ಮನೆ ಮನೆಗೂ 200 ಯುನಿಟ್ ಕರೆಂಟ್ ಫ್ರೀ ಎಂದು ಹೇಳಿಯೇ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಹೇಳಿದಂತೆಯೇ ಗೃಹಜ್ಯೋತಿ ಗ್ಯಾರಂಟಿಯನ್ನು ಜಾರಿ ಮಾಡಿತ್ತು. ಆದರೆ ಒಂದು ಟ್ವಿಸ್ಟ್ ಕೂಡಾ ಇತ್ತು. ಎಲ್ಲರಿಗೂ 200 ಯುನಿಟ್ ಎಂದು ಹೇಳಿದ್ದ ಕಾಂಗ್ರೆಸ್, ಯೋಜನೆಯನ್ನು ಜಾರಿಗೆ ತರುವಾಗ ಗ್ರಾಹಕರು ಬಳಸುತ್ತಿದ್ದ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆಯ ಶೇ.10ರಷ್ಟು ಹೆಚ್ಚು ಎಂಬ ನಿರ್ಬಂಧ ಹೇರಿತ್ತು. ಇದೀಗ ಆ ಸ್ಕೀಮಿನಲ್ಲೂ ಸ್ವಲ್ಪ ಬದಲಾವಣೆಯಾಗಿದೆ.
ಈವರೆಗಿನ ನಿಯಮದಂತೆ ಗ್ರಾಹಕರು ತಾವು ಬಳಕೆ ಮಾಡಿದ 200 ಮೀಟರ್ ಒಳಗಿನ ವಿದ್ಯುತ್ ಯೂನಿಟ್‌ಗೆ ಹೆಚ್ಚುವರಿಯಾಗಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರ ಪ್ರಕಾರ ಈವರೆಗೆ ನೀಡಲಾಗುತ್ತಿದ್ದ ಶೇ 10% ಬದಲಾಗಿ 10 ಯೂನಿಟ್ ವಿದ್ಯುತ್ ರಿಯಾಯಿತಿ ನೀಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಅತಿ ಕಡಿಮೆ ವಿದ್ಯುತ್ ಬಳಕೆದಾರನಿಗೆ ಹೆಚ್ಚು ಲಾಭ, 200 ಯೂನಿಟ್ ಹತ್ತಿರದವರೆಗೂ ವಿದ್ಯುತ್ ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಸ್ವಲ್ಪ ಹೊಡೆತ. ಹೇಗೆ ಅಂತೀರಾ..
ಕಡಿಮೆ ಯೂನಿಟ್ ಬಳಕೆದಾರರಿಗೆ ಲಾಭ :
ಓರ್ವ ಗ್ರಾಹಕ ಸರಾಸರಿಯಾಗಿ 43 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಶೇ.10 ಹೆಚ್ಚುವರಿ ಲೆಕ್ಕದ ಪ್ರಕಾರ ಆತನು 4.8 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ಬಳಸಬಹುದಿತ್ತು. ಇದರಿಂದ ಆತನಿಗೆ ಹೆಚ್ಚಿನ ಲಾಭವೇನೂ ಆಗುತ್ತಿರಲಿಲ್ಲ. ಆದರೆ ಈಗ 10 ಯುನಿಟ್ ಲೆಕ್ಕ ಇಟ್ಟಿರುವ ಕಾರಣ 43 ಯೂನಿಟ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಇನ್ನು ಮುಂದೆ 53 ಯೂನಿಟ್ ಸಿಗಲಿದೆ.
ಹೆಚ್ಚು ಯುನಿಟ್ ಬಳಕೆದಾರರಿಗೆ ಹೊಡೆತ :
ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಆಗಲಿದೆ. ಉದಾಹರಣೆ ಓರ್ವ ಗ್ರಾಹಕ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಪ್ರಕಾರ 10% ಸೇರಿಸಿ ಉಚಿತ ಕೊಡುವುದರಿಂದ 165 ಯೂನಿಟ್ ವಿದ್ಯುತ್ ಬಳಕೆಗೆ ಅವಕಾಶ ಇತ್ತು. ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್ ನೀಡುತ್ತಿರುವುದರಿಂದ 160 ಯೂನಿಟ್ ಬಳಕೆ ಮಾಡಬಹುದುದಾಗಿದೆ. 5 ಯೂನಿಟ್ ಹೆಚ್ಚುವರಿಯಾಗಿ ಬಳಸುವ ಅವಕಾಶ ತಪ್ಪಲಿದೆ. ಹೆಚ್ಚು ಯೂನಿಟ್ ಗಳನ್ನು ಬಳಸುವವರಿಂದ ಕೆಲವು ಯೂನಿಟ್ ಗಳನ್ನು ಕಡಿತಗೊಳಿಸಿ, ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಪ್ಪಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇಂಧನ ಸಚಿವರ ಪ್ರಕಾರ :
48 ಯುನಿಟ್‌ಗಿಂತ ಕಡಿಮೆ ಬಳಸಿದವರಿಗೆ ಶೇ.10 ಯುನಿಟ್ ಫ್ರೀ ವಿದ್ಯುತ್ ಕೊಡುತ್ತಿದ್ದೆವು. ಆದರೆ ಇದೀಗ ಶೇ.10 ಬದಲು 10 ಯುನಿಟ್ ನೀಡಲು ಸಂಪುಟದಲ್ಲಿ ನಿರ್ಧರಿಸಿದ್ದೇವೆ. ಕೆಲವರು 48 ಯುನಿಟ್ ಕೊಟ್ಟರೂ ಕಡಿಮೆ ಬಳಕೆ ಮಾಡುತ್ತಿದ್ದರು. ಕೇವಲ 20-25 ಯುನಿಟ್ ಬಳಸಿದರೆ ಶೇ.2ರಷ್ಟು ಯುನಿಟ್ ನೀಡುತ್ತಿದ್ದೆವು. ಆದರೆ ಸಂಪುಟ ನಿರ್ಧಾರದಿಂದ 48 ಇರುವುದು 58 ಯುನಿಟ್ ಆಗುತ್ತದೆ. ಮುಂದಿನ ಬಿಲ್ಲಿಂಗ್‌ನಲ್ಲಿ ಇದು ಸೇರ್ಪಡೆಯಾಗುತ್ತದೆ. ಇದರಿಂದ ಸರ್ಕಾರಕ್ಕೆ ಹೊರೆ ಆಗುತ್ತೆ, ಆದರೆ ಬಡವರಿಗೆ ಅನುಕೂಲವಾಗುತ್ತೆ. ಎಷ್ಟೋ ಗ್ರಾಹಕರಿಗೆ ಶೂನ್ಯ ಬಿಲ್ ಬರುತ್ತಿರಲಿಲ್ಲ. ಇವರಿಗೆ ಅನುಕೂಲ ಆಗಲಿ ಅಂತಾ ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ವಾರ್ಷಿಕವಾಗಿ 500-600 ಕೋಟಿ ರೂ. ಹೆಚ್ಚುವರಿ ಹೊರೆ ಆಗುತ್ತದೆ ಎಂದು ಹೇಳಿದ್ದಾರೆ.



