ಒಬ್ಬರಲ್ಲ. ಇಬ್ಬರಲ್ಲ.. ಪಡಿತರ ಖಾತೆ ಸಚಿವ ಮುನಿಯಪ್ಪ ಸೇರಿದಂತೆ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಮೊದಲಾದವರೆಲ್ಲ ಗ್ಯಾರಂಟಿ ಪರಿಷ್ಕರಣೆ ಮಾತನಾಡುತ್ತಿದ್ದರೆ, ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್, ಜಮೀರ್ ಅಹ್ಮದ್ ಮೊದಲಾದವರೆಲ್ಲ ನೋ ನೋ ಹಂಗೇನಿಲ್ಲ ಎಂದೇ ಹೇಳುತ್ತಿದ್ದಾರೆ. ರಾಜು ಕಾಗೆ, ಷಡಕ್ಷರಿ, ಅಭಯ್ ಪಾಟೀಲ್, ಬಾಲಕೃಷ್ಣ, ಚೆಲುವರಾಯ ಸ್ವಾಮಿ, ಬಸವರಾಜ ರಾಯರೆಡ್ಡಿಯಂತಹವರೆಲ್ಲ ಒಮ್ಮೆ ಅತ್ತಲೂ.. ಒಮ್ಮೆ ಇತ್ತಲೂ ಸರಿ ಹೋಗುವ ಹೇಳಿಕೆ ಕೊಡ್ತಿದ್ದಾರೆ. ಆದರೆ. ಗ್ಯಾರಂಟಿಗಳ ಭವಿಷ್ಯ ಏನಾಗಲಿದೆ..?
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು ನಗರ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ʻʻಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿಯುತ್ತಿರುವವರಿಗೆ ರಾಜ್ಯದಲ್ಲಿ ಆರ್ಥಿಕ ಪ್ರಗತಿ ಪ್ರಗತಿ ಸಾಧಿಸಿ ತೋರಿಸುವ ಮೂಲಕ ನಾವು ಉತ್ತರ ನೀಡಲಿದ್ದೇವೆ. ಎಲ್ಲ ಗ್ಯಾರಂಟಿಗಳೂ ಮುಂದುವರೆಯುತ್ತವೆʼʼ ಎಂದು ಎರಡೆಡರಡು ಬಾರಿ ಉಲ್ಲೇಖ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಶಕ್ತಿ ಯೋಜನೆ ಅಡಿಯಲ್ಲಿ 270 ಕೋಟಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದಾರೆ. ಮಹಿಳೆಯರು 6541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ, ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವ ವಿವಿಧ ಯೋಜನೆಗಳಡಿ 13,027 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಲೆಕ್ಕವನ್ನೂ ಕೊಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ”ಯಾವ ಕಾರಣಕ್ಕೂ ಗ್ಯಾರಂಟಿಗಳಿಗೆ ಕತ್ತರಿ ಹಾಕುವ ಪ್ರಶ್ನೆಯೇ ಇಲ್ಲ. 224 ವಿಧಾನಸಭೆ ಕ್ಷೇತ್ರಗಳಲ್ಲೂ ಗ್ಯಾರಂಟಿ ಕಚೇರಿಗಳನ್ನು ತೆರೆಯಲಾಗುವುದು. ಬಿಜೆಪಿಯವರು ನೂರು ಜನ್ಮವೆತ್ತಿ ಬಂದರೂ ಗ್ಯಾರಂಟಿ ನಿಲ್ಲಿಸಲಾಗದು,” ಎಂದು ಸ್ಪಷ್ಟಪಡಿಸಿದ್ದಾರೆ.
”ಗ್ಯಾರಂಟಿ ಯೋಜನೆಗಳಿಂದ ಶಾಸಕರಿಗೆ ನೀಡುವ ಅನುದಾನ ಕಡಿತವಾಗಿದೆ ಎಂಬುದೆಲ್ಲಾಸುಳ್ಳು. ಕಾಂಗ್ರೆಸ್ ಸರಕಾರ ಜನಪರವಾದ ದೊಡ್ಡ ಯೋಜನೆ ಜಾರಿ ಮಾಡಿದೆ ಎಂಬ ಕಾರಣಕ್ಕೆ ಪ್ರತಿಪಕ್ಷಗಳು ಅಸೂಯೆ ಪಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲಎಂದು ಯಾವ ಸಚಿವರೂ ಹೇಳಿಲ್ಲ” ಎನ್ನುವುದು ಡಿಕೆಶಿ ಮಾತು.
ಆದರೆ.. ಇಷ್ಟೆಲ್ಲ ಆದ ನಂತರವೂ ಸತೀಶ್ ಜಾರಕಿಹೊಳಿ, ಮುನಿಯಪ್ಪ ಸೇರಿದಂತೆ ಕೆಲವು ಹಿರಿಯ ಸಚಿವರೇ ʻಗ್ಯಾರಂಟಿ ನಿಲ್ಲಿಸುವಂತೆ ಹೇಳಿಲ್ಲ. ಆದರೆ ಪರಿಷ್ಕರಣೆ ಮಾಡಬೇಕು. ಫಿಲ್ಟರ್ ಮಾಡಬೇಕು. ಈ ರೀತಿ ಫಿಲ್ಟರ್ ಆದರೆ ೧೦ ಸಾವಿರ ಕೋಟಿ ಉಳಿಸಬಹುದು. ಗ್ಯಾರಂಟಿ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಬೇಡ. ಇದರಿಂದ ಅಭಿವೃದ್ದಿಗೆ ಅನುದಾನ ಕೊರತೆಯಾಗುತ್ತಿದೆ, ಶ್ರೀಮಂತರು ಇದರ ಲಾಭವನ್ನು ಪಡೆಯುತ್ತಿದ್ದಾರೆʼ ಎನ್ನುತ್ತಿದ್ದಾರೆ.
ಸದ್ಯಕ್ಕೆ ಸಿದ್ಧರಾಮಯ್ಯ ವಾರೆಂಟಿ ಇರುವುದರಿಂದ ಸದ್ಯದ ಮಟ್ಟಿಗೆ ಗ್ಯಾರಂಟಿಗೆ ನೋ ಪ್ರಾಬ್ಲಂ.



