ಯಾರ್ರೀ.. ಅದು.. ಸಿದ್ದರಾಮಯ್ಯ ಸಿಎಂ ಪೋಸ್ಟಿಗೆ ರಾಜೀನಾಮೆ ಕೊಡ್ಬೇಕು ಅನ್ನೋವ್ರು. ಹಾಗಾದ್ರೆ ಯಾರೊಬ್ಬರೂ ಅಧಿಕಾರದಲ್ಲಿ ಇರೋಕ್ ಆಗಲ್ಲ. ಎಫ್‌ಐಆರ್ ಆದವ್ರೆಲ್ಲ ರಾಜೀನಾಮೆ ಕೊಡ್ಬೇಕು ಅಂದ್ರೆ, ಕುಮಾರಸ್ವಾಮಿನೂ ಕೊಡ್ಬೇಕು ಎಂಬ ಜಿಟಿ ದೇವೇಗೌಡರ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಜಿಟಿ ದೇವೇಗೌಡ, ಜೆಡಿಎಸ್‌ನಲ್ಲಿ ಇಷ್ಟಪಟ್ಟು ಇದ್ದವರೇನಲ್ಲ. ಹೆಚ್ ಡಿ ದೇವೇಗೌಡರ ಒತ್ತಾಯದ ಮೇಲೆ ಆ ಪಕ್ಷದಲ್ಲಿ ಉಳಿದಿದ್ದಾರೆ. ಅದನ್ನು ಇಂಡೈರೆಕ್ಟ್ ಆಗಿ ಜಿಟಿಡಿ ಹೇಳ್ತಾನೇ ಇರ್ತಾರೆ. ಇನ್ನು ಸಿದ್ದರಾಮಯ್ಯ ಮತ್ತು ಜಿಟಿಡಿ ನಡುವಿನ ಸ್ನೇಹಸಮರವೂ ಗೊತ್ತಿರುವಂಥದ್ದೇ. ಈ ಎಲ್ಲ ಹೇಳಿಕೆ ಕೊಟ್ಟಾಗ ವೇದಿಕೆಯಲ್ಲಿ ಸಿದ್ದರಾಮಯ್ಯನವರೂ ಇದ್ದರು ಎನ್ನವುದೇ ವಿಶೇಷ.
ಇದಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಅದರಲ್ಲೂ ಸಿದ್ದರಾಮಯ್ಯ ಬಣದ ನಾಯಕರಲ್ಲಿ ಹೊಸ ಉತ್ಸಾಹ ಮೂಡಿದೆ. ಇದ್ದಕ್ಕಿದ್ದಂತೆ ಜೋಶ್ ಕಾಣಿಸಿಕೊಂಡಿದೆ. ಅವರ ಮಾತಿನಲ್ಲಿ ಕೇವಲ ಸಮರ್ಥನೆ ಅಷ್ಟೇ ಅಲ್ಲ, ಬೇರೆಯದೇ ಕಾನ್ಫಿಡೆನ್ಸ್ ಎದ್ದು ಕಾಣ್ತಾ ಇದೆ. ಕುಮಾರಸ್ವಾಮಿ ಅವರಿಗೆ ಹೊಸ ಟೆನ್ಷನ್. ಅವರು ತಮ್ಮದೇ ಪಕ್ಷದ ಪ್ರಮುಖ ನಾಯಕ ಜಿಟಿ ದೇವೇಗೌಡರನ್ನು ನೇರಾನೇರ ಟೀಕಿಸುವುದಕ್ಕೂ ಆಗದೆ, ಅತ್ತ ಸಮರ್ಥನೆ ಮಾಡಿಕೊಳ್ಳೋದಕ್ಕೂ ಆಗದೆ ಒದ್ದಾಡುವಂತಾಗಿದೆ.
ಅಕ್ಟೋಬರ್ 15ಕ್ಕೆ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಬರ್ತಿದ್ದಾರಂತೆ. ಕೆಸಿ ವೇಣುಗೋಪಾಲ್ ಬೆಂಗಳೂರಿಗೆ ಬಂದು ಸಭೆ ನಡೆಸ್ತಾರೆ. 15 & 16ರಂದು ಪಕ್ಷದ ನಾಯಕರ ಜೊತೆ ಮೀಟಿಂಗ್ ಇರುತ್ತದೆ. ಸಿದ್ದರಾಮಯ್ಯ ಬೆನ್ನಿಗೆ ನಿಂತಿರೋ ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ಕೆಳಗಿಳಿದರೆ ಏನಾಗಲಿದೆ ಅನ್ನೋ ಅರಿವೂ ಇದೆ. ಹೀಗಾಗಿಯೇ ಬಿಜೆಪಿ ನಾಯಕರ ಪ್ರಶ್ನೆಗಳಿಗೆ ಉತ್ತರವನ್ನೂ ಕೊಡಬೇಡಿ ಎಂದು ಹೇಳುವುದಕ್ಕೆಂದೇ ವೇಣುಗೋಪಾಲ್ ಬರುತ್ತಿದ್ದಾರಂತೆ.
