ಡಯಾಬಿಟೀಸ್ ರೋಗಿಗಳಿಗೆ ಕಾಡುವ ದೊಡ್ಡ ಭಯ ಇನ್ಸುಲಿನ್. ಇನ್ಸುಲಿನ್ ತೆಗೆದುಕೊಳ್ಳುವ ಹಂತಕ್ಕೆ ಬಂದಿದೆ ಎಂದರೆ, ದೇಹದಲ್ಲಿ ಡಯಾಬಿಟಿಸ್ ವಿರುದ್ಧ ಹೋರಾಡುವ ಕಣಗಳ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಆದರೆ, ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಿದೆ. ಈಗ ಹೊಸ ಇನ್ಸುಲಿನ್ ಅಭಿವೃದ್ದಿಯಾಗಿದ್ದು, ಈ ಇನ್ಸುಲಿನ್ ತೆಗೆದುಕೊಳ್ಳೋದಕ್ಕೆ ಸೂಜಿ, ಸಿರಿಂಜ್ ಬೇಕಿಲ್ಲ. ಇಂಜೆಕ್ಷನ್ ತೆಗೆದುಕೊಳ್ಳುವ ಅಗತ್ಯ ಇಲ್ಲ.
ಅತ್ಯಾಧುನಿಕ, ಶರವೇಗದಲ್ಲಿ ಕಾರ್ಯನಿರ್ವಹಿಸುವ ಚುಚ್ಚುಮದ್ದು ರಹಿತ ಇನ್ಹೇಲ್ ಪೌಡರ್ ಮಾದರಿಯ ಇನ್ಸುಲಿನ್ ‘ಅಫ್ರೆಝಾ’ವನ್ನು ಡೆವಲಪ್ ಮಾಡಲಾಗಿದೆ. ಅಸ್ತಮಾದಂತಹ ಉಸಿರಾಟದ ಸಮಸ್ಯೆ ಇರುವವರು ಇನ್ ಹೇಲರ್ ತೆಗೆದುಕೊಳ್ಳುತ್ತಾರಲ್ಲ.. ಹಾಗೆ ಇನ್ಸುಲಿನ್ ಕೂಡಾ ಬಾಯಿಯ ಮೂಲಕ ತೆಗೆದುಕೊಳ್ಳುವ ಹೊಸ ಮಾದರಿ ಅಭಿವೃದ್ಧಿಯಾಗಿದೆ.
15ರಿಂದ 20 ನಿಮಿಷ ಸಾಕು..!
ಈ ಔಷಧಿ ತೆಗೆದುಕೊಂಡರೆ 15ರಿಂದ 20 ನಿಮಿಷದಲ್ಲಿ ರಕ್ತದ ಗ್ಲುಕೋಸ್ ಅಂಶವನ್ನು ನಿಯಂತ್ರಣಕ್ಕೆ ಬರುತ್ತದಂತೆ. ಮಧುಮೇಹಿಗಳು ಪುಡಿಯ ರೂಪದಲ್ಲಿನ ʻಅಫ್ರೆಝಾ ಇನ್ಸುಲಿನ್ʼನ್ನು ಬಾಯಿಗೆ ಹಾಕಿಕೊಳ್ಳಬಹುದು. ಅಥವಾ ಉಸಿರಿನ ಮುಖಾಂತರ ಎಳೆದುಕೊಳ್ಳಬಹುದು. ಟೈಪ್ 1 ಇನ್ಸುಲಿನ್ ಅವಲಂಬಿತ ಮಧುಮೇಹಿಗಳು ಮತ್ತು ಟೈಪ್ 2 ಇನ್ಸುಲಿನ್ ಅವಲಂಬಿತವಲ್ಲದ ಮಧುಮೇಹಿಗಳೂ ಬಳಸಬಹುದಾದ ಸರಳ ವಿಧಾನವಾಗಿ ಅಫ್ರೆಝಾವು ವೈದ್ಯಲೋಕದಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದೆ.
