ ದಾಳಿ ಮಾಡಲಿಲ್ಲ.
ಕಾಗೆಗಳಲ್ಲಿ ಸಸ್ತನಿಗಳ ಅಮಿಗ್ಡಾಲಾಕ್ಕೆ ಸಮಾನವಾದ ಮೆದುಳಿನ ಭಾಗವಿದೆ. ಇದು ಭಾವನೆಗಳನ್ನು ಪ್ರಕ್ರಿಯೆಗೊಳಿಸಲು ಕಾರಣವಾದ ಮೆದುಳಿನ ಭಾಗ. ಇದರ ಮೂಲಕ ಕಾಗೆಗಳು ಮಾನವ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬಲ್ಲವು. ಮಾನವ ಮುಖಗಳನ್ನು ಸಹ ಗುರುತಿಸಬಲ್ಲವು. ತಮಗೆ ಅಪಾಯವೆನಿಸಿದರೆ ಅವರನ್ನು ನೆನಪಿಟ್ಟುಕೊಂಡು ದ್ವೇಷ ಸಾಧಿಸುತ್ತವೆ ಎಂದು ವರದಿ ಮಾಡಿದ್ದಾರೆ.
ವಿಷಯವೇನು ಗೊತ್ತೇ.. ಭಾರತದಲ್ಲಿ ಈ ರೀತಿಯ ಸಂಶೋಧನೆಗಳು ನಡೆಯುವುದೇ ಇಲ್ಲ. ನಡೆದರೂ.. ಸಂಶೋಧನೆ ಮಾಡುವವರಿಗೆ ಉಪದೇಶಗಳಿರುತ್ತವೆ. ಏಕೆಂದರೆ ಕಾಗೆ ಮುಟ್ಟಿದರೆ ಅಪಶಕುನ, ಕಾಗೆ ಕುಟುಕಿದರೆ ಶನಿ ಹೆಗಲೇರಿದಂತೆ ಎಂಬ ನಂಬಿಕೆಗಳಿವೆ. ಕಾಗೆ ಶನಿದೇವರ ವಾಹನ ಎಂಬ ನಂಬಿಕೆಯೂ ಇದೆ. ಈ ಎಲ್ಲದರ ನಡುವೆ ಅಮೆರಿಕದ ಈ ಪ್ರೊಫೆಸರ್ ಇದೊಂದು ಸಂಶೋಧನೆಗೆ ತನ್ನ ಜೀವನದ ಅಮೂಲ್ಯ 17 ವರ್ಷಗಳನ್ನು ಮುಡುಪಾಗಿಟ್ಟಿದ್ದಾರೆ ಎನ್ನುವುದು ಕುತೂಹಲಕಾರಿ. ಆದರೆ ವಿಚಿತ್ರವೇನು ಗೊತ್ತೇ.. ಕಾಗೆಗಳ ಆಯಸ್ಸು ಸರಾಸರಿ (ಅರಣ್ಯ ಪ್ರದೇಶಗಳಲ್ಲಿ) 15-20 ವರ್ಷಗಳು. 30 ವರ್ಷದವರೆಗೂ ಬದುಕಿರುವ ಉದಾಹರಣೆಗಳಿವೆ. ಇದುವರೆಗೆ 59 ವರ್ಷದ ಕಾಗೆಯೇ ಅತಿ ಹೆಚ್ಚು ವರ್ಷ ಬದುಕಿದ್ದ ಕಾಗೆ ಎಂಬ ದಾಖಲೆ ಇದೆ. ಹೀಗಾಗಿ ಈ ಪ್ರೊಫೆಸರ್ ಅವರು ಗುರುತು ಮಾಡಿದ್ದ ಕಾಗೆಗಳು 17 ವರ್ಷದ ಅವಧಿಯಲ್ಲಿ ಸತ್ತೂ ಹೋಗಿರಬಹುದು ಎಂಬ ವಾದವೂ ಇದೆ. ಆದರೆ ಸತ್ತೇ ಹೋಗಿದ್ದರೂ.. ಸಾಯುವವರೆಗೆ ದ್ವೇಷ ಸಾಧಿಸುತ್ತವೆ ಎಂದು ಹೇಳೋದಕ್ಕೆ ಅಭ್ಯಂತರ ಏನಿಲ್ಲ.



