ರಾಜ್ಯದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಫ್ ವಿರೋಧಿ ಹೋರಾಟ ವೈಫಲ್ಯದ ಹಾದಿಯಲ್ಲಿದೆ. ಏಕೆಂದರೆ ಯತ್ನಾಳ್ ಹೋಗಿರುವ ಬೀದರ್, ಯಾದಗಿರಿ, ಕಲಬುರಗಿಗಳಲ್ಲಿ ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯತ್ನಾಳ್ ಅವರಿಗೆ ಬಿಜೆಪಿ ಕಾರ್ಯಕರ್ತರ ಸಹಕಾರ ಸಿಕ್ಕಿಲ್ಲ. ಅದಕ್ಕೆ ಕಾರಣಗಳೂ ಇವೆ. ಯತ್ನಾಳ್ ಇಷ್ಟು ವರ್ಷಗಳಲ್ಲಿ ನಡೆಸುತ್ತಿರುವ ಮೊದಲ ಹೋರಾಟ ಇದು ಎನ್ನಬಹುದು. ಮಾಧ್ಯಮಗಳಲ್ಲಿ ಮಾತನಾಡುವ, ಸೋಷಿಯಲ್ ಮೀಡಿಯಾಗಳಲ್ಲಿ ಕೂಗಾಡುವ ಯತ್ನಾಳ್ ಅವರು ದೊಡ್ಡ ಹೋರಾಟವೊಂದನ್ನು ಸಂಘಟಿಸಿರುವ ಅನುಭವ ಇಲ್ಲ. ಹೀಗಾಗಿ ಸ್ಥಳೀಯ ಬಿಜೆಪಿ ಶಾಸಕರಿಗೆ ಒಂದು ಕರೆಯನ್ನೂ ಮಾಡದೆ ಹೋರಾಟಕ್ಕೆ ಹೋಗಿದ್ದಾರೆ. ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ, ಯಡಿಯೂರಪ್ಪ ವಿರುದ್ಧ ಮಾತನಾಡುತ್ತಲೇ ಹೋಗುತ್ತಿರುವ ಯತ್ನಾಳ್, ವಕ್ಫ್ ವಿಚಾರವನ್ನು ಸೈಡಿಗಿಟ್ಟು, ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡುತ್ತಿದ್ದಾರೆ. ಹೀಗಿರುವಾಗ ಯತ್ನಾಳ್ ಹೋರಾಟಕ್ಕೆ ನಾವೇಕೆ ಹೋಗಬೇಕು ಎಂಬ ಪ್ರಶ್ನೆಯೂ ಕಾರ್ಯಕರ್ತರದ್ದು.
ಇದೆಲ್ಲದರ ಮಧ್ಯೆ ಎರಡೂ ಬಣಗಳು ಬೀದಿಗೆ ಹೋಗಿ ಕೈ ಕೈ ಮಿಲಾಯಿಸಿಕೊಳ್ಳುವ ಬದಲು ವಿಮಾನ ಹತ್ತಿ ದೆಹಲಿಗೆ ಹೋಗಿ ವರಿಷ್ಠರ ಬಳಿ ಮಾತನಾಡಲಿ. ರಾಜ್ಯ ನಾಯಕರು ಸರಿ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಈಗ ಬಿಜೆಪಿಯಲ್ಲಿದೆ. ತಕ್ಷಣ ವರಿಷ್ಠರು ಮಧ್ಯೆ ಪ್ರವೇಶಿಸಿ ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಏಟು ಬೀಳಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಶಿಸ್ತಿನ ಪ್ರಯೋಗ ಆಗಲೇಬೇಕು. ಅಂದರೆ ಮಾತ್ರ ಪರಿಸ್ಥಿತಿ ಸರಿಯಾಗಲಿದೆ. ಒಂದಿಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಉಳಿದವರು ಸರಿದಾರಿಗೆ ಬರಲಿದ್ದಾರೆ. ವರಿಷ್ಠರು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿರುವ ಸದಾನಂದ ಗೌಡ ʻನನ್ನ ಅಧಿಕಾರಾವಧಿ ಕಾಲದಲ್ಲಿಯೂ ಯಡಿಯೂರಪ್ಪ ಮತ್ತು ಅನಂತ ಕುಮಾರ್ ಮಧ್ಯೆ ವೈಮನಸ್ಯಗಳಿದ್ದವು. ಆದರೆ ಅವರು ಹೀಗೆಲ್ಲ ಬೀದಿಗೆ ಬರುತ್ತಿಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದರು. ಪಕ್ಷದ ವಿಷಯದಲ್ಲಿ ಒಮ್ಮತ ಇರುತ್ತಿತ್ತು. ಸಂಬಂಧಪಟ್ಟವರ ಎದುರಿಗೆ ಮಾತನಾಡಿ ಬಗೆಹರಿಸಿಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇತ್ತ ಕೆಲವು ಕಾರ್ಯಕರ್ತರು ಯತ್ನಾಳ್ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಆದರೆ ಇದಕ್ಕೂ ಯತ್ನಾಳ್ ಅವರದ್ದು ʻಯಾರೋ ದುಡ್ಡು ಕೊಟ್ಟು ರಕ್ತದಲ್ಲಿ ಪತ್ರ ಬರೆಸುತ್ತಿದ್ದಾರೆʼʼಎಂದು ಲೇವಡಿ ಮಾಡಿದ್ದಾರೆ.
ಇದರ ಮಧ್ಯೆ ಹೈಕಮಾಂಡ್ ಕೂಡಾ ಮಧ್ಯಪ್ರವೇಶ ಮಾಡಿದೆ. ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಹೈಕಮಾಂಡ್ ಕರೆ ಮಾಡಿರುವುದನ್ನು ಯತ್ನಾಳ್ ಕೂಡಾ ಒಪ್ಪಿಕೊಂಡಿದ್ದಾರೆ. ದೆಹಲಿಯಿಂದ ಹೈಕಮಾಂಡ್ ನವರು ಬುಧವಾರ ನನಗೆ ಕರೆ ಮಾಡಿ, ತಕ್ಷಣ ಹೊರಟು ಬನ್ನಿ ಎಂದಿದ್ದರು. ಆದರೆ, ನಾನು ಒಬ್ಬನೇ ಬರೋದಿಲ್ಲ, ನನ್ನ ಟೀಮ್ ಸಮೇತ ಬರುತ್ತೇನೆ ಎಂದು ಉತ್ತರಿಸಿದ್ದೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದೆಹಲಿಗೆ ಕರೆಯಿರಿ, ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ. ನಾನಾಡಿದ ಒಂದು ಶಬ್ದವನ್ನೂ ವಾಪಸ್ ತೆಗೆದು ಕೊಳ್ಳುವುದಿಲ್ಲ ಎಂದು ತಿಳಿಸಿದ್ದೇನೆʼʼ ಎಂದಿದ್ದಾರೆ.
ಇದೇ ವೇಳೆ, ತಮ್ಮ ವಿರುದ್ಧ ಸದಾನಂದಗೌಡರು ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿದ ಯತ್ನಾಳರು, ಸದಾನಂದಗೌಡ ಬಾಯಿ ಮುಚ್ಚಿಕೊಂಡಿರಬೇಕು. ಇಲ್ಲದಿ ದ್ದರೆ, ಯಡಿಯೂರಪ್ಪ ಕುಟುಂಬದ ವಿರುದ್ದ ಅವರು ಮಾತನಾಡಿರುವುದನ್ನೆಲ್ಲ ಬಿಚ್ಚಿಡುತ್ತೇನೆ. ಯಡಿಯೂರಪ್ಪ ಕುಟುಂಬದ ವಿರುದ್ದ ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ. ಇಲ್ಲ ಅನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.