ಅದಕ್ಕೂ ಮೊದಲೇ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಹಲವಾರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೆಲ್ಲ ಸಭೆ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಬಲವಾಗಿ ನಿಲ್ಲಲು ತೀರ್ಮಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಷಡ್ಯಂತ್ರಕ್ಕೆ ಮುಖ್ಯ ಮಂತ್ರಿ ಅವರು ಬಲಿಯಾಗಬಾರದು. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದ ಎಲ್ಲ ಶಾಸಕರೂ ಗಟ್ಟಿಯಾಗಿ ಅವರ ಬೆನ್ನಿಗೆ ನಿಲ್ಲಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ.
ಹೈಕಮಾಂಡ್, ಪಕ್ಷದ ಶಾಸಕರು, ನಾಯಕರ ಬೆಂಬಲ ಸಿದ್ದರಾಮಯ್ಯನವರಿಗೆ ಇದೆ. ಹಾಗೂ ಪ್ರತಿಪಕ್ಷ ಜೆಡಿಎಸ್, ಬಿಜೆಪಿ (ಸೋಮಶೇಖರ್, ಶಿವರಾಂ ಹೆಬ್ಬಾರ್) ನಲ್ಲಿಯೂ ಬೆಂಬಲ ಇದೆ ಎನ್ನುವುದು ಗೊತ್ತಾಯಿತೋ.. ಆಗ ಸಿದ್ದು ವಿರೋಧಿ ಬಣವೂ ತಣ್ಣಗಾಗಿದೆ.
ಸಿದ್ದರಾಮಯ್ಯನವರು ಸಿಎಂ ಆಗಿ 5 ವರ್ಷ ಪೂರೈಸುತ್ತಾರೆ ಎಂದು ಡಿಕೆ ಸುರೇಶ್ ಘೋಷಿಸಿದ್ದಾರೆ. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸ್ನೇಹಿಮಯಿ ಕೃಷ್ಣ ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ತನಿಖೆ ಮುಗಿಯುವವರೆಗೆ ಸುಮ್ಮನಿರಲಿ. ಡಿಎಸ್ ಶಾಸಕ ಜಿಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದಾರೆ. ಎಲ್ಲ ಪಕ್ಷದವರೂ ಮುಡಾ ಉಪಯೋಗ ಪಡೆದಿದ್ದಾರೆಂದು ಅವರೇ ಹೇಳಿದ್ದಾರೆ. ಇದರಿಂದ ಜೆಡಿಎಸ್‌ನಲ್ಲೂ ಬಿರುಕಿದೆ ಅಂತಾ ಗೊತ್ತಾಗಿದೆ. ಅವರು ಜೆಡಿಎಸ್ ಪಕ್ಷದ ಎಲ್ಲ ನಿಯಮಗಳನ್ನು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅದಕ್ಕೆ ಆ ರೀತಿ ಹೇಳಿದ್ದಾರೆ. 5 ವರ್ಷ ಅವಧಿಗೂ ಸಿದ್ದರಾಮಯ್ಯನವರೇ ಸಿಎಂ ಎಂದು ಹೇಳಿದ್ದಾರೆ ಡಿಕೆ ಸುರೇಶ್. ಅಲ್ಲಿಗೆ ಸಿದ್ದರಾಮಯ್ಯನವರ ಅಧಿಕಾರದ ಮೇಲೆ ಕವಿದಿದ್ದ ಕಾರ್ಮೋಡವೊಂದು ದೂರವಾದಂತಾಗಿದೆ. ಆದರೆ ಮೋಡ ಯಾವಾಗ ಬೇಕಾದರೂ ಒಟ್ಟುಗೂಡಬಹುದು. ಮಳೆಯೂ ಸುರಿಯಬಹುದು. ಏಕೆಂದರೆ ಇದು ರಾಜಕೀಯ.



