ರಾಜ್ಯ ಸರ್ಕಾರ ಗ್ಯಾರಂಟಿ ಜಾರಿ ಮಾಡುವಲ್ಲಿ ವಿಫಲವಾಗಿದೆಯೇ.. ಹೌದು ಎನ್ನುತ್ತಿವೆ ರಾಜ್ಯದಿಂದ ಬರುತ್ತಿರುವ ಅಧಿಕೃತ ಮಾಹಿತಿಗಳು. ದಾಖಲೆಗಳ ಪ್ರಕಾರವೇ 2 ತಿಂಗಳಿಂದ ಗೃಹಲಕ್ಷ್ಮಿ ಇಲ್ಲ. 5 ತಿಂಗಳಿಂದ ಹೆಚ್ಚುವರಿ ಅನ್ನಭಾಗ್ಯ ಅಕ್ಕಿ ಇಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.
ದುಡ್ಡು ಕೊಡಲ್ಲ.. ಅಕ್ಕಿ ಕೊಡ್ತೀವಿ ಅಂತಿದ್ದಾರೆ :
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಅನ್ಯಭಾಗ್ಯ’ದಡಿ ಬಿಪಿಎಲ್ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ ಹಣವು ಬರೋಬ್ಬರಿ 5 ತಿಂಗಳಿನಿಂದ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಹಣದ ಬದಲಿಗೆ ಅಕ್ಕಿಯನ್ನೇ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ, ಬಿಪಿಎಲ್ ಕಾರ್ಡ್‌ದಾರರಿಗೆ ಅತ್ತ ಹಣವೂ ಇಲ್ಲ, ಇತ್ತ ಅಕ್ಕಿಯೂ ಸಿಗುತ್ತಿಲ್ಲ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಅನ್ನಭಾಗ್ಯದ ಹಣಕ್ಕಾಗಿ ಫಲಾನುಭವಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಅಂದಹಾಗೆ ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೊಡುತ್ತಿದ್ದ 5 ಕೆಜಿ ಅನ್ನಭಾಗ್ಯ ಗ್ಯಾರಂಟಿ ನಿಂತಿಲ್ಲ. ಸದ್ಯಕ್ಕೆ ಫಲಾನುಭವಿಗಳಿಗೆ ಸಿಗುತ್ತಿರುವ ಏಕೈಕ ಗ್ಯಾರಂಟಿ ಸ್ಕೀಂ ಇದು.
”ಸರಕಾರ ಈಗ ಕೊಡುತ್ತಿರುವ ಅಕ್ಕಿ ಗುಣಮಟ್ಟದಿಂದ ಕೂಡಿಲ್ಲ. ಹೀಗಾಗಿ, ಸರಕಾರ 5 ಕೆ.ಜಿ ಅಕ್ಕಿಯನ್ನಷ್ಟೇ ವಿತರಿಸಿ, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ ನೀಡುತ್ತಿರುವ ಹಣವನ್ನು ನಿಲ್ಲಿಸಬೇಕು. ಬದಲಿಗೆ ತೊಗರಿಬೇಳೆ, ತಾಳೆ ಎಣ್ಣೆ, ಉಪ್ಪು, ಸೋಪು ಹಾಗೂ ಇತರೆ ಅಗತ್ಯ ದಿನಸಿ ಪದಾರ್ಥಗಳನ್ನು ನೀಡಬೇಕು. ಇದರಿಂದ ಸರಕಾರಕ್ಕೆ ಯಾವುದೇ ರೀತಿ ಹೊರೆಯಾಗುವುದಿಲ್ಲ,” ಎನ್ನುವುದು ಫಲಾನುಭವಿಗಳ ಆಗ್ರಹ. ಆದರೆ ಅಕ್ಕಿಯ ಬದಲು ಕೆ.ಜಿ ಅಕ್ಕಿ ಬದಲಿಗೆ 34 ರೂ. ನಂತೆ ಒಟ್ಟು 680 ರೂ.ಗಳನ್ನು ಖಾತೆಗೆ ಜಮೆ ಮಾಡಬೇಕಿದ್ದ ಸರ್ಕಾರ ಅದನ್ನೇ ಕೊಡ್ತಿಲ್ಲ.
ಹಣದ ಬದಲಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದರೆ ಸರಕಾರಕ್ಕೆ ಸಾಕಷ್ಟು ಉಳಿತಾಯ ಆಗಲಿದೆ. ಒಂದು ಪಡಿತರ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ, ಕೆ.ಜಿ ಅಕ್ಕಿ ಬದಲಿಗೆ 34 ರೂ. ನಂತೆ ಒಟ್ಟು 680 ರೂ. ಆಗಲಿದೆ. ಅಕ್ಕಿಯನ್ನೇ ಕೊಡಲು ಹೋದರೆ ಇನ್ನಷ್ಟು ಖರ್ಚು ಹೆಚ್ಚಾಗಲಿದೆ. ಬೇಳೆ, ಎಣ್ಣೆ, ಉಪ್ಪು ಮತ್ತಿತರ ಉತ್ಪನ್ನಗಳನ್ನು ವಿತರಿಸಿದರೆ ವೆಚ್ಚ ಹೆಚ್ಚಾಗುತ್ತದೆ ಎನ್ನುವುದು ವಾಸ್ತವ.
ಇನ್ನು ಗೃಹ ಲಕ್ಷ್ಮಿಯೂ ಅಷ್ಟೇ. 2 ತಿಂಗಳಿಂದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಸಂದಾಯವಾಗಿಲ್ಲ. ಕೆಲವರಿಗೆ 3 ತಿಂಗಳಿಂದ ಗೃಹಲಕ್ಷ್ಮಿ ಬಂದಿಲ್ಲ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವುದು ಮಾತ್ರ ಬೇರೆ.
ʻʻಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯ 16 ಕಂತಿನ ಹಣ ಜನವರಿ 14 ರಂದು ಬಿಡುಗಡೆಯಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಆದರೆ, ಹಲವು ಅಡೆತಡೆಗಳಿಂದ ಹಣ ಬಿಡುಗಡೆಯಾಗಿರಲಿಲ್ಲ. ಇದೀಗ 16 ಹಾಗೂ 17 ನೇ ಕಂತಿ ಹಣ ಯಾವಾಗ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ. ಪೆಂಡಿಂಗ್ ಇರುವ ಹಣ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.



