ಎಲೆಕ್ಷನ್ ಹತ್ತಿರ ಬಂದಾಗ ನಡೆಯುವ ಹಬ್ಬಗಳಿಗೆ ಇದ್ದಕ್ಕಿದ್ದಂತೆ ವೈಭೋಗ ಬಂದುಬಿಡುತ್ತದೆ. ಅರ್ಧ ಖರ್ಚನ್ನು ಅಭ್ಯರ್ಥಿಗಳೇ ನೋಡ್ಕೊಳ್ತಾರೆ. ಚನ್ನಪಟ್ಟಣದಲ್ಲೀಗ ಗೌರಿ ಗಣೇಶ ರಾಜಕೀಯ ನಡೀತಿದೆ. ಇಡೀ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ಇದೀಗ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಟಾಪಟಿ ನಡೆಯುತ್ತಿರುವುದು ಹೊಸ ಸುದ್ದಿಯೇನಲ್ಲ. ಈಗ ಗೌರಿ ಗಣೇಶ ವಿಗ್ರಹಗಳ ಭರಾಟೆ ಜೋರಾಗಿ ನಡೆಯುತ್ತಿದೆ.
ಯುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಉಚಿತ ಗಣೇಶ ಮೂರ್ತಿ ವಿತರಿಸುವ ವಿಚಾರದಲ್ಲೂ ಪೈಪೋಟಿಗೆ ಬಿದ್ದಿದ್ದಾರೆ. ಜೆಡಿಎಸ್ ಪಕ್ಷದ ವತಿಯಿಂದ ನಗರದಲ್ಲಿ 500ಕ್ಕೂ ಹೆಚ್ಚು ವಿನಾಯಕ ಮೂರ್ತಿ ವಿತರಿಸಿದರೆ, ಬಿಜೆಪಿಯ ಸಿಪಿ ಯೋಗೇಶ್ವರ್ ಕೂಡಾ ಹಿಂದೆ ಬಿದ್ದಿಲ್ಲ.
ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂರ್ತಿ ವಿತರಣೆಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಅವರು ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಜೆಡಿಎಸ್ ಉಚಿತ ಗಣೇಶ ಮೂರ್ತಿ ವಿತರಿಸಿದೆ. ಅತ್ತ ಬಿಜೆಪಿಯಿಂದಲೂ ಉಚಿತ ಗಣೇಶ ಮೂರ್ತಿ ವಿತರಣೆ ಕಾರ್ಯ ನಡೆಯುತ್ತಿದ್ದು ಮೈತ್ರಿ ಟೆಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ವಿಗ್ರಹಗಳನ್ನು ಹಂಚಲಾಗುತ್ತಿದೆ.
ಹಲವು ವರ್ಷಗಳಿಂದ ತಾಲೂಕು ಅಧ್ಯಕ್ಷರು ಗಣೇಶ ಮೂರ್ತಿ ವಿತರಣೆ ಮಾಡಿಕೊಂಡು ಬಂದಿದ್ದಾರೆ, ಈ ಬಾರಿ ನಾನೂ ಭಾಗವಹಿಸಿ ಯುವಕರಿಗೆ ಗಣೇಶ ವಿತರಿಸುತ್ತಿದ್ದೇನೆ. ಇದಕ್ಕೂ ರಾಜಕೀಯ, ಚುನಾವಣೆಗೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಇನ್ನೂಅಭ್ಯರ್ಥಿ ಫೈನಲ್ ಆಗಿಲ್ಲ. ಕಾರ್ಯಕರ್ತರ ಒಪೀನಿಯನ್ ಪಡ್ಕೊಂಡು ಡಿಸೈಡ್ ಮಾಡ್ತೇವೆ ಎಂದಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಮಾತನಾಡಿ, ಮೊನ್ನೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಬಿಜೆಪಿಯ ಹಿರಿಯ ವರಿಷ್ಠರ ಜೊತೆಗೂ ಚರ್ಚೆ ಮಾಡಲಾಗಿದೆ. ಕ್ಷೇತ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಎನ್ಡಿಎ ಅಭ್ಯರ್ಥಿ ಪರವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೇವೆ. ಕಾಂಗ್ರೆಸ್ ಸೋಲಿಸಲು ಸೂಕ್ತ ಅಭ್ಯರ್ಥಿ ಹಾಕುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಅಂದಹಾಗೆ ವಿಗ್ರಹ ಹಂಚುವ ಮೊದಲು ನಿಖಿಲ್ ಕುಮಾರಸ್ವಾಮಿಗೆ ಅಪ್ಪ ಕುಮಾರಸ್ವಾಮಿ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ಧಾರೆ. ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ಗೆ ಹೆಚ್‌ಎಮ್‌ಟಿ ವಾಚ್ ಗಿಫ್ಟ್ ನೀಡಿದ್ದಾರೆ. ತಮ್ಮ ತಂದೆ ಹೆಚ್‌ಎಮ್‌ಟಿ ವಾಚ್ ಗಿಫ್ಟ್ ಮಾಡಿರುವ ವಿಚಾರವನ್ನು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಅಲ್ಲದೇ ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ HMT ಕೈಗಡಿಯಾರಗಳನ್ನೇ ಕಟ್ಟಬೇಕು ಎಂದು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್‌ಎಮ್‌ಟಿ ವಾಚ್ ಕುರಿತು ಮಾಹಿತಿ ನೀಡಿದ ನಿಖಿಲ್, HMT ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ. ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು HMT ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದರು. ಈ ಸಂದರ್ಭದಲ್ಲಿ HMT ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೋಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.



