ಪಠ್ಯ ಪುಸ್ತಕಗಳಲ್ಲಿ ʻಕೈʼ ಆಡಿಸುವ ಸಂಪ್ರದಾಯವನ್ನು ರಾಜ್ಯ ಸರ್ಕಾರ ಮುಂದುವರೆಸಿದೆ. ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ.. ಎಂದು 2013ರ ಅವಧಿಯಲ್ಲಿ ವಾದ ಮಾಡುತ್ತಿತ್ತು ರಾಜ್ಯ ಸರ್ಕಾರ. ಈಗ ವೀರಶೈವ ಪದವನ್ನು ಪಠ್ಯ ಪುಸ್ತಕದಿಂದ ಕೈಬಿಟ್ಟಿದೆಯಂತೆ.
ರಾಜ್ಯ ಪಠ್ಯಕ್ರಮದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ವೀರಶೈವ ಪದವನ್ನು ಉದ್ದೇಶ ಪೂರ್ವಕವಾಗಿ ಕೈಬಿಟ್ಟಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದೆ.
ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಮಹಾಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಈ ರೀತಿಯ ತಪ್ಪುಗಳನ್ನು ಸರಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಪ್ರಧಾನ ಸಮಗ್ರ ವಚನ ಸಂಪುಟದಲ್ಲಿ ಬಸವಣ್ಣ ಸೇರಿದಂತೆ 30ಕ್ಕೂ ಹೆಚ್ಚು ಶರಣರು ವೀರಶೈವ ಪದ ಬಳಸಿದ್ದಾರೆ. 142 ವಚನಗಳಲ್ಲಿ 221 ಬಾರಿ ವೀರಶೈವ ಪದದ ಬಳಕೆ ಇದೆ. ಲಿಂಗಾಯತ ಪದ ಬಳಕೆ ಮಾಡಿರುವುದು 10 ವಚನಗಳಲ್ಲಿ 21 ಕಡೆ ಮಾತ್ರ. ಬಸವಣ್ಣನವರ ಒಂದು ವಚನದಲ್ಲಿಯೂ ಲಿಂಗಾಯತ ಪದದ ಬಳಕೆ ಇಲ್ಲ. ಒಂದು ವಚನದಲ್ಲಿ ಬಸವಣ್ಣನವರೇ ತಾವು ನಿಜ ವೀರಶೈವ (ವಚನ ಸಂಖ್ಯೆ 1092) ಎಂದು ಹೇಳಿದ್ದಾರೆ. ಹೀಗಿದ್ದರೂ ವೀರಶೈವ ಪದವನ್ನೇ ತೆಗೆದು ಹಾಕಿರುವುದು ಒಪ್ಪುವ ಕ್ರಮ ಅಲ್ಲ ಎನ್ನುವುದು ಸ್ವಾಮೀಜಿಗಳ ವಾದ.


ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗಬೇಕೆಂದು ಪ್ರತಿಪಾಸಿದ್ದಾರೆಯೇ ಹೊರತು, ತಮಗೆ ಗುರುವಿಲ್ಲ ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ. ಅವರು ಅವರಲ್ಲಿರುವ ಗುರುವಿನ ಬಗೆಗಿನ ಗೌರವವನ್ನು ತಮ್ಮ ಅನೇಕ ವಚನಗಳಲ್ಲಿ ನಿರೂಪಿಸಿದ್ದಾರೆ. ತಾವು ಗುರುವಿನಿಂದ ಇಷ್ಟಲಿಂಗವನ್ನು ಪಡೆದಿದ್ದೇನೆ ಎಂದು ಅನೇಕ ವಚನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ವಚನಗಳ ಉದಾಹರಣೆಗಳಿವೆ. ಅವುಗಳಲ್ಲಿ ಗುರುವಿನ ಮತ್ತು ಗುರುಗಳಿಂದ ಇಷ್ಟಲಿಂಗ ಪಡೆದ ಉಲ್ಲೇಖಗಳಿವೆ. ಆದ್ದರಿಂದ ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗ ಪೂಜೆಯಿತ್ತು ಎನ್ನುವುದಕ್ಕೆ ಆಧಾರಗಳಿವೆ. ಆದ್ದರಿಂದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ನಿರ್ದೇಶನ ನೀಡಬೇಕು. ಇತಿಹಾಸಕ್ಕೆ ಹಾಗೂ ನಡೆದು ಬಂದ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬಬಾರದು ಎಂದು ನಿರ್ದೇಶನ ನೀಡಬೇಕು. ಒಂದು ವೇಳೆ 9ನೇ ತರಗತಿಯ ಪಠ್ಯದಲ್ಲಿ ಆದ ದೋಷಗಳನ್ನು ಸರಿಪಡಿಸದಿದ್ದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಪ್ರಲ್ಹಾದ್ ಜೋಷಿ, ಕೇಂದ್ರ ಸಚಿವ : ಸಿದ್ದರಾಮಯ್ಯ ಸರ್ಕಾರ ಮತ್ತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಮೊದಲು ಪಠ್ಯದಲ್ಲಿ ವೀರಶೈವ ಲಿಂಗಾಯತ ಅಂತಾ ಇತ್ತು. ಈಗ ಪಠ್ಯದಿಂದ ವೀರಶೈವ ಪದ ತೆಗೆದಿದ್ದಾರೆ. ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ.
ಬಸವರಾಜ ಬೊಮ್ಮಾಯಿ, ಸಂಸದರು :
ನಾನು ಗಮನಿಸಿಲ್ಲ, ಹಾಗೇನಾದ್ರೂ ಆಗಿದ್ರೆ ಸರಿಪಡಿಸಿ.



