ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ಮಧ್ಯೆ ಜಟಾಪಟಿ ಶುರುವಾಗಿದೆ. ಹಲವು ವರ್ಷದಿಂದ ರಾಜಮನೆತನದವರು ದೇವಿಗೆ ಸಂಕಲ್ಪ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಚಾಮುಂಡಿ ದೇವಾಲಯ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ. ಆದರೆ ರಾಜ್ಯ ಸರ್ಕಾರ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹೊಸ ಅಧಿನಿಯಮ ಜಾರಿಗೆ ತರಲು ಮುಂದಾಗಿದೆ. ಸರ್ಕಾರದ ಈ ನಡೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹೊಸ ಅಧಿನಿಯಮ ರದ್ದು ಮಾಡಬೇಕು ಎಂದು ಪ್ರಮೋದಾ ದೇವಿಯವರು ಮನವಿ ಮಾಡಿದ್ದಾರೆ.
ಚಾಮುಂಡಿ ಬೆಟ್ಟದ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯಾಗಿದ್ದು, ಸರ್ಕಾರ ಪ್ರಾಧಿಕಾರ ರಚನೆ ಮಾಡಿದೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ” ಸರ್ಕಾರ ಇತ್ತೀಚೆಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಸರ್ಕಾರದ ಈ ನಡೆ ತಪ್ಪಾಗಿದ್ದು, ಇದನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಏನಿದು 1974ರ ಕಥೆ..?
ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ್ ಅರಮನೆ, ಚಾಮುಂಡೇಶ್ವರಿ ದೇವಾಲಯ, ಅದರ ಆಸುಪಾಸಿನ ಜಾಗ ಮಹಾಬಲೇಶ್ವರ, ನಾರಾಯಣಸ್ವಾಮಿ, ಜ್ವಾಲಾಮುಖಿ ದೇವಸ್ಥಾನ, ದೇವಿಕೆರೆ, ನಂದಿ , 700 ಮೆಟ್ಟಿಲು , 3 ಪಂಪ್ ಹೌಸ್, ಲಾಲತಾದ್ರಿ ಸೇರಿದಂತೆ ಇನ್ನೂ ಅನೇಕ ಜಾಗಗಳು ನಮ್ಮ ಖಾಸಗಿ ಆಸ್ತಿಗಳು. ರಾಜಮನೆತನದಿಂದ 1974 ರಲ್ಲಿ ದೇವಸ್ಥಾನ ನಿರ್ವಹಣೆ ಮಾಡಲು ಕಷ್ಟ ಅಂತ ಪತ್ರ ಬರೆದಿದ್ದು ನಿಜ. ಆಗಿನ ಸನ್ನಿವೇಶ, ಕಾರಣಗಳು ಬೇರೆ, ಈಗಿನ ಸನ್ನಿವೇಶಗಳು ಬೇರೆ. ನಾವು ನಿರ್ವಹಣೆ ಮಾಡಿ ಅಂತ ಹೇಳಿದ್ದೆವು, ಮಾಲೀಕತ್ವವನ್ನು ಹಸ್ತಾಂತರ ಮಾಡಿಲ್ಲ ಎಂದಿದ್ದಾರೆ ಪ್ರಮೋದಾ ದೇವಿ ಒಡೆಯರ್.
ಪ್ರಾಧಿಕಾರದ ಯಾವ ಯಾವ ತೀರ್ಮಾನಕ್ಕೆ ವಿರೋಧ..?
