ರಾಜ್ಯ ಸರ್ಕಾರ ಗ್ಯಾರಂಟಿ ಭಾಗ್ಯಗಳನ್ನು ಘೋಷಣೆ ಮಾಡಿಯೇ ಅಧಿಕಾರಕ್ಕೆ ಬಂತು. ಅದು ಮತದಾರರಲ್ಲಿ ಉತ್ಸಾಹ ತುಂಬಿ ಕಾಂಗ್ರೆಸ್ಸಿಗೆ ಅವರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸೀಟುಗಳನ್ನು ಕೊಟ್ಟರು. ಅದಕ್ಕೆ ತಕ್ಕಂತೆ ಸರ್ಕಾರವೂ ಶಕ್ತಿ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ), ಗೃಹಲಕ್ಷ್ಮಿ (ಗೃಹಿಣಿಯರಿಗೆ ಮಾಸಿಕ ೨ ಸಾವಿರ ರೂ.), ಗೃಹಜ್ಯೋತಿ (೨೦೦ ಯುನಿಟ್ʻವರೆಗೆ ವಿದ್ಯುತ್ ಬಳಕೆ ಉಚಿತ), ಅನ್ನಭಾಗ್ಯ (೧೦ ಕೆಜಿ ಅಕ್ಕಿ. ಕೇಂದ್ರದ ೫ ಕೆಜಿ ಅಕ್ಕಿ ಜೊತೆಗೆ ರಾಜ್ಯದಿಂದ ೫ ಕೆಜಿ ಉಚಿತ)ಗಳನ್ನು ಜಾರಿಗೆ ತಂದೂ ಆಗಿದೆ. ಅಕ್ಕಿಯ ಲಭ್ಯತೆ ಇಲ್ಲದ ಕಾರಣ ಅಕ್ಕಿಯ ಬದಲು ಹಣ ಕೊಡುತ್ತಿದೆ. ವಾಸ್ತವದಲ್ಲಿ ಜಾರಿಗೆ ಬಾರದಿರುವ ಏಕೈಕ ಗ್ಯಾರಂಟಿ ಯೋಜನೆಯೆಂದರೆ ನಿರುದ್ಯೋಗಿಗಳಿಗೆ ಹಣ ನೀಡುವ ನಿಧಿ ಯೋಜನೆ ಮಾತ್ರ. ಈ ಗ್ಯಾರಂಟಿಗಳನ್ನು ಕೆಲವರು ಟೀಕಿಸುತ್ತಾರೆ ಕೆಲವರು ಸಮರ್ಥನೆ ಮಾಡಿಕೊಳ್ಳುತ್ತಾರೆ.. ಆದರೆ ಟೀಕಿಸುವವರೆಲ್ಲ ಬಡವರ ವಿರೋಧಿಗಳು ಎಂಬರ್ಥದಲ್ಲಿಯೇ ಬಿಂಬಿಸಲಾಗಿತ್ತಿದೆ. ಈಗ ಇನ್ಫೋಸಿಸ್ ನಾರಾಯಣ ಮೂರ್ತಿಗಳು ಅಂತಹ ಟೀಕೆಗೆ ಗುರಿಯಾಗಿದ್ದಾರೆ.
ಇಷ್ಟಕ್ಕೂ ನಾರಾಯಣ ಮೂರ್ತಿ ಹೇಳಿದ್ದಾದರೂ ಏನು?
ಸರ್ಕಾರಗಳು ನೀಡುವ ಉಚಿತ ಯೋಜನೆಗಳಿಗೆ ನನ್ನ ವಿರೋಧವೇನಿಲ್ಲ. ನಾನು ಕೂಡಾ ಬಡತನದಿಂದಲೇ ಬಂದವನು. ಆದರೆ ಯಾವುದನ್ನೂ ಫ್ರೀಯಾಗಿ ಕೊಡಬಾರದು. ಕೊಟ್ಟರೆ ಅದರಿಂದ ಏನಾದರೂ ಲಾಭವನ್ನ ಸಮಾಜಕ್ಕೆ ವಾಪಸ್ ಕೊಡುವಂತೆ ಷರತ್ತು ಹಾಕಬೇಕು. ಉಚಿತ ಯೋಜನೆಗಳು, ಸಬ್ಸಿಡಿಗಳಿಗೆ ನನ್ನ ವಿರೋಧವಿಲ್ಲ. ಆದರೆ ಉಚಿತ ಪಡೆದವರು ಸಮಾಜಕ್ಕೆ ಕೊಡುಗೆ ಕೊಡವಂತಿರಬೇಕು, ಆಗ ಉಚಿತ ಉಡುಗೊರೆಗಳಿಗೆ ಅರ್ಥ ಸಿಗುತ್ತದೆ ಎಂದಿರುವ ನಾರಾಯಣ ಮೂರ್ತಿ ಅದಕ್ಕೆ ಒಂದು ಉದಾಹರಣೆಯನ್ನೂ ಕೊಟ್ಟಿದ್ಧಾರೆ.
