ಗೃಹಲಕ್ಷ್ಮಿ. ಕುಟುಂಬದ ಯಜಮಾನಿಗೆಂದೇ ಕೊಡುವ ಮಾಸಿಕ 2000 ರೂ. ಇನ್ನು ಅನ್ನಭಾಗ್ಯ. ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿಯ ಜೊತೆಗೆ ಇನ್ನೂ 5 ಕೆಜಿ ಅಕ್ಕಿ ಕೊಡಬೇಕಾಗಿತ್ತು. ಆದರೆ ಸಾಧ್ಯವಾಗಿಲ್ಲ. ಅದಕ್ಕೆ ಬದಲಾಗಿ ಮಾಸಿಕ 170 ರೂ.ನಂತೆ (ಕುಟುಂಬಕ್ಕೆ ಅಲ್ಲ, ಒಬ್ಬರಿಗೆ) ನೀಡಲಾಗುತ್ತಿದೆ. ಈಗ ಆ ಎರಡೂ ಹಣವನ್ನು ಕುಟುಂಬದ ಯಜಮಾನಿಯ ಖಾತೆಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ವಿಧ ಕಾರಣಗಳಿಂದಾಗಿ ಇದುವರೆಗೂ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಹಣ ಸಂದಾಯವಾಗದ ಕುಟುಂಬಗಳಿಗೆ ಇನ್ನುಮುಂದೆ ಆ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಹಣವನ್ನು ನೇರ ನಗದು ವರ್ಗಾವಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಮನೆಯ ಯಜಮಾನಿ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರು. ಮತ್ತು ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯನಿಗೆ ಐದು ಕೆಜಿ ಅಕ್ಕಿ ಬದಲು ಕೆಜಿಗೆ 34 ರು.ನಂತೆ 170 ರು. ಹಣ ನೀಡಲಾಗುತ್ತಿದೆ. ಆದರೆ, ಮನೆಯೊಡತಿ ಘೋಷಣೆ ಮಾಡದ ಕಾರಣ, ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಆಗದಿರುವುದು ಸೇರಿ ವಿವಿಧ ಕಾರಣಗಳಿಂದ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆ ತಲುಪಿಲ್ಲ.
ಅದೇ ರೀತಿ 7.67 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಮಾಡಲಾಗಿರಲಿಲ್ಲ. ಅಂತಹ ಕುಟುಂಬಗಳಿಗೂ ಯೋಜನೆ ತಲುಪಿಸುವ ದೃಷ್ಟಿಯಿಂದ ಆ ಎಲ್ಲಾ ಕುಟುಂಬಗಳ ಪಡಿತರ ಚೀಟಿಯಲ್ಲಿರುವ ಹಿರಿಯ ಮಹಿಳಾ ಸದಸ್ಯೆ ಖಾತೆಗೆ ಇನ್ಮುಂದೆ ನೇರ ನಗದು ವರ್ಗಾವಣೆ ಮೂಲಕ ಎರಡೂ ಯೋಜನೆಗಳ ಹಣ ಸಂದಾಯ ಮಾಡಲು ಸಂಪುಟ ನಿರ್ಣಯಿಸಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ, ತಾಂತ್ರಿಕ ಕಾರಣಗಳಿಂದಾಗಿ ಹಣ ಕೆಲವರಿಗೆ ತಲುಪಿಲ್ಲ. ಅಂತಹ ಖಾತೆದಾರರ ತಾಂತ್ರಿಕ ತೊಂದರೆ ನಿವಾರಣೆಯಾದ ಮೇಲೆ ಹಳೆಯ ಬಾಕಿಯೂ ಸೇರಿದಂತೆ ಎಲ್ಲವನ್ನೂ ಒಂದೇ ಬಾರಿ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಅದಾಲತ್ ನಡೆಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ಕೊಟ್ಟಿದ್ದಾರೆ.



