ಉಚಿತ ವಿದ್ಯುತ್ ಯೋಜನೆ, ಗೊಂದಲಗಳೇನೇ ಇರಲಿ, ನೋಂದಣಿಯಂತೂ ಆರಂಭವಾಗಿದೆ. ಗೊಂದಲಗಳಿಗೆ ಕ್ಲಾರಿಟಿ ಸಿಗುವುದು ಜನ ಯಾವ್ಯಾವ ಕಾರಣಕ್ಕೆ ಸ್ಕೀಂನಿಂದ ಹೊರಗುಳಿದರು ಎಂದು ಡಿಸೈಡ್ ಆದ ಮೇಲೆ. ಆಗ ಯೋಜನೆಯ ಲಾಭ ಪಡೆದವರು ಹೊಗಳಿದ್ರೆ, ಸಿಗದವರು ತೆಗಳುತ್ತಾರೆ. ಟೀಕಿಸುತ್ತಾರೆ. 200 ಯುನಿಟ್ ದಾಟಿದವರಂತೂ ಹಿಗ್ಗಾಮುಗ್ಗಾ ಟೀಕಿಸ್ತಾರೆ. ಏಕೆಂದರೆ ಅವರು ಡಬ್ಬಲ್ ಬಿಲ್ ಕಟ್ಟಬೇಕು. ಅದನ್ನು ಹೊರತುಪಡಿಸಿದರೆ, ಈಗ ಗೃಹಜ್ಯೋತಿ ನೋಂದಣಿ ಕಾರ್ಯ ಆರಂಭವಾಗಿದೆ.
ಜೂನ್ 18ರ ಭಾನುವಾರ ಯೋಜನೆಗೆ ಚಾಲನೆ ಸಿಕ್ಕಿದೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡದೆ ಯೋಜನೆಗೆ ಚಾಲನೆ ಕೊಟ್ಟಿರುವುದಕ್ಕೆ ಕಾರಣವೂ ಇದೆ. ಏಕೆಂದರೆ ಜನ ಮುಗಿಬೀಳುತ್ತಿರುವ ಸ್ಪೀಡಿಗೆ ತಕ್ಕ ಸರ್ವರ್ ಸಿದ್ಧವಾಗಿಲ್ಲ. ಹೌದು, ಸೇವಾಸಿಂಧು ಪೋರ್ಟಲ್ ಹ್ಯಾಂಗ್ ಆಗುತ್ತಿದೆ. 2.10 ಕುಟುಂಬಗಳು ಪ್ರಯೋಜನ ಪಡೆಯುತ್ತವೆ ಎಂದು ನಿರೀಕ್ಷಿಸಲಾಗಿರುವ ಯೋಜನೆಗೆ ಮೊದಲ ದಿನ ಸಲ್ಲಿಕೆಯಾಗಲು ಸಾಧ್ಯವಾದ ಅರ್ಜಿಗಳ ಸಂಖ್ಯೆ ಕೇವಲ 55 ಸಾವಿರ. ಈ ಪೋರ್ಟಲ್ ವರ್ಕೌಟ್ ಆಗಿದ್ದು ಸಂಜೆ 5.30ರ ನಂತರ.
ಇನ್ನು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಒನ್, ನಾಡಕಚೇರಿ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕೂಡಾ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಹೀಗಿದ್ದರೂ ಅವರೂ ಕೂಡಾ ಕಂಪ್ಯೂಟರ್ ಡೇಟಾ ಎಂಟ್ರಿ ಮಾಡಬೇಕಲ್ಲ, ಅವರಿಗೂ ಸರ್ವರ್ ಪ್ರಾಬ್ಲಂ.
ಬೆಳಗ್ಗೆಯೇ ಯೋಜನೆಗೆ ಆರಂಭ ಸಿಕ್ಕರೂ, ಅದೃಷ್ಟವಿದ್ದವರಿಗೆ ಮಾತ್ರ ನೋಂದಣಿ ಮಾಡೋಕೆ ಅವಕಾಶ ದೊರೆಯಿತು. ಸರ್ವರ್ ಸಿಕ್ಕರೂ ಸಿಗದಂತೆ ಆಟವಾಡಿತು. ಸುದೀರ್ಘ ಕಾಲ ಬ್ರೌಸಿಂಗ್ ಸಿಗ್ನಲ್ ತೋರಿಸುತ್ತಿತ್ತು. ರಿಫ್ರೆಶ್ ಕೊಟ್ಟರೆ, ಸೇವಾ ಪೋರ್ಟಲ್ ಮಾಯವಾಗುತ್ತಿತ್ತು. ಹೊಸದಾಗಿ ಲಾಗ್ ಇನ್ ಆಗಲು ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ. ಎರಡನೇ ದಿನವೂ ಸಮಸ್ಯೆ ರಿಪೀಟ್ ಆಗುತ್ತಿದೆ.
ಈ ಪ್ರಮಾಣದಲ್ಲಿ ದಿನಕ್ಕೆ 55 ಸಾವಿರ ಅರ್ಜಿ ಸ್ವೀಕಾರ ಮಾಡಿದರೆ, ಯೋಜನೆಗೆ ಅರ್ಹತೆ ಇರುವ 2.10 ಕೋಟಿ ಅರ್ಜಿ ಸ್ವೀಕಾರ ಮಾಡುವುದಕ್ಕೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತೆ. ಮೊದಲೇ ಸರ್ಕಾರ ಜುಲೈ 15 ಕೊನೆ ದಿನ ಎಂದು ಹೇಳಿದೆ. ಪೋರ್ಟಲ್`ನಲ್ಲಿ ಕೊನೆಯ ದಿನಾಂಕ ಯಾವುದು ಎಂದು ನಮೂದಿಸಿಲ್ಲ. ಆದರೆ. ಯೋಜನೆಯ ಪ್ರಯೋಜನ ಆಗಸ್ಟ್ 1ರಿಂದಲೇ ಶುರುವಾಗಲಿದೆ. ಅಷ್ಟರೊಳಗೆ ಸರ್ವರ್ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಕೊಳ್ಳಬೇಕು. ಏನು ಮಾಡಲಿದೆಯೋ..



