ಬಿಜೆಪಿ ಸರ್ಕಾರ ಇದ್ದಾಗ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾನೂನು ಹಾಗೂ ಮತಾಂತರ ನಿಷೇಧ ಕಾನೂನು, ಎರಡನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಯೇ ಅಧಿಕಾರಕ್ಕೆ ಬಂದಿತ್ತು ಕಾಂಗ್ರೆಸ್. ರಾಜ್ಯ ಸರ್ಕಾರ ರಚನೆಯಾದ ನಂತರ ರಾಜ್ಯದ ಪ್ರಭಾವಿ ಸಚಿವರು ಈ ಕುರಿತು ಹೇಳಿಕೆ ನೀಡಿದ್ದರು. ಪರಮೇಶ್ವರ್, ಜಾರ್ಜ್, ಪ್ರಿಯಾಂಕ್ ಖರ್ಗೆ, ವೆಂಕಟೇಶ್.. ಮೊದಲಾದವರು ಈ ಕುರಿತು ಹೇಳಿಕೆಯನ್ನೂ ಕೊಟ್ಟಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದ ಅಧಿಕೃತ ಮಾಹಿತಿಯಲ್ಲಿ ಇಂತಹ ಚಿಂತನೆಯೇ ಇಲ್ಲ ಎಂದು ಹೇಳಿದೆ. ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ರವಿಕುಮಾರ್ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಈ ಉತ್ತರ ನೀಡಿದೆ.
ಕಾಯ್ದೆ ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಇದೇ ಸಚಿವ ವೆಂಕಟೇಶ್ ಈ ಹಿಂದೆ ಮೈಸೂರಿನಲ್ಲಿ ಎಮ್ಮೆ, ಕುರಿ ಕೊಲ್ಲಬಹುದಾದರೆ ಗೋವುಗಳನ್ನು ಯಾಕೆ ಕೊಲ್ಲಬಾರದು ಹೇಳಿಕೆ ನೀಡಿದ್ದರು. ಇದನ್ನು ಪ್ರಸ್ತಾಪ ಮಾಡಿದ ರವಿಕುಮಾರ್, ಕಾಯ್ದೆಯನ್ನು ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಚಿವ ಕೆ.ವೆಂಕಟೇಶ್ ಅವರು ಮೈಸೂರಿನಲ್ಲಿ ಸಹಜವಾಗಿ ಆ ರೀತಿ ಹೇಳಿರುವುದು ನಿಜ. ಸದಸ್ಯರು ಕೇಳಿರುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಲಾಗಿದೆ ಎಂದಷ್ಟೇ ಹೇಳಿದರು. ಈ ಮಾತಿಗೆ ತೃಪ್ತಿಯಾಗದ ರವಿಕುಮಾರ್, ಇತ್ತೀಚೆಗೆ ನಡೆದ ಹಬ್ಬವೊಂದರಲ್ಲಿ ಸಾವಿರಾರು ಗೋವುಗಳನ್ನು ಕೊಲ್ಲಲಾಗಿದೆ. ಆದರೂ ಕಾಯ್ದೆ ಪ್ರಕಾರ ಯಾಕೆ ಅಂತವರ ವಿರುದ್ಧ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಕಾಯ್ದೆ ಅನುಷ್ಠಾನ ಮಾಡದಿದ್ದರೆ ವಾಪಸ್ ಪಡೆಯುತ್ತೇವೆ ಎಂದಾದರೂ ಹೇಳಬೇಕು. ಸಚಿವರ ಉತ್ತರದಲ್ಲಿ ದ್ವಂದ್ವವಿದೆ ಎಂದು ಸಭಾಪತಿಯವರ ಪೀಠದ ಮುಂದೆ ಆಗಮಿಸಿ ಧರಣಿ ಆರಂಭಿಸಿದರು. ಇದಕ್ಕೆ ಬಿಜೆಪಿಯ ಉಳಿದ ಸದಸ್ಯರು ಬೆಂಬಲಿಸಿ ಮುಂದೆ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲು ಅದಕ್ಕೆ ಬಿಜೆಪಿಯವರು ಉತ್ತರ ನೀಡಿ ಎಂದು ಚುಚ್ಚಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮತಕ್ಕಾಗಿ ಗೋವುಗಳ ಹೆಸರಿನಲ್ಲಿ ಬಿಜೆಪಿ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆ. ಅಮೂಲ್ಯವಾದ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಂದಹಾಗೆ ರಾಜ್ಯ ಸರ್ಕಾರ ಈಗಿರುವ ಕಾಯ್ದೆ ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದೇನೋ ಹೇಳಿದೆ. ಆದರೆ ಮೂಲಗಳ ಪ್ರಕಾರ ಈಗ ಈ ಕಾಯ್ದೆ ರದ್ದು ಮಾಡುವುದಿಲ್ಲ. ಲೋಕಸಭೆ ಚುನಾವಣೆ ನಂತರ ಈ ಕಾಯ್ದೆಗಳ ರದ್ದತಿಯ ವಿಚಾರ ಕೈಗೆತ್ತಿಕೊಳ್ಳೋಕೆ ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ. ಸ್ವತಃ ಡಿಕೆ ಶಿವಕುಮಾರ್ ಇಂತಹ ತೀರ್ಮಾನಕ್ಕೆ ಕಾರಣ ಎನ್ನಲಾಗಿದೆ. ಹಾಗೇನಾದರೂ ಮಾಡಿದರೆ ನಾವೇ ಬಿಜೆಪಿಯವರ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಸದ್ಯಕ್ಕೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಲೋಕಸಭೆ ಚುನಾವಣೆ ಮುಗಿಯುವವರೆಗೆ ಬೇಡ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಸದ್ಯಕ್ಕೆ ವಿಷಯ ಸೈಡಿಗೆ ಹೋಗಿದೆ.



