ಜೆಡಿಎಸ್ (JDS) ಎಂದರೆ ಫ್ಯಾಮಿಲಿ ಪಾರ್ಟಿ (Family Politics) ಎನ್ನುವ ಆರೋಪಕ್ಕೆ ಉತ್ತರ ಕೊಡಲು ಹೊರಟಂತಿದೆ ಜೆಡಿಎಸ್ (JDS) ಕೋರ್ ಕಮಿಟಿ . ಆ ಕೋರ್ ಕಮಿಟಿಯಲ್ಲಿ ದೇವೇಗೌಡರೂ (HD Devegowda) ಇಲ್ಲ. ಕುಮಾರಸ್ವಾಮಿಯೂ (HD Kumaraswamy) ಇಲ್ಲ. ರೇವಣ್ಣ (HD Revanna) ಅವರೂ ಇಲ್ಲ. ಸೂರಜ್ (Suraj Revanna) ಪ್ರಜ್ವಲ್ (Prajwal Revanna) ಕೂಡಾ ಇಲ್ಲ. ಚೇಂಜ್ ಶುರುವಾಗಿದೆ. ಲೋಕಸಭಾ ಚುನಾವಣೆಗೆ (Parliament Election) ಜೆಡಿಎಸ್ ಸಿದ್ಧತೆ ನಡೆಸಿದ್ದು, ಮಾಜಿ ಪ್ರಧಾನಿ ಎಚ್ಡಿ ದೇವೆಗೌಡ ಅವರ ನಿರ್ದೇಶನದ ಮೇರೆಗೆ ಜೆಡಿಎಸ್ ಪಕ್ಷದ ನೂತನ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದು, ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಜಿಟಿ ದೇವೇಗೌಡರ (GT Devegowda) ಅಧ್ಯಕ್ಷತೆಯಲ್ಲಿ ಜೆಡಿಎಸ್ ಪಕ್ಷದ ನೂತನ ಕಮಿಟಿ ರಚನೆ ಮಾಡಲಾಗಿದೆ. ಕೋರ್ ಕಮಿಟಿ ಅಧ್ಯಕ್ಷರಾಗಿ ಮಾಜಿ ಸಚಿವ ಜಿ.ಟಿ ದೇವೇಗೌಡ ಹಾಗೂ ಸಂಚಾಲಕರಾಗಿ ಮಾಜಿ ಶಾಸಕ ವೈ.ಎಸ್ ವಿ ದತ್ತ ಅವರನ್ನು ನೇಮಕ ಮಾಡಲಾಗಿದೆ.
ಆಗಸ್ಟ್ 7 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ನೇತೃತ್ವದಲ್ಲಿ ನಡೆದ ಪಕ್ಷದ ಮುಖಂಡರು ಸಭೆಯಲ್ಲಿ ಕೋರ್ ಕಮಿಟಿಯ ಹೊಸ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಲಾಗಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಿಳಿಸಿದ್ದಾರೆ.
ಕೋರ್ ಕಮಿಟಿಯಲ್ಲಿ ಮಾಜಿ ಸಚಿವರಾದ ಸಾರಾ ಮಹೇಶ್ (Sa Ra Mahesh), ಬಂಡೆಪ್ಪ ಕಾಶೆಂಪುರ್ (Bandeppa Kashempur) , ಎಚ್ಕೆ ಕುಮಾರಸ್ವಾಮಿ(HK Kumaraswamy), ವೆಂಕಟರಾವ್ ನಾಡಗೌಡ, (Venkatarao Nadagowda) ಸಿಎಸ್ ಪುಟ್ಟರಾಜು (CS Puttaraju), ಆಲ್ಕೋಡ್ ಹನುಮಂತಪ್ಪ(Alkod Hanumanthappa) , ಶಾಸಕರಾದ ನೇಮಿರಾಜ ನಾಯಕ್, ರಾಜೂಗೌಡ, ಬಿಎಂ ಫಾರೂಕ್(BM Farooque) , ಮಾಜಿ ಶಾಸಕರಾದ ಸುರೇಶ್ ಗೌಡ(Suresh Gowda) , ಕೆ.ಎಂ.ತಿಮ್ಮರಾಯಪ್ಪ ವೀರಭದ್ರಪ್ಪ ಹಾಲರವಿ, ಎಂ.ಕೃಷ್ಣಾರೆಡ್ಡಿ, ದೊಡ್ಡಪ್ಪ ಗೌಡ, ಕೆಬಿ ಪ್ರಸನ್ನ ಕುಮಾರ್, ಸುನೀತಾ ಚವ್ಹಾಣ್, ಸಿವಿ ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಸೇರಿ 21 ಸದಸ್ಯರಿದ್ದಾರೆ.
ನಂತರ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆದಿದ್ದು, ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ಚುನಾವಣೆ ಸಂಬಂಧ ರಾಜ್ಯ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು.
ಕಾಂಗ್ರೆಸ್ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಎಂದಿರುವ ಜಿ.ಟಿ.ದೇವೇಗೌಡ, ಪಕ್ಷ ಸಂಘಟನೆ ಹಾಗು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ರಾಜ್ಯದ ಜನರ ಮುಂದಿಡಲು ಜೆಡಿಎಸ್ ಕೋರ್ ಕಮಿಟಿ ಸಿದ್ಧವಾಗಿದೆ ಎಂದಿದ್ದಾರೆ. ಲೋಕಸಭೆಗೆ ಸಂಘಟನೆ ಮಾಡಬೇಕಿದೆ. 28 ಕ್ಷೇತ್ರದಲ್ಲಿಯೂ ನಾವು ಸಂಘಟನೆ ಮಾಡುತ್ತೇವೆ. ಯಾರನ್ನು ಅಭ್ಯರ್ಥಿ ಹಾಕಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಮತ್ತೆ ನಾವು ಸೆ.1ಕ್ಕೆ ಕೋರ್ ಕಮಿಟಿ ಸಭೆ ಮಾಡುತ್ತೇವೆ ಎಂದಿದ್ದಾರೆ ಜಿಟಿ ದೇವೇಗೌಡ.
ವಿಶೇಷವೆಂದರೆ ಈ ಕೋರ್ ಕಮಿಟಿಯಲ್ಲಿ ದೇವೇಗೌಡರ ಕುಟುಂಬದ ಒಬ್ಬರೂ ಸ್ಥಾನ ಪಡೆದಿಲ್ಲದೇ ಇರುವುದು. ಲೋಕಸಭೆ ಸದಸ್ಯ ಪ್ರಜ್ವಲ್ ರೇವಣ್ಣ, ರಾಜ್ಯಸಭೆ ಸದಸ್ಯ ದೇವೇಗೌಡ, ಶಾಸಕರಾದ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಯಾರೊಬ್ಬರೂ ಕೋರ್ ಕಮಿಟಿಯಲ್ಲಿ ಇಲ್ಲ. ಜೆಡಿಎಸ್ ಸ್ಥಾಪನೆಯಾದ ನಂತರ ಈ ರೀತಿಯ ಕೋರ್ ಕಮಿಟಿ ರಚನೆಯಾಗಿರುವುದು ಇದೇ ಮೊದಲು.



