ಗೃಹ ಲಕ್ಷ್ಮಿ ಕೆಲವರಿಗೆ ಬಂದಿದೆ. ಕೆಲವರಿಗೆ ಬಂದಿಲ್ಲ. ಕೆಲವರಿಗೆ ಎಲ್ಲ ಸರಿ ಇದ್ದರೂ ಹಣ ಕೊಡುವುದಕ್ಕೆ ಮಾತ್ರ ಸಮಸ್ಯೆ. 5 ಕೆಜಿ ಅಕ್ಕಿ ಸಿಗುತ್ತಿದೆ, ಆದರೆ ಉಳಿದ 5 ಕೆಜಿ ಅಕ್ಕಿಯ ದುಡ್ಡು ಸಿಗುತ್ತಿಲ್ಲ. ಕೆಲವರಿಗೆ ಅಕ್ಕಿ ದುಡ್ಡು ಬರುತ್ತಿದೆ, ಕೆಲವರಿಗೆ ಇಲ್ಲ. ಇಂತಹ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗುವ ಸಮಯ ಬಂದಿದೆ. ರಾಜ್ಯ ಸರ್ಕಾರದ ಬಹುನಿರೀಕ್ಷಿತ ಅನ್ನಭಾಗ್ಯ, ಗೃಹಲಕ್ಷ್ಮಿ (Annabhagya, Gruhalakshmi scheme) ಯೋಜನೆಗಳಿಗೆ ಹಣ ನಿಗದಿತ ಸಮಯದೊಳಗೆ ಪಾವತಿಯಾಗದಿರುವುದು ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ಈ ಹಿನ್ನೆಲೆ ಪ್ರತಿ ತಿಂಗಳ 20ರೊಳಗೆ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗೆ ಅಗತ್ಯ ಅನುದಾನ ಹಣ (Grant money) ಸಂದಾಯ ಮಾಡುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ (Department of Women and Child Welfare) ಅನುಷ್ಠಾನಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಪಡಿತರಚೀಟಿ ಹೊಂದಿರುವ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆ ಹಣವು 15 ರಿಂದ 20ರೊಳಗೆ ಫಲಾನುಭವಿಗಳಿಗೆ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. ಈ ಬಗ್ಗೆ ಇತ್ತೀಚೆಗೆ ಸಂಬಂಧ ಪಟ್ಟ ಇಲಾಖೆಗಳ ಜತೆ ಸಭೆ ನಡೆಸಿರುವ ಆರ್ಥಿಕ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ (Department of Food and Civil Supplies) ಜಾರಿಗೊಳಿಸುತ್ತಿರುವ ಅನ್ನಭಾಗ್ಯಯೋಜನೆಯಲ್ಲಿ ಅಕ್ಕಿ ಬದಲಾಗಿ ನಗದು ಪಾವತಿ ಸಲಾಗುತ್ತಿದೆ. ಅದನ್ನು ತಿಂಗಳ ಆರಂಭದ 10 ರಿಂದ 15ರೊಳಗೆ ಪಾವತಿಸಬೇಕು. 20 ತಾರೀಖಿನೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ತಿಳಿಸಿದೆ.
ಮಾಸಾಶನಗಳೆಲ್ಲ 1-5ನೇ ತಾರೀಕು :
ಹಿರಿಯ ನಾಗರೀಕರು, ವಿಧವೆಯರು, ಅಂಗವಿಕಲರು ಸೇರಿದಂತೆ ಹಲವರಿಗೆ ಸಾಮಾಜಿಕ ಭದ್ರತಾ ಪಿಂಚಣಿ (Pension) ಯೋಜನೆಯಡಿ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತದೆ. ಈ ಹಣವನ್ನು 1 ರಿಂದ 5ನೇ ತಾರೀಖಿನೊಳಗೆ ಪಾವತಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ನಿರ್ಧಾರ ಮಾಡಲಾಗಿದೆ.
ಇಷ್ಟು ದಿನ ತಡವಾಗಿದ್ದು ಯಾಕೆ?
ರಾಜ್ಯದ ಸರ್ಕಾರ ನೌಕರರ ವೇತನ ಪಾವತಿ ಸಮಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬಿಲ್‍ಗಳನ್ನು ಪಾವತಿಸಬೇಕಾದರೆ ಒತ್ತಡ ಹೆಚ್ಚಾಗುತ್ತದೆ. ಡಿಬಿಟಿಯಲ್ಲಿ ವಿಳಂಬವಾಗುತ್ತಿದೆ. ಪ್ರತಿ ಕಡತದ ಪರಿಶೀಲನೆಗೂ ವಿಳಂಬವಾಗುತ್ತದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಸಿಟ್ಟಾದ ಮುಖ್ಯಮಂತ್ರಿ :
ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಶೇ 100 ರಷ್ಟು ಏಕೆ ತಲುಪಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರದಿದ್ದಾಗ ಸಿಟ್ಟಾದ ಮುಖ್ಯಮಂತ್ರಿಗಳು ಅಭಿಯಾನ ನಡೆಸಿ ಶೇ100 ರಷ್ಟು ಸಾಧನೆ ಮಾಡಿ ಎಂದು ಸೂಚಿಸಿದ್ದಲ್ಲದೆ, ಈ ಬಗ್ಗೆ ನಿಗಾ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನೀವು ಶೇ90 ರಷ್ಟು ಸಾಧನೆ ಮಾಡಿದ್ದರೂ ಬಾಕಿ ಉಳಿದ ಶೇ 10 ರಷ್ಟು ಫಲಾನುಭವಿಗಳ ಧ್ವನಿ ಜೋರಾಗುತ್ತದೆ. ಇವರ ಧ್ವನಿಯನ್ನು ನೀವು ಆಲಿಸಬೇಕು. ಕಾಳ ಮಿತಿಯಲ್ಲಿ ಶೇ 100 ಸಾಧನೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ವರದಿ ನೀಡಿ ಎಂದು ಸಿಎಂ ಸೂಚಿಸಿದರು.



