ಆರ್. ಅಶೋಕ್. ವಿಧಾನಸಭೆ ವಿರೋಧ ಪಕ್ಷದ ನಾಯಕ. ಛಲವಾದಿ ನಾರಾಯಣ ಸ್ವಾಮಿ ಅವರು ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು. ಆದರೆ, ಈ ಇಬ್ಬರಿಗೂ ರಾಜ್ಯ ಸರ್ಕಾರ ಇದುವರೆಗೆ ಸರಕಾರಿ ನಿವಾಸವನ್ನೂ ಕೊಟ್ಟಿಲ್ಲ. ರಕ್ಷಣೆಯನ್ನೂ ಕೊಟ್ಟಿಲ್ಲ. ಕಾನೂನು, ಸಂವಿಧಾನದ ಪ್ರಕಾರ ಕೊಡಬೇಕಾದ ಸವಲತ್ತುಗಳನ್ನು ಕೊಡುವುದಕ್ಕೆ ಅಡ್ಡಿಯಾದರೂ ಏನು ಎಂದರೆ.. ಬಂದಿರುವ ಉತ್ತರಗಳು ವಿಚಿತ್ರವಾಗಿಯೇ ಇವೆ. ಇದಕ್ಕೆ ಕಾರಣ ಡಿಕೆ ಶಿವಕುಮಾರ್ ಅವರೋ.. ಪ್ರಿಯಾಂಕ್ ಖರ್ಗೆ ಅವರೋ.. ಅಥವಾ ಖುದ್ದು ಸಿದ್ದರಾಮಯ್ಯ ಅವರೋ..
ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಹಾಗೂ ವಿಧಾನಪರಿಷತ್ ವಿಪಕ್ಷದ ನಾಯಕರಿಗೆ ಸರ್ಕಾರಿ ಬಂಗಲೆ ನೀಡಬೇಕು. ಏಕೆಂದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಂದರೆ ಅದು ಶ್ಯಾಡೋ ಸಿಎಂ ಇದ್ದಂತೆ. ಆದೇಶ ನೀಡುವ ಅಧಿಕಾರ ಇಲ್ಲದೇ ಹೋದರೂ, ಮಾಹಿತಿ ಪಡೆಯುವ ಅಧಿಕಾರವಂತೂ ಇರುತ್ತದೆ. ಸಾಮಾನ್ಯವಾಗಿ ಯಾವುದೇ ಅಧಿಕಾರಿ ಶ್ಯಾಡೋ ಸಿಎಂ ಸೂಚನೆಗಳನ್ನು ಧಿಕ್ಕರಿಸುವುದಿಲ್ಲ. ವಿರೋಧಪಕ್ಷದ ನಾಯಕರೂ ಅಷ್ಟೆ, ತಮ್ಮ ವ್ಯಾಪ್ತಿಗೆ ಬರುವ ಅಥವಾ ಬರಬಹುದಾದ ಅಧಿಕಾರಗಳನ್ನು ಮಾತ್ರವೇ ಚಲಾಯಿಸುತ್ತಾರೆ. ಹೊಸ ಯೋಜನೆ, ಕಾಮಗಾರಿ, ಹಣ ಬಿಡುಗಡೆ ಮೊದಲಾದ ಆದೇಶ ನೀಡುವ ಅಧಿಕಾರ ವಿರೋಧಪಕ್ಷದ ನಾಯಕರಿಗೆ ಇರುವುದಿಲ್ಲ. ಉಳಿದಂತೆ ಕಾನೂನು ಸುವ್ಯವಸ್ಥೆ, ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಿಗೂ ಅಷ್ಟೇ. ಆದರೆ.. . ಈ ಬಗ್ಗೆ ಐದಾರು ಬಾರಿ ಪತ್ರವನ್ನು ಬರೆದರೂ ಸರ್ಕಾರ ಸ್ಪಂದಿಸಿಲ್ಲ.
