ಕರ್ನಾಟಕದಲ್ಲಿ ಇತ್ತೀಚೆಗೆ ಬ್ಯಾನ್ ಆದ ಸಿನಿಮಾ ಯಾವುದು..? ನೆನಪಾಗುತ್ತಿಲ್ಲವೇ..? ಯಾಕೆಂದರೆ.. ಸಿನಿಮಾ ಒಂದನ್ನು ನಿಷೇಧಿಸುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿರಲೇ ಇಲ್ಲ. ದೇಶದಲ್ಲಿ ಬ್ಯಾನ್ ಆದ ಹಲವು ಸಿನಿಮಾಗಳಿವೆ. ಆದರೆ, ಕೇವಲ ಕರ್ನಾಟಕದಲ್ಲಿ ನಿಷೇಧ ಹೇರಲ್ಪಟ್ಟ ಸಿನಿಮಾ ಇರಲೇ ಇಲ್ಲ. ಅಂತಾದ್ದೊಂದು ಪರಿಸ್ಥಿತಿಯೂ ಬಂದಿರಲಿಲ್ಲ.
ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಮೊದಲಾದ ಚಿತ್ರಗಳನ್ನು ದೇಶದಲ್ಲಿ ಕೆಲವು ರಾಜ್ಯಗಳು ನಿಷೇಧಿಸಿದ್ದವು. ಆದರೆ, ಕರ್ನಾಟಕದಲ್ಲಿ ಆ ಸಿನಿಮಾಗಳು ಪ್ರದರ್ಶನ ಕಂಡಿದ್ದವು. ಇದೀಗ ಆ ಸಂಸ್ಕೃತಿಗೆ ಕರ್ನಾಟಕವೂ ಎಂಟ್ರಿ ಕೊಟ್ಟಿದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ನಿಷೇಧಿಸಲ್ಪಟ್ಟ ಇನ್ನೊಂದು ಸಿನಿಮಾ ಯಾವುದು ಎಂದು ಇತಿಹಾಸ ಬಲ್ಲವರನ್ನೇ ಹುಡುಕಬೇಕು. ತಕ್ಷಣಕ್ಕೆ ನೆನಪಾಗುವುದಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಸಿನಿಮಾವನ್ನು ನಿಷೇಧಿಸಿದೆ ಕರ್ನಾಟಕ ರಾಜ್ಯ ಸರ್ಕಾರ. ಇದೀಗ ಹಮಾರೆ ಬಾರೆ ಎಂಬ ಹಿಂದಿ ಚಿತ್ರವನ್ನು ನಿಷೇಧಿಸಿದೆ ಕರ್ನಾಟಕ ರಾಜ್ಯ ಸರ್ಕಾರ.
ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಸಿನಿಮಾದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಇದೆ. ಸಿನಿಮಾದ ಬಿಡುಗಡೆಗೆ ಈಗಾಗಲೇ ಬಾಂಬೆ ಹೈಕೋರ್ಟ್ ತಡೆ ನೀಡಿದೆ ಅಷ್ಟರಲ್ಲಾಗಲೆ ಕರ್ನಾಟಕ ಸರ್ಕಾರ ಸಿನಿಮಾದ ಬಿಡುಗಡೆ ಮತ್ತು ಸ್ಕ್ರೀಮ್ ಮೇಲೆ ನಿಷೇಧ ಹೇರಿದೆ. ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ 1964, ಸೆಕ್ಷನ್ 15 (1) ಮತ್ತು 15(5) ರ ಅನ್ವಯ ಈ ಸಿನಿಮಾದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣ ನೀಡಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಅಲ್ಲದೆ ಕೆಲವು ಮುಸ್ಲಿಂ ಸಂಘಟನೆಗಳು ಈ ಚಿತ್ರದ ಬಗ್ಗೆ ಅಪಸ್ವರ ಎತ್ತಿವೆ.
ಚಿತ್ರದ ಕಥೆಯಲ್ಲಿ ಏನಿದೆ..?