ಅಫ್ರೆಜಾ ಕೆಲಸ ಮಾಡುವುದು ಹೇಗೆ..?
ಅಫ್ರೆಝಾದಲ್ಲಿ ಬಳಸಲಾಗುವ ಸೂಕ್ಷ್ಮ ಕಣವು ಎರಡು ಪ್ರಮುಖ ಘಟಕಗಳನ್ನು ಒಳಗೊಂಡಿದೆ. ಈ ಸೂಕ್ಷ್ಮ ಕಣಗಳನ್ನು ಶ್ವಾಸಕೋಶಗಳು ಆಳವಾಗಿ ಒಳಗೆಳೆದುಕೊಂಡಾಗ, ಅಲ್ಲಿಂದ ಅವು ತ್ವರಿತವಾಗಿ ಹೀರಲ್ಪಡುತ್ತವೆ. ವಾಸ್ತವವಾಗಿ, ಅಫ್ರೆಝಾ ಶ್ವಾಸಕೋಶದ ಮೂಲಕ ಹಾದುಹೋಗುವಾಗ, ಇನ್ಸುಲಿನ್ 1 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ. 15 ನಿಮಿಷಗಳಲ್ಲೇ ರಕ್ತದ ಗ್ಲುಕೋಸ್ ಅಂಶವನ್ನು ನಿಯಂತ್ರಣಕ್ಕೆ ತರುತ್ತದೆ.
ಆದರೆ ಈ ಅಫ್ರೆಜಾ ಹೀಲರ್ ಅನ್ನು ಶ್ವಾಸಕೋಶದ ಸೋಂಕಿರುವ ರೋಗಿಗಳು, ಧೂಮಪಾನಿಗಳು ಎಚ್ಚರಿಕೆಯಿಂದ ಬಳಸಬೇಕು. ಅಲ್ಲದೆ ಈ ಔಷಧ ಇನ್ನಷ್ಟು ಮತ್ತಷ್ಟು ಸುಧಾರಣೆಯಾಗಬೇಕು.
ಟೈಪ್ 01 ಮಧುಮೇಹಿಗಳು ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹ ಬಂದ ನಂತರ ಸರಿಯಾಗಿ ಆರೈಕೆ ಮಾಡಿಕೊಳ್ಳದಿದ್ದರೆ, ಸಕ್ಕರೆ ಪ್ರಮಾಣ ಹೆಚ್ಚುವುದಕ್ಕೆ ಬಿಟ್ಟರೆ ಅದು ಟೈಪ್ 02 ಇಂದ ಟೈಪ್ 01ಗೆ ಚೇಂಜ್ ಆಗುತ್ತದೆ. ಟೈಪ್ 2 , ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದೆ ಇರುವ ಸ್ಥಿತಿ. ದೇಹದಲ್ಲಿ ಇರುವ ರೋಗ ನಿರೋಧಕ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಗಳ ಮೇಲೆ ದಾಳಿ ಮಾಡಿ ನಾಶಪಡಿಸುತ್ತದೆ. ಇನ್ಸುಲಿನ್ ಶಕ್ತಿ ವೀಕ್ ಆಗುತ್ತಾ ಹೋದಂತೆ, ಗ್ಲುಕೋಸ್.. ರಕ್ತಕ್ಕೆ ಎಂಟ್ರಿ ಕೊಡುತ್ತದೆಯೇ ಹೊರತು, ಆ ಗ್ಲುಕೋಸ್ ಜೀವಕೋಶಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅದು ರಕ್ತದಲ್ಲಿ ಸಂಗ್ರಹವಾಗುತ್ತದೆ. ನಂತರ ಜೀವಕೋಶಗಳಿಗೆ ಸಾಕಷ್ಟು ಪೋಷಣೆ ಸಿಗುವುದಿಲ್ಲ. ಇದು ಅಧಿಕ ರಕ್ತದ ಸಕ್ಕರೆಗೆ ಕಾರಣವಾಗುತ್ತದೆ.
