ಚಿನ್ನ. ಬಂಗಾರ. ಆ ಹೆಸರು ಕೇಳಿದ್ರೇನೇ ಖುಷಿಯಾಗೋ ಜನ ಇದ್ದಾರೆ. ಆದರೆ.. ರೇಟು ಕೇಳಿದ್ರೆ.. ಅಯ್ಯೋ ಬಿಡ್ರಿ.. ಇದೆಲ್ಲ ದುಡ್ಡಿದ್ದೋವ್ರಿಗೆ ಅನ್ನೋವ್ರಿಗೇನೂ ಕಡಿಮೆ ಇಲ್ಲ. ಅದರಲ್ಲೂ ಇತ್ತೀಚೆಗೆ ಒಂದೆರಡು ತಿಂಗಳಲ್ಲಿ ಚಿನ್ನದ ರೇಟು ಅದ್ಯಾವ ಪರಿ ಜಾಸ್ತಿ ಆಗಿತ್ತಂದ್ರೆ.. ಇನ್ನೊಂದೆರಡು ತಿಂಗಳಲ್ಲಿ ಚಿನ್ನ 10 ಗ್ರಾಂಗೆ ಒಂದು ಲಕ್ಷ ಆಗುತ್ತೆ ಕಣ್ರಿ ಅಂತಾ ಭವಿಷ್ಯ ನುಡಿದಿದ್ದೋವ್ರಿಗೇನೂ ಕಡಿಮೆ ಇರಲಿಲ್ಲ.
92 ಸಾವಿರ ಗಡಿ ದಾಟಿದ್ದ ಚಿನ್ನದ ಬೆಲೆ ಇದ್ದಕ್ಕಿದ್ದಂತೆ ಕುಸಿಯೋಕೆ ಶುರುವಾಗಿದೆ. ಅಕ್ಷಯ ತೃತೀಯಕ್ಕೂ ಮೊದಲೇ ಶುಭ ಸುದ್ದಿ ಸಿಗುತ್ತಿದೆ. ಹೌದು, ಚಿನ್ನದ ಬೆಲೆ ಕೇಳಿದ್ರೇನೇ ಶಾಕ್ ಆಗ್ತಿದ್ದ ಜನರಿಗೆ, ಅಕ್ಷಯ ತೃತೀಯಕ್ಕೂ ಮೊದಲೇ ಶುಭ ಸುದ್ದಿ ಸಿಗ್ತಾ ಇದೆ. ಅಕ್ಷಯ ತೃತೀಯ ಇರೋದು ಏಪ್ರಿಲ್ 30ಕ್ಕೆ. ಅಂದು ಬಸವ ಜಯಂತಿಯೂ ಹೌದು. ಆವತ್ತು ಚಿನ್ನ ಖರೀದಿ ಮಾಡಿದ್ರೆ ಒಳ್ಳೇದು ಅನ್ನೋ ನಂಬಿಕೆ, ಜನಗಳಲ್ಲಿದೆ. ಆದರೆ.. ಇಷ್ಟೊಂದು ರೇಟಿನಲ್ಲಿ ಏನಪ್ಪಾ ಮಾಡೋದು ಅಂತಾ ಇದ್ದೋವ್ರಿಗೆ ಚಿನ್ನದ ಬೆಲೆ ಕಡಿಮೆ ಆಗ್ತಾ ಇದೆ.
22 ಕ್ಯಾರೆಟ್ ಚಿನ್ನದ ದರ
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಇಳಿಕೆ ಆಗಿದೆ. ಚಿನ್ನದ ಬೆಲೆ 8,225 ರೂಪಾಯಿ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಕಡಿಮೆ ಆಗಿದ್ದು, ಬೆಲೆ 82,250 ಕ್ಕೆಇಳಿದಿದೆ.
24 ಕ್ಯಾರೆಟ್ ಚಿನ್ನದ ಬೆಲೆ
ಇನ್ನು 24 ಕ್ಯಾರೆಟ್ ಚಿನ್ನದ ದರದಲ್ಲಿ 65 ರೂಪಾಯಿ ಇಳಿಕೆ ಆಗಿದ್ದು, ಚಿನ್ನದ ದರ 8973 ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂಪಾಯಿ ಇಳಿಕೆ ಆಗಿದ್ದು ,89,730 ರೂ ಆಗಿದೆ.
