ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಟೈಂ ನಡೆಯುತ್ತಿದೆ. ಕೃಷ್ಣಂ ಪ್ರಣಯ ಸಖಿ ಹಿಟ್ ಆಗಿದ್ದೇ ತಡ.. ಕೈತುಂಬಾ ಚಿತ್ರಗಳು. ಹಾಗೆಂದು ಗಣೇಶ್ ಖಾಲಿ ಕುಳಿತವರೇನೂ ಅಲ್ಲ. ಆದರೆ ಒಂದು ಹಿಟ್ ಚಿತ್ರ ಕೊಡುವ ಬೂಸ್ಟ್ ಬೇರೆ. ಹೀಗಾಗಿ ಗಣೇಶ್ ಅವರ ಸಂಭಾವನೆಯೂ ಜಾಸ್ತಿಯಾಗಿದೆ. ಡಿಮ್ಯಾಂಡ್ ಕೂಡಾ ಜಾಸ್ತಿ ಆಗಿದೆ. ಗಣೇಶ್ ಅವರ ಈ ಬಾರಿಯ ಹುಟ್ಟುಹಬ್ಬದ ವಿಶೇಷವನ್ನೇ ನೋಡಿದರೆ.. ಗಣೇಶ್ ಕೈತುಂಬಾ ಚಿತ್ರಗಳಿರೋದು ಗೊತ್ತಾಗುತ್ತಿದೆ.
ಗಣೇಶ್ ಕೈಲಿರುವ ಸಿನಿಮಾಗಳ ಲಿಸ್ಟನ್ನೇ ನೋಡಿ. ಪಿನಾಕ. ಯುವರ್ ಸಿನ್ಸಿಯರ್ಲಿ ರಾಮ್ ಶೂಟಿಂಗ್ ನಡೆಯುತ್ತಿದೆ. ʻDJANGO ಕೃಷ್ಣಮೂರ್ತಿʼ ಹಾಗೂ “ಡಿ ಡಿ ಢಿಕ್ಕಿ” ಸಿನಿಮಾ ಘೋಷಣೆಯಾಗಿವೆ. ಇನ್ನೊಂದು ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ.
ಯುವರ್ ಸಿನ್ಸಿಯರ್ಲಿ ರಾಮ್ :
ಗಣೇಶ್ ಅವರಿಗೆ ಇದುವರೆಗೂ ಪೌರಾಣಿಕ ಪಾತ್ರಗಳನ್ನು ಮಾಡುವ ಚಾನ್ಸ್ ಸಿಕ್ಕಿಲ್ಲ. ಈಗಲೂ ಸಿಕ್ಕಿಲ್ಲ. ಆದರೆ.. ಇದೇ ಮೊದಲ ಬಾರಿಗೆ ಗಣೇಶ್ ಅವರಿಗೆ ಆಂಜನೇಯನಾಗಿದ್ದಾರೆ. ‘ಐರಾ ಫಿಲಮ್ಸ್’ ಹಾಗೂ ‘ದಿ ರಾಯಲ ಸ್ಟುಡಿಯೋಸ್’ ಮೂಲಕ ಸತ್ಯ ರಾಯಲು ನಿರ್ಮಾಣ ಮಾಡುತ್ತಿರುವ ಚಿತ್ರ ʻಯುವರ್ ಸಿನ್ಸಿಯರ್ಲಿ ರಾಮ್ʼ ಚಿತ್ರದಲ್ಲಿ ಗಣೇಶ್ ಅವರಿಗೆ ಆಂಜನೇಯನ ವೇಷ ಹಾಕಲಾಗಿದೆ. ಪೌರಾಣಿಕ ಪಾತ್ರವಂತೂ ಅಲ್ಲ. ಆದರೆ.. ಪೌರಾಣಿಕ ಗೆಟಪ್. ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದಲ್ಲಿ ಗಣೇಶ್ ಮತ್ತು ರಮೇಶ್ ಅರವಿಂದ್ ಅವರು ಒಟ್ಟಿಗೆ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಎಂಬ ಕಾರಣಕ್ಕೆ ನಿರೀಕ್ಷೆ ಜಾಸ್ತಿ ಇದೆ. ಗಣೇಶ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆದ ಪೋಸ್ಟರಿನಲ್ಲಿ ಸೈಕಲ್ ಹಿಂಬದಿಯಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಧರಿಸಿ ಭಜರಂಗಿ ಕುಳಿತಿದ್ದಾನೆ. ಕೈಯಲ್ಲೊಂದು ಕಾಗದ ಕೂಡ ಇದೆ. ಈ ಚಿತ್ರವನ್ನು ವಿಖ್ಯಾತ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಪಿನಾಕಾ :
ಗಣೇಶ್ ಹುಟ್ಟುಹಬ್ಬಕ್ಕೆಂದು ಪಿನಾಕಾ ಚಿತ್ರತಂಡವೂ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ. ಮಾಂತ್ರಿಕನ ಅವತಾರದಲ್ಲಿ ಕಾಣಿಸಿಕೊಂಡಿರುವ ಜಗ್ಗೇಶ್ ಅವರ ಪಿನಾಕ, ಆ ಕಾರಣಕ್ಕೇ ಗಮನ ಸೆಳೆದಿದೆ.
ಢಿ ಢಿ ಢಿಕ್ಕಿ :
“ಡಿ ಡಿ ಢಿಕ್ಕಿ” ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಇದು ರಂಜನಿ ರಾಘವನ್ ನಿರ್ದೇಶನದ ಮೊದಲ ಸಿನಿಮಾ. ಗಣೇಶ್, ಗಣೇಶ್ ಪುತ್ರ ವಿಹಾನ್, ನೆನಪಿರಲಿ ಪ್ರೇಮ್ ಒಟ್ಟಿಗೇ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ರಾಮಕೃಷ್ಣ, ಡಾ.ಆನಂದ್ ಕುಮಾರ್ ಹಾಗೂ ಜಡೇಶ್ ಕೆ ಹಂಪಿ ನಿರ್ಮಾಪಕರು.
ʻDJANGO ಕೃಷ್ಣಮೂರ್ತಿʼ :
ʻDJANGO ಕೃಷ್ಣಮೂರ್ತಿʼ ಚಿತ್ರವೂ ಸೆಟ್ಟೇರುವುದಕ್ಕೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಅರಸು ಅಂತಾರೆ ನಿರ್ದೇಶಕ. ಎಸ್ ಸಿ ರವಿ ಎಂಬುವವರು ನಿರ್ಮಾಪಕರು.
ಪ್ರೊಡಕ್ಷನ್ ನಂ. 3
ಮತ್ತೊಂದು ಕಡೆ ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳ ಖ್ಯಾತಿಯ ಚೇತನ್ ಕುಮಾರ್ ಅವರೊಂದಿಗೂ ಸಿನಿಮಾ ಮಾಡ್ತಾ ಇದ್ದಾರೆ. ಭುವನಂ ಗಗನಂ ಹಾಗೂ ಅಯೋಗ್ಯ 02 ಚಿತ್ರಗಳ ನಿರ್ಮಾಪಕ ಎಂ ಮುನೇಗೌಡ ಈ ಚಿತ್ರಕ್ಕೆ ನಿರ್ಮಾಪಕರು. ಶಿವು ಗೌಡ ಕಾರ್ಯಕಾರಿ ನಿರ್ಮಾಪಕರು. ಇದು ಅವರ ಬ್ಯಾನರ್ನ 3ನೇ ಸಿನಿಮಾ. ಹೀಗಾಗಿಯೇ ಪ್ರೊಡಕ್ಷನ್ ನಂ.3.