ಡಿಕೆ ಶಿವಕುಮಾರ್ ಬಿಟ್ಟು ಕೊಡದ ಬಂಗಲೆ :
ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕುಮಾರ ಕೃಪ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ವಿರೋಧ ಪಕ್ಷದ ನಾಯಕರಿಗೆ ಕೊಡಲಾಗಿತ್ತು. ಆದರೆ, ಅದು ಅದೃಷ್ಟದ ಮನೆ ಎಂಬ ಕಾರಣಕ್ಕೆ ಆ ಬಂಗಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಉಳಿದುಕೊಂಡಿದ್ದಾರೆ. ಅದೇ ಬಂಗಲೆಯಲ್ಲಿದ್ದರೆ ಸಿಎಂ ಆಗಬಹುದು ಎಂಬುದು ಅವರ ನಿರೀಕ್ಷೆ.
ಇನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಬಿಕೆ ಹರಿಪ್ರಸಾದ್ ಅವರಿಗೂ ಕೂಡಾ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಬಂಗಲೆ ಕೊಡಲಾಗಿತ್ತು. ಅವರೂ ಅಷ್ಟೇ, ಈಗಲೂ ಬಂಗಲೆ ತೆರವು ಮಾಡಿಲ್ಲ.
ಈ ಬಗ್ಗೆ ಸ್ವತಃ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿ “ನಾವು ಐದಾರು ಬಾರಿ ಈ ಸಂಬಂಧಿಸಿದಂತೆ ಪತ್ರವನ್ನು ಬರೆದಿದ್ದೇವೆ. ಹಾಗಿದ್ದರೂ ಸರ್ಕಾರ ಸ್ಪಂದನೆ ಮಾಡಿಲ್ಲ” ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಪಾತ್ರ ಏನು..?
ಸಿದ್ದರಾಮಯ್ಯನವರು ವಿಪಕ್ಷ ನಾಯಕ ಆಗಿದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು. ರಕ್ಷಣಾ ವ್ಯವಸ್ಥೆ ಮಾಡಿಸಿಕೊಂಡಿದ್ದರು. ಆದರೆ ನನ್ನ ಬೆಂಗಾವಲು ರಕ್ಷಣೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ನನಗೇನಾದರೂ ಆದರೆ, ರಾಜ್ಯ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬವೇ ಹೊಣೆ ಎಂದು ಕಿಡಿ ಕಾರಿದ್ದರು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ. ಛಲವಾದಿ ನಾರಾಯಣ ಸ್ವಾಮಿ, ಒಂದು ಕಾಲಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಾಗಿದ್ದವರು. ಆದರೆ ಯಾವುದೇ ಬೆಳವಣಿಗೆಯ ಅವಕಾಶ ಕಾಣದ ಹಿನ್ನೆಲೆ ಬಿಜೆಪಿಗೆ ಬಂದವರು. ಬಹಿರಂಗ ಹೇಳಿಕೆ ಕೊಟ್ಟ ಮೇಲೆ ಬೆಂಗಾವಲು ಪಡೆಯನ್ನು ಹಾಕಲಾಗಿದೆ. ಆದರೆ, ಅದು ರೆಗ್ಯುಲರ್ ಆಗಿ ಇರಲ್ಲ ಎನ್ನುವ ಆರೋಪವೂ ಇದೆ.
ಸದ್ಯಕ್ಕೆ ಇಬ್ಬರಿಗೂ ಸರ್ಕಾರಿ ಕಾರು, ಬೆಂಗಾವಲು ವಾಹನ ನೀಡಲಾಗಿದೆ. ಸರ್ಕಾರಿ ನಿವಾಸವನ್ನು ಮಾತ್ರ ಇಬ್ಬರಿಗೂ ನೀಡಿಲ್ಲ. ಸರ್ಕಾರ ಎರಡೂವರೆ ವರ್ಷ ಪೂರೈಸಿದೆ.