ಸರ್ಕಾರ ಉಚಿತ ವಿದ್ಯುತ್ ಕೊಡ್ತಾ ಇದೆ. ಸರಿ. ಆದರೆ ಮಕ್ಕಳನ್ನ ಶಾಲೆಗಳಿಗೆ ಕಳಿಸಿ ಅನ್ನೋ ಷರತ್ತು ಹಾಕಬೇಕು. ಶಾಲೆಗಳಲ್ಲಿ 20% ರಷ್ಟು ಹಾಜರಾತಿ ಹೆಚ್ಚಾಗಬೇಕು ಅಂತ ಹೇಳಬೇಕು. ಶಾಲೆಗೆ ಬಂದ ಮಕ್ಕಳು ಏನಾದರೂ ಹೊಸದನ್ನ ಸಾಧಿಸ್ತಾರೆ. ಕಲಿತಾರೆ, ಜೀವನಮಟ್ಟವೂ ಸುಧಾರಣೆ ಆಗುತ್ತೆ. ಸಮಾಜಕ್ಕೂ ಉಚಿತಗಳು ಪ್ರಯೋಜನಕಾರಿ. ಯಾರಿಗಾದರೂ ಉಚಿತ ಯೋಜನೆ ಕೊಡಲಿ ಸಮಸ್ಯೆ ಇಲ್ಲ. ಉಚಿತ ಯೋಜನೆ ಪಡೆದವರು ಸಮಾಜಕ್ಕೆ ಕೊಡುಗೆ ಕೊಡಬೇಕು. ಸಮಾಜಕ್ಕೆ ಕೊಡದಿದ್ರೂ ಪರವಾಗಿಲ್ಲ. ಕನಿಷ್ಠ ಅವರ ಮನೆಯ ಮಕ್ಕಳಿಗಾದ್ರೂ ಉತ್ತಮ ಶಿಕ್ಷಣ ಕೊಡಿಸಲಿ.
ಇದು ನಾರಾಯಣ ಮೂರ್ತಿಯವರು ಕೊಟ್ಟಿರುವ ಸಲಹೆ. ತಪ್ಪೇನಿದೆ. ಶಾಲೆಗೆ ಹೋಗುತ್ತಿರುವ ಮಕ್ಕಳಿದ್ದವರು, ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸಬೇಕು ಎನ್ನುವ ಷರತ್ತನ್ನು ಹಾಕಿದರೆ, ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ತಪ್ಪಿಸಿದಂತಾಗುವುದಿಲ್ಲವೇ.. ಉದಾಹರಣೆ ಕೊಟ್ಟ ಮೇಲೂ ಟೀಕಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
ನಾರಾಯಣ ಮೂರ್ತಿಯವರ ಇತಿಹಾಸವೂ ಗೊತ್ತಿರಲಿ :
ಟೀಕಿಸುತ್ತಿರುವವರೆಲ್ಲ ನಾರಾಯಣ ಮೂರ್ತಿಗಳು ಸರ್ಕಾರದಿಂದ ಉಚಿತವಾಗಿ ಭೂಮಿ ಪಡೆದಿದ್ದಾರೆ ಎಂದಷ್ಟೇ ಟೀಕಿಸುತ್ತಿದ್ಧಾರೆ. ಉದ್ಯಮಗಳಿಗೆ ಸರ್ಕಾರ ಭೂಮಿ ಕೊಡುವುದು ಹೊಸದೇನಲ್ಲ. ಹಾಗೆ ಭೂಮಿ ಪಡೆದ ಎಷ್ಟೋ ಜನ ಸರ್ಕಾರಕ್ಕೆ ನಾಮ ಹಾಕುವುದೂ ಹೊಸದಲ್ಲ. ಆದರೆ ನಾರಾಯಣ ಮೂರ್ತಿಗಳು ಅದಕ್ಕೆ ತಕ್ಕಂತೆ ಪ್ರತಿಫಲವನ್ನೂ ಕೊಟ್ಟಿದ್ಧಾರೆ. ರಾಜ್ಯದ ಲಕ್ಷಾಂತರ ಮಂದಿಗೆ ಉದ್ಯೋಗ ಕೊಟ್ಟಿದ್ಧಾರೆ. ಬೆಂಗಳೂರು ಐಟಿ ಸಿಟಿಯಾಗುವುದಕ್ಕೆ ಅವರ ಕೊಡುಗೆಯೂ ಇದೆ. ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿರುವ ನಾರಾಯಣ ಮೂರ್ತಿ ಮಾಡುತ್ತಿರುವ ಸೇವೆಯೂ ಅಪಾರ. ಅಷ್ಟೇ ಏಕೆ, ತನ್ನ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ (ಅಟೆಂಡರುಗಳು, ಆಫೀಸ್ ಬಾಯ್ಸ್ ಸೇರಿದಂತೆ ) ಷೇರು ಹಂಚಿಕೆ ಮಾಡಿದ ದೇಶದ ಮೊದಲ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ. ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು ಆ ಷೇರುಗಳಿಂದಲೇ ಶ್ರೀಮಂತರಾಗಿದ್ದಾರೆ. ಅಂತಹ ಉದ್ಯಮಿಯೊಬ್ಬರು ಏನನ್ನಾದರೂ ಹೇಳುತ್ತಿದ್ದಾರೆ ಎಂದರೆ ಏಕ್ʻಧಂ ಟೀಕೆ ಮಾಡುವುದಲ್ಲ, ಯೋಚಿಸಿ ಮಾತನಾಡಬೇಕು. ನಾರಾಯಣ ಮೂರ್ತಿಗಳು ಟೀಕೆಗಳಿಗೆ ಆತೀತರೇನಲ್ಲ. ಆದರೆ ಟೀಕೆಗಳಿಗೆ ಅರ್ಥವಿರಲಿ.