ಮಗಳೊಬ್ಬಳು ತಾಯಿಯ ಪರವಾಗಿ ಕೋರ್ಟಿಗೆ ಹೋಗುತ್ತಾಳೆ. ಇಳಿ ವಯಸ್ಸಿನಲ್ಲಿ ತನ್ನ ತಾಯಿ ಗರ್ಭಿಣಿಯಾಗುವುದು ಸಾಧ್ಯವಿಲ್ಲ ಎನ್ನುವುದು ಕಥೆ. ವಯಸ್ಸಾಗಿರುವ ತಾಯಿಯನ್ನು ಮತ್ತೆ ಗರ್ಭಿಣಿಯಾಗದಂತೆ ತಡೆಯುವುದು ಚಿತ್ರದ ಕಥೆ. ಕೆಲ ವಾರಗಳ ಹಿಂದೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿತ್ತು. ಟ್ರೇಲರ್ ನೋಡಿದ ಅಜರ್ ಎಂಬುವರು ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಜೂನ್ 14 ರವರೆಗೆ ಬಿಡುಗಡೆಗೆ ನಿಷೇಧಿಸಿದೆ. ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ. ಸಿನಿಮಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ನೆಗೆಟಿವ್ ಸಂಭಾಷಣೆಗಳಿವೆ, ಇಸ್ಲಾಂ ಧರ್ಮವನ್ನು ಕೆಟ್ಟ ರೀತಿಯಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರರ ಆರೋಪ. ಸಿಬಿಎಫ್ಸಿ ಈಗಾಗಲೇ ಕೆಲವು ಸಂಭಾಷಣೆಗಳಿಗೆ ಕಟ್ಗಳನ್ನು ಸೂಚಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು, ಬಿಡುಗಡೆಗೆ ತಕಾರರು ಸಲ್ಲಿಸಿಲ್ಲ. ನ್ಯಾಯಾಲಯದಲ್ಲಿಯೂ ಸಹ ಈ ಬಗ್ಗೆ ಸಿಬಿಎಫ್ಸಿ ಹೇಳಿಕೆ ದಾಖಲಿಸಿದೆ.
ದಯವಿಟ್ಟು ಸಿನಿಮಾವನ್ನು ಒಮ್ಮೆ ನೋಡಿ, ಆನಂತರ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಇದು ಎಲ್ಲರೂ ನೋಡಬೇಕಾದ ಸಿನಿಮಾ’ ಎಂದಿರುವ ನಟಿ ಅನ್ನು ಕಪೂರ್ ಅವರು ಸಿನಿಮಾದಲ್ಲಿ ಯಾವುದೇ ಧರ್ಮವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿಲ್ಲ ಎಂದಿದ್ದಾರೆ. ಅನ್ನು ಕಪೂರ್ ಅವರಿಗೆ ಸಿನಿಮಾ ಮಾಡಿದ ಮೇಲೆ ದಿನನಿತ್ಯ ಕೊಲೆ ಬೆದರಿಕೆ ಬರುತ್ತಿವೆಯಂತೆ.
ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಬರುವ ರೀತಿ ಮಾಡಿರುವ ಚಿತ್ರ ಅದು. ಈ ಸಿನಿಮಾ ಬಿಡುಗಡೆ ಆಗಬಾರದು ಅಂತ ಸಾಕಷ್ಟು ಪ್ರತಿಭಟನೆ ನಡೆದಿತ್ತು. ಹಲವಾರು ಸಂಘಟನೆಗಳ ಚಿತ್ರ ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಸಂಘಟನೆಗಳ ಮನವಿ ಮೇರಿಗೆ ಸರ್ಕಾರ ನಿಷೇಧಿಸಿದೆ. ಇದನ್ನ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ಧಾರೆ ಕಾಂಗ್ರೆಸ್ ಮುಖಂಡ ತನ್ವೀರ್ ಸೇಠ್.
ಅಂದಹಾಗೆ ಇಸ್ಲಾಂ ಧರ್ಮದ ಕುರಿತಾಗಿ ಪ್ರಶ್ನೆ ಇರುವ ಒಂದೇ ಒಂದು ಸಿನಿಮಾ ಕೂಡಾ ಇದುವರೆಗೆ ಪ್ರದರ್ಶನ ಕಂಡಿಲ್ಲ. ಸಿನಿಮಾಗಳು ಬಂದಿವೆಯಾದರೂ.. ಒಂದು ಸಿನಿಮಾ ಪ್ರದರ್ಶನಕ್ಕೂ ಅವಕಾಶ ಸಿಕ್ಕಿಲ್ಲ. ಇದನ್ನು ಮೀರಿ ಹಮಾರೆ ಬಾರ ಚಿತ್ರ ರಿಲೀಸ್ ಆದರೆ, ಅದೊಂದು ಇತಿಹಾಸವೇ ಸರಿ.



