ಗೃಹ ಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿಂದ ಸರಿಯಾಗಿ ಫಲಾನುಭವಿಗಳ ಕೈ ಸೇರುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಲವು ಬಾರಿ ಈಗ ಬಂತು.. ಇನ್ನೇನು ಬಂತು ಎನ್ನುವಂತೆ ಮಾತನಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರಂತೂ ನಿಮಗೆಲ್ಲೋ ತಪ್ಪು ಮಾಹಿತಿ ಇರಬೇಕು, ಒಬ್ಬರಿಗೂ ಮಿಸ್ ಆಗದೆ ತಲುಪಿದೆ ಎಂದು ಬಿಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇನ್ನೊಂದೆರಡು ದಿನಗಳಲ್ಲಿ ರಿಲೀಸ್ ಆಗುತ್ತೆ ಎಂದು ತಿಂಗಳಿಂದ ಹೇಳುತ್ತಲೇ ಇದ್ದಾರೆ. ಆದರೆ.. ಆಗಿಲ್ಲ. ಇದರ ಅನುಭವ ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಆಗಿದೆ.
ಮಂಡ್ಯದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣ ಬರ್ತಿದೆಯಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಳಿದರು. ಹೌದು.. ಹೌದು.. ಎಂಬ ಉದ್ಘಾರದ ನಿರೀಕ್ಷೆಯಲ್ಲಿದ್ದ ಉಪಮುಖ್ಯಮಂತ್ರಿಗೆ ಸಿಕ್ಕಿದ್ದು ಇಲ್ಲ.. ಇಲ್ಲ.. ಬರ್ತಿಲ್ಲ.. ಎಂಬ ಉತ್ತರ. ಕೊನೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಅಪ್ʻಡೇಟ್ ಕೊಟ್ಟಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ನಡೆದದ್ದೇನು..?
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಂಗಳವಾರ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಷಣ ಮಾಡುತ್ತಾ, ಬಡವರ ಪರವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೆಲೆ ಏರಿಕೆಯಿಂದ ಬಡವರು ತತ್ತರಿಸಿದ್ದರು. ಈ ವೇಳೆ ಪಂಚ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಬರ್ತಿದೆಯೋ? ಇಲ್ವೋ? ಎಂದು ಪ್ರಶ್ನೆ ಮಾಡಿದರು. ಆಗ ವೇದಿಕೆ ಮುಂಭಾಗ ನೆರೆದಿದ್ದ ಮಹಿಳೆಯರು ಬರ್ತಿಲ್ಲ, ಬರ್ತಿಲ್ಲ ಎಂದು ಕೂಗಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದಂತಾದ ಡಿಕೆಶಿ ಬರುತ್ತೆ ಬರುತ್ತೆ ಕಾಯುತ್ತಿರಿ. ಕಳೆದ ಒಂದು, ಎರಡು ತಿಂಗಳದ್ದು ಮಾತ್ರ ಬಂದಿಲ್ಲ. ಅನುದಾನ ಬಿಡುಗಡೆಯಾಗಿದೆ, ಶೀಘ್ರವೇ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ದೊಡ್ಡ ಮಾಹಿತಿ ನೀಡಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ನಮ್ಮ ಸರ್ಕಾರದ ಗ್ಯಾರಂಟಿ ನಿಲ್ಲಸಬೇಕೆಂದು ಪ್ರಯತ್ನ ಮಾಡುತ್ತಿವೆ. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಬ್ರಿಟಿಷರ ಕೈಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ. ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, ನಮ್ಮದು 10 ವರ್ಷದ ಸರ್ಕಾರ. ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಿಮ್ಮೊಂದಿಗೆ ಮುಸ್ಲಿಮರು ಇಲ್ಲ ಎಂದಿದ್ರೆ ನೀವು MLA ಆಗ್ತಿರಲಿಲ್ಲ, ನಿಮ್ಮ ತಂದೆ ಮುಖ್ಯಮಂತ್ರಿ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ಓಟ್ ಹಾಕಿಲ್ಲ ಅಂತಾ ಧಮ್ಕಿ ಹಾಕ್ತಾರೆ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಕುಮಾರಸ್ವಾಮಿ. ಸರ್ವಧರ್ಮದ ಶಾಂತಿಯ ತೋಟ ಭಾರತ. ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ. ಪೆನ್ ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರಲಿಲ್ಲ. ಮಹಾನಾಯಕ ಪೆನ್ ಡ್ರೈವ್ ಹಂಚಿದ್ದು ಎಂದಿದ್ದೆ. ಅದಕ್ಕೆ ಸ್ಟಿಕ್ ಆನ್ ಆಗಬೇಕಿತ್ತು. ನೀನು ಸಿಎಂ ಆಗಿದ್ದಾಗ ಡಿ.ಕೆ.ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದಾಗಲೇ ಹೆದರಿಲ್ಲ. ಸಾತನೂರಿಗೆ ಬಂದು ಕ್ಷಮೆ ಕೇಳಿದ್ದೆ. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ. ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ ಎಂದು ಕಿಡಿಕಾರಿದರು.