ದೇಹವು ಇನ್ಸುಲಿನನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಟೈಪ್ 2 ಮಧುಮೇಹ ಬರುತ್ತದೆ. ಇದನ್ನು ಒಂದು ಕಾಲದಲ್ಲಿ ವಯಸ್ಕರ ಮಧುಮೇಹ ಎಂದು ಕರೆಯಲಾಗುತ್ತಿತ್ತು.
ಇನ್ಸುಲಿನ್ ಹುಟ್ಟಿದ್ದು ಸುಮಾರು 100 ವರ್ಷಗಳ ಹಿಂದೆ.. ಅದಾದ ಮೇಲೆ ಕಾಲಕಾಲಕ್ಕೆ ತಕ್ಕಂತೆ ಇನ್ಸುಲಿನ್ ನೀಡುವ ಪ್ರಮಾಣ ಬದಲಾಗುತ್ತಲೇ ಬಂದಿದೆ. 1921ರಲ್ಲಿ ಟೊರಾಂಟೊ ವಿಶ್ವವಿದ್ಯಾಲಯದ ಫ್ರೆಡೆರಿಕ್ ಬ್ಯಾಂಟಿಂಗ್ ಮತ್ತು ಚಾರ್ಲ್ಸ್ ಬೆಸ್ವ್ ನೇತೃತ್ವದ ಕೆನಡಾದ ಸಂಶೋಧಕರ ತಂಡವು ಇನ್ಸುಲಿನ್ ಕಂಡುಹಿಡಿಯಿತು. 1922ರಲ್ಲಿ ಲಿಯೊನಾರ್ಡ್ ಥಾಂಪ್ಸನ್ ಎಂಬ ಮಧುಮೇಹಿ ರೋಗಿಗೆ ಪ್ರಾಯೋಗಿಕವಾಗಿ ಇನ್ಸುಲಿನ್ ಬಳಸಲಾಯಿತು. ಆದರೆ, ವೈದ್ಯಕೀಯ ಉದ್ದೇಶಗಳಿಗೆ ಬಳಸಲು 1982ರಲ್ಲಿಅನುಮೋದನೆ ಸಿಕ್ಕಿತು.
ಇಷ್ಟೆಲ್ಲ ಆಗಿ ಬದಲಾವಣೆಗಳಾಗಿದ್ದರೂ.. ಒಂದು ಸಮಸ್ಯೆ ಇದ್ದೇ ಇತ್ತು. ಹಲವು ಮಧುಮೇಹಿಗಳಿಗೆ ಕೆಲವು ಅಡ್ಡಪರಿಣಾಮಗಳೂ ಎದುರಾಗುತ್ತಿವೆ. ಮುಖ್ಯವಾಗಿ ಚುಚ್ಚಿದ ಜಾಗದಲ್ಲಿ ತುರಿಕೆ, ಬೊಕ್ಕೆ ಉಂಟಾಗಬಹುದು. ಉಸಿರಿನಿಂದ ಎಳೆದುಕೊಳ್ಳುವ ಅಫ್ರೆಝಾ ಇನ್ಸುಲಿನ್ ಬಳಕೆ ಇದನ್ನೆಲ್ಲ ತಪ್ಪಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚುಚ್ಚು ಮದ್ದು ರಹಿತ ಪುಡಿ ರೂಪದಲ್ಲಿನ ಈ ಇನ್ಸುಲಿನನ್ನು ಅಮೆರಿಕ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ ಬಳಕೆಯಲ್ಲಿದ್ದು, ಪ್ರಸ್ತುತ ಭಾರತದಲ್ಲಿಇದರ ಬಳಕೆಗೆ ಅನುಮತಿ ನೀಡಲಾಗಿದೆ. ಭಾರತದ ಮೊದಲ ಅಫ್ರೆಝಾವನ್ನು ಸಿಪ್ಲಾ ಔಷಧ ಸಂಸ್ಥೆ ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಿದೆ.