ಪ್ರಾಧಿಕಾರ ರಚನೆಯ ಮೂಲಕ ಚಾಮುಂಡಿ ಬೆಟ್ಟ, ದೇವಸ್ಥಾನ ಸೇರಿ ಎಲ್ಲವೂ ಸರ್ಕಾರದ ಸ್ವತ್ತಾಗುತ್ತದೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿದಿನ ಮೊದಲ ಸಂಕಲ್ಪ ಪೂಜೆ ನಡೆಯುವುದು ರಾಜಮನೆತನದ ಹೆಸರಲ್ಲಿ. ಅದು ರದ್ಧಾಗುತ್ತದೆ. ಪ್ರಾಧಿಕಾರದ ಪದಾಧಿಕಾರಿಗಳ ಪಟ್ಟಿಯಲ್ಲಿ ರಾಜಮನೆತನದವರು ಇರುವುದಿಲ್ಲ. ಸ್ಥಳೀಯ ಸಚಿವ, ಶಾಸಕ, ಎಂಪಿ ಮತ್ತು ಅಧಿಕಾರಿಗಳು ಇರುತ್ತಾರೆ. ಅಭಿವೃದ್ಧಿ ಪ್ರಾಧಿಕಾರದ ನೌಕರರ ನೇಮಕ, ಅರ್ಚಕರ ನೇಮಕ ಎಲ್ಲವೂ ಪ್ರಾಧಿಕಾರದ್ದೇ ಹೊರತು, ರಾಜಮನೆತನದ ಪಾತ್ರ ಇರುವುದಿಲ್ಲ.
ಚಾಮುಂಡಿ ತಪ್ಪಲಿನಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕೆಂದರೂ.. ಅದು ಪ್ರಾಧಿಕಾರದ ತೀರ್ಮಾನ. ರಾಜಮನೆತನಕ್ಕೆ ಮಾಹಿತಿ ನೀಡುವ ಅಗತ್ಯವೂ ಇಲ್ಲ. ತುರ್ತು ಸಂದರ್ಭಗಳಲ್ಲಿ ಸಿಎಂ ಹುದ್ದೆಯಲ್ಲಿ ಇರುವವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಬೆಟ್ಟದಲ್ಲಿ ನಡೆಯುವ ಅಭಿವೃದ್ಧಿ, ರಸ್ತೆ, ಚರಂಡಿ ಸೇರಿದಂತೆ ಯಾವುದರಲ್ಲೂ ರಾಜಮನೆತನದ ಪಾತ್ರ ಅಥವಾ ಹೆಸರು ಇರುವುದಿಲ್ಲ.
ಪ್ರಮೋದಾದೇವಿ ಒಡೆಯರ್ ಹೇಳೋದೇನು..?
2001 ರ ಕೇಸ್ ನಮ್ಮಂತೆ ಆದ್ರೆ ನಾವೇ ದೇವಸ್ಥಾನ ನಿರ್ವಹಣೆ ಮಾಡುತ್ತೇವೆ. ಈ ಹಿಂದೆ ಪೂರ್ವಜರ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ. ಅದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗಲ್ಲ. ಚಾಮುಂಡಿ ಬೆಟ್ಟವನ್ನು ನಾವು ಉಳಿಸಿಕೊಳ್ಳಲು ಹೊರಟಿದ್ದೇವೆ. ಬೆಟ್ಟ ಬೆಟ್ಟದ ಹಾಗೆ ಇರಬೇಕು, ವಯನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ ಎನ್ನುವುದು ಪ್ರಮೋದಾದೇವಿ ಮಾತು. ಅಂದರೆ ಅಭಿವೃದ್ಧಿ ಹೆಸರಲ್ಲಿ ಬೆಟ್ಟವನ್ನು ಲೂಟಿ ಹೊಡೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ ರಾಜಮಾತೆ.
1950 ರಲ್ಲಿ ಖಾಸಗಿ ಪ್ರಾಪರ್ಟಿ ಪಟ್ಟಿ ಮಾಡಿದ್ದರು. ಸರ್ಕಾರಿ ಖರಾಬು ಇರಲಿ, ಏನೇ ಇರಲಿ. ಆವಾಗ ಲಿಸ್ಟ್‌ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೇನೂ ನಾವು ಇಟ್ಟುಕೊಂಡಿಲ್ಲ. ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನು ನಾವು ಕೇಳಿದ್ದೇವಾ ? ಸರ್ಕಾರಗಳು ಬದಲಾದಾಗ ಪರಿಸ್ಥಿತಿಗಳು ಕೂಡ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರೋದು ಸರಿಯಿಲ್ಲ. ಸರ್ಕಾರದ ಈ ನಡೆ ಸರಿಯಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ರಾಜಮಾತೆ ಪ್ರಮೋದಾದೇವಿ ಒಡೆಯುರ್.