ಮಾರ್ಚ್ 1 ನೇ ತಾರೀಕು, ಚಿನ್ನದ ಬೆಲೆ 7,940 ರೂ. ಆಚೆ ಈಚೆ ಇತ್ತು. ಏಪ್ರಿಲ್ 1 ಕ್ಕೆ 8,500 ರೂ.ಗೆ ಏರಿಕೆ ಆಗಿತ್ತು. ಈಗ ನೋಡಿದ್ರೆ, ಸಡನ್ ಆಗಿ 600 ರೂಪಾಯಿ ಡೌನ್ ಆಗಿದೆ. 600 ರೂಪಾಯಿ ಡೌನ್ ಆಗೋದು ಸಣ್ಣ ವಿಷಯ ಅಲ್ಲ. ಇದಕ್ಕೆಲ್ಲ ಯಾರು ಕಾರಣ ಅಂದ್ರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಾರೆ ತಜ್ಞರು.
ಟ್ರಂಪ್ ಮಾಡ್ತಿರೋ ಹಡಾವಿಡಿಯಿಂದ ಜಗತ್ತಿನಲ್ಲಿರೋ ಷೇರುಮಾರ್ಕೆಟ್ ಎಲ್ಲ ಪಲ್ಟಿ ಹೊಡೀತಿವೆ. ಸ್ಸೋ.. ಜನ ಷೇರುಪೇಟೆಯಲ್ಲಿ ಯಾಕೆ ರಿಸ್ಕು ಅಂತಾ ಹಣವನ್ನೆಲ್ಲ ಚಿನ್ನಕ್ಕೆ ಹಾಕ್ತಿದ್ದಾರೆ. ಡಿಮ್ಯಾಂಡ್ ಜಾಸ್ತಿ ಆದ್ರೆ, ಗೋಲ್ಡ್ ರೇಟ್ ಜಾಸ್ತಿ ಆಗ್ಬೇಕಲ್ವಾ ಅನ್ಬೇಡಿ. ಇದೇ ಟೈಮಲ್ಲಿ ಟ್ರಂಪ್ ಎಫೆಕ್ಟಿಂದ ಡಾಲರ್ ರೇಟ್ ಕೂಡಾ ಬಿದ್ದಿದೆ.
ಅಕ್ಷಯ ತೃತೀಯಕ್ಕೆ ಇನ್ನೊಂದ್ 20 ದಿನ ಇದೆ. ಈ ಟೈಮಲ್ಲಿ ಚಿನ್ನ ಖರೀದಿ ಮಾಡಿದ್ರೆ ಒಳ್ಳೇದು.. ಚಿನ್ನಕ್ಕೆ ಮುಂದೊಂದ್ ದಿನ ಯಾವತ್ತಿದ್ರೂ ಡಿಮ್ಯಾಂಡ್ ಬರುತ್ತೆ ಅನ್ನೋ ನಂಬಿಕೆ ಗ್ರಾಹಕರದ್ದು.
ಅಂದಹಾಗೆ ಬಸವಣ್ಣ ಸರಳ ಜೀವನವನ್ನು ಪ್ರಚಾರ ಮಾಡಿದ್ದರು. ಆದರೆ, ಅವರು ಹುಟ್ಟಿದ ದಿನ ಬಂಗಾರ ಖರೀದಿ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಯಾವ ಪುಣ್ಯಾತ್ಮ ಹೇಳಿದನೋ.. ದೇವರೇ ಬಲ್ಲ. ಬಸವ ಜಯಂತಿಯಂದು ಒಂದು ಹಿಡಿ ಅಕ್ಕಿ ಖರೀದಿಸಿ ಇಟ್ಟರೂ.. ಒಳ್ಳೆಯದಾಗುತ್ತದೆ ಎನ್ನುವುದು ಧರ್ಮಪಂಡಿತರ ವಾದ. ಪಡಿಪೋಶಿ, ಅರೆಬೆಂದ ಜ್ಯೋತಿಷಿಗಳ ವಾದವಲ್ಲ.