ಇತ್ತೀಚೆಗೆ ಒಂದು ಪತ್ರ ವೈರಲ್ ಆಗಿತ್ತು. ಹೆಬ್ಬುಲಿ ಕಟಿಂಗ್ (Hebbuli cutting) ಮಾಡಬೇಡಿ ಎಂದು ಪ್ರಿನ್ಸಿಪಾಲರು ಸಲೂನ್ ಮಾಲೀಕರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮಕ್ಕಳಿಗೆ ಹೇಳೀ ಹೇಳಿ ಬೇಸತ್ತು ಹೋಗಿ, ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಕೇಳಿಕೊಂಡಿದ್ದರು.
ಕಿಚ್ಚ ಸುದೀಪ್ (Kichcha Sudeep) ಅವರ ಹೆಬ್ಬುಲಿ ರಿಲೀಸ್ ಆಗಿ ಎಷ್ಟೋ ವರ್ಷಗಳೇ ಆಗಿ ಹೋಗಿವೆ. ಆದರೆ ಅದಕ್ಕೆ ಫೈಟ್ ಕೊಡುವಂತ ಡಿಫರೆಂಟ್ ಹೇರ್ ಸ್ಟೈಲ್ ಇನ್ನೂ ಬಂದಿಲ್ಲ. ಹೀಗಾಗಿಯೇ ಇವತ್ತಿಗೂ ಹೆಬ್ಬುಲಿ ಸ್ಟೈಲ್`ಗೆ (Hebbuli cutting) ಡಿಮ್ಯಾಂಡ್ ಇದೆ. ಅದರಲ್ಲಿಯೂ ಮಕ್ಕಳು ಫಿದಾ ಆಗಿ ಹೋಗಿದ್ದರು. ಕಿಚ್ಚನ ಪ್ರತಿಯೊಂದು ಸಿನಿಮಾವನ್ನೂ ಫಾಲೋ ಮಾಡುತ್ತಾರೆ. ಅದರಲ್ಲೂ ಕಿಚ್ಚನ ಕಾಸ್ಟ್ಯೂಮ್, ಹೇರ್ಸ್ಟೈಲ್ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಆರು ವರ್ಷಗಳಾಗಿದ್ದರೂ, ಹೆಬ್ಬುಲಿ ಹೇರ್ ಸ್ಟೈಲ್ (Hebbuli cutting) ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಇಂದಿಗೂ ಮಕ್ಕಳ ಫೇವರಿಟ್ ಹೇರ್ಸ್ಟೈಲ್ ಇದು. ಆದರೆ, ಇದೇ ವಿಚಾರವಾಗಿ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಸಲೂನ್ ಮಾಲೀಕನಿಗೆ ಈ ಹೇರ್ ಸ್ಟೈಲ್ ಮಾಡದೇ ಇರುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಸಲೂನ್ ಮಾಲೀಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಹೇರ್ ಕಟ್ (Hebbuli Style) ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.
ಶಾಲೆಯ ಗಂಡು ಮಕ್ಕಳು ‘ಹೆಬ್ಬುಲಿ’ಯಂತಹ ಇತರೆ ತರಹದ ಹೇರ್ ಕಟಿಂಗ್ (ತಲೆಯ ಒಂದು ಬದಿಗೆ ಕೂದಲು ಬಿಟ್ಟು, ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು) ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೆ ಹಾಗೂ ಶೈಕ್ಷಣಿಕ ಚುಟುವಟಿಗೆಗಳಿಗೆ ಹೆಚ್ಚು ಮಹತ್ವ ನೀಡದೇ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟಿಂಗ್ (Hebbuli Style) ಮಾಡಲು ನಿಮಗ್ಎ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಲು ತಮ್ಮಲ್ಲಿ ಕೋರುತ್ತೇನೆ. ಎಂದು ಹೆಡ್ ಮಾಸ್ಟರ್ ಶಿವಾಜಿ ನಾಯಕ ಪತ್ರ ಬರೆದಿದ್ದಾರೆ. ಇದೇ ಈಗ ವೈರಲ್ ಆಗಿದೆ.
ವಿಶೇಷವೆಂದರೆ ಸಲೂನ್ (Saloon) ಮಾಲೀಕರು ಕೂಡಾ ಪತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬುಲಿ ಸ್ಟೈಲ್ (Hebbuli Style) ಕಟಿಂಗ್ ಕೇಳಿಕೊಂಡು ಬರುವ ಸ್ಕೂಲ್ ಮಕ್ಕಳಿಗೆ ಆ ರೀತಿಯ ಕಟಿಂಗ್ ಬೇಡ. ನಿಮ್ಮ ಮೇಷ್ಟು ಹೇಳಿದ್ದಾರೆ ಎಂದು ಮನವೊಲಿಸುತ್ತಿದ್ದಾರಂತೆ. ಶಿಕ್ಷಣ ಮುಖ್ಯ, ಸ್ಟೈಲ್ ಅಲ್ಲ, ದೊಡ್ಡವರಾದ ಮೇಲೆ ಮಾಡಿಕೊಳ್ಳುವಿರಂತೆ ಎಂದು ಮಕ್ಕಳ ಹಾಗೂ ಪೋಷಕರಿಗೆ ಬುದ್ದಿ ಹೇಳ್ತಿದ್ದಾರಂತೆ.ಅಲ್ಲಿಗೆ ಮೇಷ್ಟು ಪಾಠ ಸಕ್ಸಸ್ ಆಗಿರುವಂತೆ ಕಾಣುತ್ತಿದೆ.



