ನಟ ನಿರ್ದೇಶಕ ಭುವನ್ ಪೊನ್ನಣ್ಣ ಅವರ ಜೊತೆ ಹರ್ಷಿಕಾ ಪೂಣಚ್ಚ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಈ ಮೂಲಕ ಕನ್ನಡದ ಮತ್ತೊಂದು ತಾರಾಜೋಡಿ ಹಸೆಮಣೆ ಏರುತ್ತಿದೆ.
ಆಗಸ್ಟ್ 24ಕ್ಕೆ ಮದುವೆ. ಕೊಡಗಿನವರಾದ ಹರ್ಷಿಕಾ ಪೂಣಚ್ಚ, ವಿರಾಜಪೇಟೆಯ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆಯೇ ಮದುವೆಯಾಗಲಿದ್ದಾರೆ. ಲಗ್ನಪತ್ರಿಕೆ ಕೂಡಾ ಕೊಡವ ಭಾಷೆಯಲ್ಲೇ ಮುದ್ರಣವಾಗಿರುವುದು ವಿಶೇಷ.
ಚಿತ್ರಗಳಲ್ಲಷ್ಟೇ ಅಲ್ಲ, ಸಮಾಜಸೇವೆಯಲ್ಲೂ ಒಟ್ಟೊಟ್ಟಿಗೇ ಇದ್ದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಸ್ಯಾಂಡಲ್`ವುಡ್ ಶುಭ ಹಾರೈಸಿದೆ. ಹಲವು ವರ್ಷಗಳಿಂದ ಇವರಿಬ್ಬರ ನಡುವೆ ಉತ್ತಮ ಸ್ನೇಹ- ಬಾಂಧವ್ಯವಿತ್ತು. ಇಬ್ಬರೂ ಒಟ್ಟಾಗಿ ಒಂದು ಫ್ಯಾಷನ್ ಕಂಪೆನಿ ನಡೆಸುತ್ತಿದ್ದಾರೆ. ದುಬೈ, ಮಲೇಷ್ಯಾ, ಥಾಯ್ಲೆಂಡ್`ಗಳಲ್ಲಿ ಈ ಕಂಪೆನಿಯ ಬ್ರಾಂಚ್`ಗಳಿವೆ. ಭುವನ್ ಅಂತಾರಾಷ್ಟ್ರೀಯ ಕೊರಿಯೋಗ್ರಾಫರ್ ಆದರೆ, ಹರ್ಷಿಕಾ ಪೂಣಚ್ಚ ಮಾಡೆಲ್ ಆಗಿದ್ದಾರೆ.
ನಾವಿಬ್ಬರೂ ಒಂದೇ. ಕೊಡಗಿನವರು. ನಮ್ಮದು ಪುಟ್ಟ ಕಮ್ಯುನಿಟಿ. ಇಡೀ ಜಗತ್ತಿನಲ್ಲಿ ನಮ್ಮ ಸಮುದಾಯದವರು ಸುಮಾರು ಒಂದು ಲಕ್ಷ ಇರಬಹುದೇನೋ.. ಎಲ್ಲರೂ ಹೇಗೋ ಒಂದು ರೀತಿಯಲ್ಲಿ ಸಂಬಂಧಿಕರಾಗಿರುತ್ತಾರೆ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಮತ್ತು ಕಸಿನ್ಸ್ ಎಂದಿದ್ದರು ಹರ್ಷಿಕಾ. ಹಾಗೆಯೇ ಮದುವೆ ಸುದ್ದಿ ನಿರಾಕರಿಸಿದ್ದರು. ಇದೀಗ ಭುವನ್ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಈ ಮೂಲಕ ಕನ್ನಡದಲ್ಲಿ ಬೆಳ್ಳಿತೆರೆ ಮೇಲಿನ ಮತ್ತೊಂದು ಜೋಡಿ ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದಾರೆ.



